×
Ad

ಮೂರನೆ ಟೆಸ್ಟ್: ದಾಖಲೆ ಮೊತ್ತದತ್ತ ಆಸ್ಟ್ರೇಲಿಯ

Update: 2017-01-03 23:07 IST

ಸಿಡ್ನಿ, ಜ.3: ಟ್ವೆಂಟಿ-20 ಶೈಲಿಯಲ್ಲಿ ಬ್ಯಾಟಿಂಗ್ ಮಾಡಿದ ವಾರ್ನರ್(113 ರನ್, 95 ಎಸೆತ, 17 ಬೌಂಡರಿ) ಹಾಗೂ ಮ್ಯಾಟ್ ರೆನ್‌ಶಾ ಚೊಚ್ಚಲ ಶತಕದ (167)ಬೆಂಬಲದಿಂದ ಆಸ್ಟ್ರೇಲಿಯ ತಂಡ ಪಾಕಿಸ್ತಾನ ವಿರುದ್ಧದ ಮೂರನೆ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 365 ರನ್ ಕಲೆ ಹಾಕಿದೆ.

ಕಳೆದ ವಾರ ಮೆಲ್ಬೋರ್ನ್‌ನಲ್ಲಿ ಮೂರು ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ಜಯಿಸಿದ್ದ ಆಸ್ಟ್ರೇಲಿಯದ ನಾಯಕ ಸ್ಟೀವನ್ ಸ್ಮಿತ್ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ನಾಯಕನ ನಿರ್ಧಾರವನ್ನು ಸಮರ್ಥಿಸಿದ ಆರಂಭಿಕ ಆಟಗಾರರಾದ ರೆನ್‌ಶಾ ಹಾಗೂ ವಾರ್ನರ್ ಮೊದಲ ವಿಕೆಟ್‌ಗೆ 151 ರನ್ ಗಳಿಸಿ ಭರ್ಜರಿ ಆರಂಭ ನೀಡಿದರು.

ತವರು ಮೈದಾನದಲ್ಲಿ ಆಡಿದ ವಾರ್ನರ್ 118 ನಿಮಿಷಗಳಲ್ಲಿ ಕೇವಲ 78 ಎಸೆತಗಳನ್ನು ಎದುರಿಸಿ ಶತಕವನ್ನು ಪೂರೈಸಿದರು. ಮೊದಲ ಟೆಸ್ಟ್‌ನ ಮೊದಲ ದಿನದ ಲಂಚ್ ವಿರಾಮಕ್ಕೆ ಮೊದಲು ಶತಕ ಬಾರಿಸಿದ ವಿಶ್ವದ ಐದನೆ ಬ್ಯಾಟ್ಸ್‌ಮನ್ ಎಂಬ ಕೀರ್ತಿಗೂ ಭಾಜನರಾದರು.

ವಾರ್ನರ್ ಅಬ್ಬರದ ಬ್ಯಾಟಿಂಗ್‌ನ ನಡುವೆ 20ರ ಹರೆಯದ ರೆನ್‌ಶಾ 201 ಎಸೆತಗಳಲ್ಲಿ ಚೊಚ್ಚಲ ಶತಕವನ್ನು ಪೂರೈಸಿದರು. ದಿನದಾಟದಂತ್ಯಕ್ಕೆ ಅಜೇಯ 167 ರನ್ ಗಳಿಸಿರುವ ರೆನ್‌ಶಾ ಅವರು ಹ್ಯಾಂಡ್ಸ್‌ಕಾಂಬ್(ಅಜೇಯ 40) ಅವರೊಂದಿಗೆ 4ನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 121 ರನ್ ಸೇರಿಸಿದರು.

ಉಸ್ಮಾನ್ ಖ್ವಾಜಾ(13), ವಾರ್ನರ್ ಹಾಗೂ ಆಸೀಸ್ ನಾಯಕ ಸ್ಮಿತ್(24) ಹೆಚ್ಚು ಹೊತ್ತು ನಿಲ್ಲಲಿಲ್ಲ. ಮೊದಲ ದಿನದಾಟದಲ್ಲಿ ಆರಂಭಿಕ ಆಟಗಾರರಾದ ವಾರ್ನರ್ ಹಾಗೂ ರೆನ್‌ಶಾ ಆಕರ್ಷಕ ಶತಕ ಬಾರಿಸಿ ಪಾಕ್ ಬೌಲರ್‌ಗಳ ಬೆವರಿಳಿಸಿದರು.

ಪಾಕಿಸ್ತಾನದ ಪರ ವೇಗದ ಬೌಲರ್ ವಹಾಬ್ ರಿಯಾಝ್(2-63) ಎರಡು ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್

ಆಸ್ಟ್ರೇಲಿಯ ಮೊದಲ ಇನಿಂಗ್ಸ್: 88 ಓವರ್‌ಗಳಲ್ಲಿ 365/3

(ರೆನ್‌ಶಾ ಅಜೇಯ 167, ವಾರ್ನರ್ 113, ಹ್ಯಾಂಡ್ಸ್‌ಕಾಂಬ್ ಅಜೇಯ 40, ರಿಯಾಝ್ 2-63)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News