×
Ad

ಅನುರಾಗ್ ಠಾಕೂರ್ ಸ್ಥಾನಕ್ಕೆ ಸೌರವ್ ಗಂಗುಲಿ?

Update: 2017-01-03 17:19 IST

ಹೊಸದಿಲ್ಲಿ, ಜ.3: ಲೋಧಾ ಸಮಿತಿಯ ಶಿಫಾರಸುಗಳನ್ನು ಜಾರಿ ಮಾಡಲು ವಿಳಂಬ ಧೋರಣೆ ತಳೆದಿದ್ದಕ್ಕಾಗಿ ಸುಪ್ರೀಂಕೋರ್ಟ್‌ನಿಂದ ಸೋಮವಾರ ಬಿಸಿಸಿಐ ಅಧ್ಯಕ್ಷ ಹುದ್ದೆಯಿಂದ ವಜಾಗೊಳಿಸಲ್ಪಟ್ಟ ಅನುರಾಗ್ ಠಾಕೂರ್ ಬದಲಿಗೆ ಭಾರತದ ಮಾಜಿ ನಾಯಕ ಸೌರವ್ ಗಂಗುಲಿ ಆಯ್ಕೆಯಾಗಲಿದ್ದಾರೆಂದು ಮೂಲಗಳು ತಿಳಿಸಿವೆ.

 ಬಿಸಿಸಿಐ-ಲೋಧಾ ಸಮಿತಿಯ ಪ್ರಕರಣದ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ಟಿಎಸ್ ಠಾಕೂರ್ ಅವರಿದ್ದ ನ್ಯಾಯಪೀಠ ಬಿಸಿಸಿಐ ನೇತೃತ್ವವನ್ನು ಯಾರಿಗೆ ವಹಿಸಬೇಕು ಎಂಬ ಬಗ್ಗೆ ಸಲಹೆ ನೀಡುವಂತೆ ಹಿರಿಯ ನ್ಯಾಯವಾದಿಗಳಾದ ಪಾಲಿ ನಾರಿಮನ್ ಹಾಗೂ ಗೋಪಾಲ್ ಎಸ್.ಸುಬ್ರಹ್ಮಣ್ಯಂಗೆ ಸೂಚಿಸಿದೆ. ನಾರಿಮನ್ ಹಾಗೂ ಸುಬ್ರಹ್ಮಣ್ಯಂ ಅಮಿಕಸ್ ಕ್ಯೂರಿಗಳಾಗಿ ನೇಮಕಗೊಂಡಿದ್ದು ಇವರು ಇನ್ನೆರಡು ವಾರಗಳಲ್ಲಿ ತಮ್ಮ ಕರ್ತವ್ಯ ಪೂರ್ಣಗೊಳಿಸುವ ನಿರೀಕ್ಷೆಯಿದೆ. ಸುಪ್ರೀಂಕೋರ್ಟ್ ನ.19 ರಂದು ಮುಂದಿನ ವಿಚಾರಣೆ ನಡೆಸಲಿದ್ದು, ಅಂದು ಹೊಸ ಅಧ್ಯಕ್ಷರು ಯಾರು ಎಂಬ ಬಗ್ಗೆ ಪ್ರಕಟವಾಗುವ ಸಾಧ್ಯತೆಯಿದೆ.

ಬಿಸಿಸಿಐಗೆ ಹೆಚ್ಚು ಆದಾಯ ತಂದುಕೊಡುವ ಐಪಿಎಲ್‌ನ ಟಿವಿ ಹಕ್ಕು ಸೇರಿದಂತೆ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳಲು ಬಾಕಿಯಿರುವ ಕಾರಣ ಬಿಸಿಸಿಐಗೆ ನೂತನ ಅಧ್ಯಕ್ಷರನ್ನು ಆದಷ್ಟು ಬೇಗನೆ ನೇಮಕ ಮಾಡುವ ಅಗತ್ಯವಿದೆ.

ಠಾಕೂರ್‌ರಿಂದ ತೆರವಾಗಿರುವ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಭಾರತದ ಮಾಜಿ ನಾಯಕ ಹಾಗೂ ಬಂಗಾಳ ಕ್ರಿಕೆಟ್ ಸಂಸ್ಥೆ(ಸಿಎಬಿ) ಮುಖ್ಯಸ್ಥ ಸೌರವ್ ಗಂಗುಲಿ ಹೆಸರು ಸುಳಿದಾಡುತ್ತಿದೆ. ಸಿಎಬಿಯಲ್ಲಿ ಆಡಳಿತದ ಅನುಭವ ಪಡೆದಿರುವ ಗಂಗುಲಿ ಸೂಕ್ತ ಅಭ್ಯರ್ಥಿಯಾಗಿ ಪರಿಗಣಿಸಲ್ಪಟ್ಟಿದ್ದಾರೆ. ಭಾರತದಲ್ಲಿ ಹಾಗೂ ಅಂತಾರಾಷ್ಟ್ರಿಯ ಮಟ್ಟದ ಕ್ರಿಕೆಟ್ ವಲಯದಲ್ಲಿ ಅವರಿಗೆ ತುಂಬಾ ಗೌರವವಿದೆ.

