ಮಿಂಚಿನ ಶತಕ ಸಿಡಿಸಿ ಬ್ರಾಡ್ಮನ್ ಕ್ಲಬ್‌ಗೆ ಸೇರಿದ ವಾರ್ನರ್
ಸಿಡ್ನಿ, ಜ.3: ಆಸ್ಟ್ರೇಲಿಯ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಪಾಕಿಸ್ತಾನ ವಿರುದ್ಧ ಮಂಗಳವಾರ ಇಲ್ಲಿ ಆರಂಭವಾದ ಮೂರನೆ ಟೆಸ್ಟ್ ಪಂದ್ಯದಲ್ಲಿ ಮಿಂಚಿನ ವೇಗದಲ್ಲಿ ಶತಕ ಬಾರಿಸಿದರು. ಈ ಮೂಲಕ ಆಸ್ಟ್ರೇಲಿಯದ ದಂತಕತೆ ಸರ್ ಡೊನಾಲ್ಡ್ ಬ್ರಾಡ್ಮನ್ ಕ್ಲಬ್‌ಗೆ ಸೇರ್ಪಡೆಯಾದರು.
ಎಡಗೈ ಬ್ಯಾಟ್ಸ್‌ಮನ್ ವಾರ್ನರ್ ಭೋಜನ ವಿರಾಮಕ್ಕೆ ಮೊದಲೇ ಕೇವಲ117 ನಿಮಿಷದಲ್ಲಿ 78 ಎಸೆತಗಳಲ್ಲಿ 18ನೆ ಟೆಸ್ಟ್ ಶತಕ ಬಾರಿಸಿದರು. ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಮೂರನೆ ಬಾರಿ ಶತಕ ಪೂರೈಸಿದರು. ವಾರ್ನರ್ 17 ಬೌಂಡರಿಗಳನ್ನು ಬಾರಿಸಿ ಮೂರಂಕೆ ತಲುಪಿದರು. ಆಸ್ಟ್ರೇಲಿಯದಲ್ಲಿ ನಡೆದ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಭೋಜನ ವಿರಾಮಕ್ಕೆ ಮೊದಲೇ ಶತಕ ಬಾರಿಸಿದ ಮೊದಲ ಬ್ಯಾಟ್ಸ್‌ಮನ್ ವಾರ್ನರ್.
ಬ್ರಾಡ್ಮನ್ 1930ರಲ್ಲಿ ಲೀಡ್ಸ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಭೋಜನ ವಿರಾಮಕ್ಕೆ ಮೊದಲೇ 105 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಈ ಪಂದ್ಯದಲ್ಲಿ ಅವರು ಒಟ್ಟು 334 ರನ್ ಗಳಿಸಿದ್ದರು. ಆಸೀಸ್‌ನ ಇನ್ನೋರ್ವ ಮಾಜಿ ಆಟಗಾರ ವಿಕ್ಟರ್ ಟ್ರಂಪರ್ ಮ್ಯಾಂಚೆಸ್ಟರ್‌ನಲ್ಲಿ 1902ರಲ್ಲಿ ನಡೆದ ಪಂದ್ಯದಲ್ಲಿ 103 ರನ್ ಗಳಿಸಿದ್ದರು.
ಪಾಕಿಸ್ತಾನ ಮಜೀದ್ ಖಾನ್(108) 1976ರಲ್ಲಿ ಕರಾಚಿಯಲ್ಲಿ ನ್ಯೂಝಿಲೆಂಡ್‌ನ ವಿರುದ್ಧದ ಟೆಸ್ಟ್‌ನಲ್ಲಿ ಭೋಜನ ವಿರಾಮಕ್ಕೆ ಮೊದಲು ಶತಕ ಬಾರಿಸಿದ್ದರು. ಮಜೀದ್ ಬಳಿಕ ಈ ಸಾಧನೆ ಮಾಡಿದ ಮೊದಲಿಗ ವಾರ್ನರ್.
‘‘ಕ್ರಿಕೆಟ್‌ನ ಶ್ರೇಷ್ಠ ಆಟಗಾರರ ಕ್ಲಬ್‌ಗೆ ಸೇರಿದ್ದು ಮಹಾಗೌರವ. ಇಂತಹ ಪ್ರದರ್ಶನವನ್ನು ಮುಂದುವರಿಸುವ ವಿಶ್ವಾಸ ನನಗಿದೆ’’ ಎಂದು ವಾರ್ನರ್ ಹೇಳಿದ್ದಾರೆ.
ವಾರ್ನರ್ ಎಸ್‌ಸಿಜಿಯಲ್ಲಿ ಎರಡನೆ ಬಾರಿ ವೇಗದ ಟೆಸ್ಟ್ ಶತಕ ಬಾರಿಸಿದರು. ವೆಸ್ಟ್‌ಇಂಡೀಸ್ ವಿರುದ್ಧ ಈ ಹಿಂದೆ ನಡೆದಿದ್ದ ಪಂದ್ಯದಲ್ಲಿ 82 ಎಸೆತಗಳಲ್ಲಿ ಶತಕ ಬಾರಿಸಿದರು.
ವಾರ್ನರ್ ಲಂಚ್ ವಿರಾಮದ ಬಳಿಕ ರಿಯಾಝ್‌ಗೆ ವಿಕೆಟ್ ಒಪ್ಪಿಸಿದರು. 95 ಎಸೆತಗಳಲ್ಲಿ 113 ರನ್ ಗಳಿಸಿದ ವಾರ್ನರ್ 17 ಬೌಂಡರಿಗಳನ್ನು ಬಾರಿಸಿದ್ದರು. ಉಪ ನಾಯಕ ವಾರ್ನರ್ 60 ಟೆಸ್ಟ್‌ಗಳಲ್ಲಿ 49.11ರ ಸರಾಸರಿಯಲ್ಲಿ 5,206 ರನ್ ಗಳಿಸಿದ್ದರು.