ನಿಜ ಜೀವನದಲ್ಲೂ ಹೀರೋವಾದ ಒಲಿಂಪಿಯನ್ ಕೃಷ್ಣಾ ಪೂನಿಯಾ
ಜೈಪುರ,ಜ.3: ಭಾರತೀಯ ಒಲಿಂಪಿಯನ್ ಕೃಷ್ಣಾ ಪೂನಿಯಾ ನಿಜ ಜೀವನದಲ್ಲೂ ಹೀರೋವಾಗಿ ಹೊರಹೊಮ್ಮಿದ್ದಾರೆ.
ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಪೂನಿಯಾ ಅವರು ರಾಜಸ್ಥಾನದ ಚುರು ಜಿಲ್ಲೆಯ ರಾಜ್‌ಗಢದಲ್ಲಿ ಪೋಲಿ ಹುಡುಗರ ಗುಂಪಿನಿಂದ ಕಿರುಕುಳಕ್ಕೆ ಒಳಗಾಗಿದ್ದ ಮೂವರು ಹುಡುಗಿಯರನ್ನು ರಕ್ಷಿಸಿ ಸಾಹಸ ಮೆರೆದಿದ್ದಾರೆ.
ಜ.1 ರಂದು ನಡೆದ ಸಂಪೂರ್ಣ ಘಟನೆಯ ಬಗ್ಗೆ ಪೂನಿಯಾರ ಪತಿ ವೀರೇಂದ್ರ ಪೂನಿಯಾ ಹೀಗೆ ವಿವರಿಸಿದ್ದಾರೆ...
‘‘ಚುರು ಜಿಲ್ಲೆಯಲ್ಲಿದ್ದ ಪೂನಿಯಾ ತನ್ನ ಕಾರಿನಲ್ಲಿ ಸಾದುಲ್‌ಪುರ ಪ್ರದೇಶದತ್ತ ತೆರಳುತ್ತಿದ್ದರು. ಈ ವೇಳೆ ರೈಲ್ವೆಯ ಕ್ರಾಸಿಂಗ್ ಬಳಿ ಹುಡುಗಿಯರಿಗೆ ಹುಡುಗರ ಗುಂಪು ಕಿರುಕುಳ ನೀಡುತ್ತಿರುವುದನ್ನು ನೋಡಿದ್ದಾರೆ. ಕಾರಿನಿಂದ ಇಳಿದು ಅಳುತ್ತಿದ್ದ ಹುಡುಗಿಯರ ಬಳಿ ತೆರಳಿದ ಪೂನಿಯಾ ಅವರೊಂದಿಗೆ ಮಾತನಾಡಿದ್ದಾರೆ. ಹುಡುಗರು ತಮ್ಮನ್ನು ರೇಗಿಸುತ್ತಾ, ಕಿರುಕುಳ ಹಾಗೂ ಹಲ್ಲೆಯನ್ನು ನಡೆಸಿದ್ದಾರೆೆಂದು ಬಾಲಕಿಯರು ಪೂನಿಯಾ ಬಳಿ ದೂರಿದ್ದಾರೆ. ಬಾಲಕಿಯರು ಪೂನಿಯಾ ಬಳಿ ದೂರು ನೀಡುತ್ತಿರುವುದನ್ನು ನೋಡಿದ ಪೋಲಿ ಹುಡುಗರು ಸ್ಥಳದಿಂದ ಕಾಲ್ಕಿತ್ತರು.
ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಡಿಸ್ಕಸ್ ಎಸೆತದಲ್ಲಿ ಚಿನ್ನದ ಪದಕ ಜಯಿಸಿದ್ದ ಪೂನಿಯಾ ಓಡುತ್ತಿದ್ದ ಹುಡುಗರನ್ನು 50 ಮೀ.ದೂರ ಬೆನ್ನಟ್ಟಿದ್ದಲ್ಲದೆ ಒಬ್ಬ ಹುಡುಗನನ್ನು ಹಿಡಿದರು. ಇತರ ಇಬ್ಬರು ಹುಡುಗರು ಪರಾರಿಯಾಗಿದ್ದರು.
ಅದಾಗಲೇ ಸುಮಾರು 200-300ರಷ್ಟು ಜನರು ಜಮಾಯಿಸಿದ್ದರು. ಪರಿಸ್ಥಿತಿ ಕೈ ಮೀರಬಹುದು ಎಂದು ಯೋಚಿಸಿದ ಪೂನಿಯಾ ತಕ್ಷಣವೇ ಪೊಲೀಸ್‌ಗೆ ಮಾಹಿತಿ ನೀಡಿದರು. ಕಿರುಕುಳ ಪೀಡಿತ ಹುಡುಗಿಯರನ್ನು ಸುರಕ್ಷಿತವಾಗಿ ಮನೆಗೆ ಕಳುಹಿಸಿಕೊಟ್ಟರು. ಹುಡುಗಿಯರ ಸಹೋದರರು ಪ್ರಕರಣದ ಬಗ್ಗೆ ಎಫ್‌ಐಆರ್ ದಾಖಲಿಸಿದ್ದಾರೆ.