ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ: ಗೊಂದಲದಲ್ಲಿ ಬಿಸಿಸಿಐ
ಹೊಸದಿಲ್ಲಿ, ಜ.3: ಸೋಮವಾರ ನಡೆದ ಅತ್ಯಂತ ಮಹತ್ವದ ಬೆಳವಣಿಗೆಯೊಂದರಲ್ಲಿ ಸುಪ್ರೀಂಕೋರ್ಟ್ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಹಾಗೂ ಕಾರ್ಯದರ್ಶಿ ಅಜಯ್ ಶಿರ್ಕೆಯವರನ್ನು ವಜಾಗೊಳಿಸುವ ಮೂಲಕ ಭಾರೀ ಆಘಾತ ನೀಡಿತ್ತು. ಈ ಹಿನ್ನೆಲೆಯಲ್ಲಿ ಭಾರತ ಪ್ರವಾಸ ಕೈಗೊಳ್ಳಲಿರುವ ಇಂಗ್ಲೆಂಡ್ ತಂಡದ ವಿರುದ್ಧ ಸೀಮಿತ ಓವರ್‌ಗಳ ಸರಣಿ ಗೊಂದಲದಲ್ಲಿ ಸಿಲುಕಿದೆ ಎನ್ನಲಾಗಿದೆ.
ಬಿಸಿಸಿಐಗೆ ಸಂಬಂಧಿಸಿದ ಯಾವುದೇ ವ್ಯವಹಾರ ನಡೆಸಲು ಬಿಸಿಸಿಐನ ಉನ್ನತಾಧಿಕಾರಿಗಳಿಗೆ ಸುಪ್ರೀಂಕೋರ್ಟ್ ನಿರ್ಬಂಧ ಹೇರಿದೆ. ಇನ್ನು ಕೆಲವೇ ದಿನಗಳಲ್ಲಿ ತಲಾ 3 ಏಕದಿನ ಹಾಗೂ ಟ್ವೆಂಟಿ-20 ಪಂದ್ಯಗಳನ್ನು ಆಡಲು ಭಾರತಕ್ಕೆ ಆಗಮಿಸಲಿರುವ ಇಂಗ್ಲೆಂಡ್ ಕ್ರಿಕೆಟ್ ತಂಡವನ್ನು ಹೇಗೆ ನಿಭಾಯಿಸಬೇಕೆನ್ನುವುದು ಬಿಸಿಸಿಐಗೆ ತಲೆನೋವಾಗಿ ಪರಿಣಮಿಸಿದೆ.
ಸೋಮವಾರದ ಬೆಳವಣಿಗೆಯು ಬಿಸಿಸಿಐನಲ್ಲಿ ಅನಿಶ್ಚಿತತೆ ಹುಟ್ಟು ಹಾಕಿದೆ.
‘‘ಎಲ್ಲ ರಾಜ್ಯ ಕ್ರಿಕೆಟ್ ಸಂಸ್ಥೆಗಳು ಲೋಧಾ ಸಮಿತಿಯ ಶಿಫಾರಸುಗಳನ್ನು ಜಾರಿಗೆ ತರಲೇಬೇಕಾಗಿದೆ. ಮಂಡಳಿಯಲ್ಲಿರುವ ಆಯಾ ರಾಜ್ಯಗಳ ಹೆಚ್ಚಿನ ಹಿರಿಯ ಆಡಳಿತಾಧಿಕಾರಿಗಳು ಹುದ್ದೆಯಿಂದ ಅನರ್ಹರಾಗಿದ್ದಾರೆ. ಪಂದ್ಯಗಳನ್ನು ಸ್ಥಳೀಯ ಸಂಸ್ಥೆ ನಡೆಸುತ್ತಿರುವ ಕಾರಣ ಒಮ್ಮೆಲೆ ಯಾರು ಉಸ್ತುವಾರಿಗಳೆಂಬ ಗೊಂದಲ ಎದುರಾಗಿದೆ. ಇಡೀ ಕ್ರಿಕೆಟ್ ಮಂಡಳಿ ಗೊಂದಲದಲ್ಲಿದೆ’’ ಎಂದು ಅಧಿಕಾರಿಗಳು ತಿಳಿಸಿದರು.
ಪ್ರತಿಬಾರಿ ಬಿಸಿಸಿಐ ಕ್ರಿಕೆಟ್‌ನ್ನು ಸ್ಥಗಿತಗೊಳಿಸುವೆ ಎಂದು ಬೆದರಿಕೆ ಒಡ್ಡಿದಾಗ ಲೋಧಾ ಸಮಿತಿಯು ತಾನು ಮಾಡಿರುವ ಶಿಫಾರಸು ಕ್ರಿಕೆಟ್ ಹಾಗೂ ಅದರ ಅಭಿಮಾನಿಗಳಿಗೆ ಯಾವುದೇ ಧಕ್ಕೆಯಾಗುವುದಿಲ್ಲ ಎಂದು ಆಶ್ವಾಸನೆ ನೀಡುತ್ತಿತ್ತು.
ಈವರೆಗೆ ಎಲ್ಲವೂ ಸುಗಮವಾಗಿ ಸಾಗಿತ್ತು. ಇಂಗ್ಲೆಂಡ್ ಕ್ರಿಕೆಟ್ ತಂಡ ಜ.10 ಹಾಗೂ 12ರಂದು ಮುಂಬೈನಲ್ಲಿ ಭಾರತ ಎ ವಿರುದ್ಧ ಅಭ್ಯಾಸ ಪಂದ್ಯವನ್ನು ಆಡಲಿದೆ. ಮೊದಲ ಏಕದಿನ ಜ.15 ರಂದು ಪುಣೆಯಲ್ಲಿ ನಡೆಯುವುದು. ಆದರೆ,ಪುಣೆ ಹಾಗೂ ಮುಂಬೈ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾದ ಶರದ್ ಪವಾರ್ ಹಾಗೂ ಶಿರ್ಕೆ ಮುಖ್ಯಸ್ಥರ ಸ್ಥಾನದಲ್ಲಿಲ್ಲ. ಸಂಸ್ಥೆಯ ಹೆಚ್ಚಿನ ಅಧಿಕಾರಿಗಳು ಸಹಿ ಮಾಡುವ ಅಧಿಕಾರವನ್ನು ಕಳೆದುಕೊಂಡಿದ್ದಾರೆ. ಸಹಿ ಅಧಿಕಾರ ಅಂತಾರಾಷ್ಟ್ರೀಯ ಪಂದ್ಯಗಳ ಆತಿಥ್ಯಕ್ಕೆ ಅತ್ಯಂತ ಮುಖ್ಯ. ನಾವು ಇದೀಗ ಪ್ರತಿಯೊಂದನ್ನು ಮತ್ತೊಮ್ಮೆ ವ್ಯವಸ್ಥೆಗೊಳಿಸಬೇಕಾಗಿದ್ದು, ಏನಾಗುತ್ತದೆಂದು ನೋಡಬೇಕು ಎಂದು ಅಧಿಕಾರಿಗಳು ಹೇಳಿದ್ದಾರೆ.