ಗಂಗುಲಿ ಬಿಸಿಸಿಐನ ಉಪಾಧ್ಯಕ್ಷರಲ್ಲ. ಗಂಗುಲಿಗೆ ಸಿಎಬಿಯಲ್ಲಿ ಮೂರು ವರ್ಷಗಳ ಅಧಿಕಾರದ ಅವಧಿ ಇನ್ನೂ ಪೂರ್ಣಗೊಳಿಸಿಲ್ಲ. ಹೀಗಾಗಿ ಅವರು ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಅರ್ಹರಲ್ಲ ಎಂದು ಮೂಲವೊಂದು ಹೇಳಿದೆ.

ಇತರ ಕ್ರಿಕೆಟ್ ಆಡಳಿತಗಾರರ ನೆರವಿನಿಂದ ಗಂಗುಲಿಗೆ ಬಿಸಿಸಿಐಯನ್ನು ಮುನ್ನಡೆಸುವ ಜವಾಬ್ದಾರಿ ನೀಡಬೇಕೆಂಬ ಸಲಹೆ ಕೇಳಿಬರುತ್ತಿದೆ.

ಇದೇ ವೇಳೆ ಬಿಸಿಸಿಐ ಹಾಲಿ ಐವರು ಉಪಾಧ್ಯಕ್ಷರ ಪೈಕಿ ಒಬ್ಬರನ್ನು ಅಧ್ಯಕ್ಷ ಸ್ಥಾನಕ್ಕೆ ನಾಮನಿರ್ದೇಶನ ಮಾಡಬಹುದು. ದಿಲ್ಲಿ ಹಾಗೂ ಜಿಲ್ಲಾ ಕ್ರಿಕೆಟ್ ಸಂಸ್ಥೆ(ಡಿಡಿಸಿಎ) ಅಧಿಕಾರಿ ಕೇಂದ್ರ ವಲಯದ ಹಿರಿಯ ಅಧಿಕಾರಿ ಸಿ.ಕೆ ಖನ್ನಾ ಬಿಸಿಸಿಐನ ಹಿರಿಯ ಉಪಾಧ್ಯಕ್ಷರಾಗಿದ್ದಾರೆ. ಖನ್ನಾರಲ್ಲದೆ ಅಸ್ಸಾಂ ಕ್ರಿಕೆಟ್ ಸಂಸ್ಥೆಯ ಗೌತಮ್ ರಾಯ್, ಆಂಧ್ರ ಕ್ರಿಕೆಟ್ ಸಂಸ್ಥೆಯ ಗಂಗರಾಜು ಅವರಿದ್ದಾರೆ.

ಆದರೆ, ಖನ್ನಾ, ರಾಯ್ ಹಾಗೂ ಗಂಗರಾಜು ಕಳೆದ 10 ವರ್ಷಗಳಿಂದ ಕ್ರಮವಾಗಿ ದಿಲ್ಲಿ,ಅಸ್ಸಾಂ ಹಾಗೂ ಆಂಧ್ರ ರಾಜ್ಯದ ಕ್ರಿಕೆಟ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಲೋಧಾ ಸಮಿತಿ ಶಿಫಾರಸಿನ ಪ್ರಕಾರ ಯಾವುದೇ ರಾಜ್ಯ ಕ್ರಿಕೆಟ್ ಮಂಡಳಿಯಲ್ಲಿ 9 ವರ್ಷಕ್ಕಿಂತ ಹೆಚ್ಚು ಕಾಲ ಅಧಿಕಾರದಲ್ಲಿರಬಾರದು.

ಗಂಗುಲಿ ಅವರನ್ನು ಬಿಸಿಸಿಐ ಅಧ್ಯಕ್ಷರಾಗಿ ಆಯ್ಕೆ ಮಾಡಬೇಕು ಎಂದು ಒತ್ತಾಯಿಸಿರುವ ಭಾರತದ ಮಾಜಿ ನಾಯಕ ಸುನೀಲ್ ಗವಾಸ್ಕರ್‌ ‘‘ಉನ್ನತ ಹುದ್ದೆಯನ್ನು ವಹಿಸಿಕೊಳ್ಳಲು ಬಿಸಿಸಿಐಯಲ್ಲಿ ಅರ್ಹ ಅಭ್ಯರ್ಥಿಗಳಿದ್ದಾರೆ. ನನ್ನ ಮನಸ್ಸಿನಲ್ಲಿರುವ ಒಂದು ಹೆಸರೆಂದರೆ ಸೌರವ್ ಗಂಗುಲಿ'' ಎಂದು ಎನ್‌ಡಿಟಿವಿಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News