ರಣಜಿ ಟ್ರೋಫಿ: ತಮಿಳುನಾಡು ವಿರುದ್ಧ ಮುಂಬೈ ಮೇಲುಗೈ
ರಾಜ್‌ಕೋಟ್,ಜ.3: ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಆದಿತ್ಯ ತಾರೆ(83) ಹಾಗೂ ಅಭಿಷೇಕ್ ನಾಯರ್(58) ಅರ್ಧಶತಕಗಳ ಕೊಡುಗೆಯ ನೆರವಿನಿಂದ ಹಾಲಿ ಚಾಂಪಿಯನ್ ಮುಂಬೈ ತಂಡ ತಮಿಳುನಾಡು ವಿರುದ್ಧದ ರಣಜಿ ಟ್ರೋಫಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಇನಿಂಗ್ಸ್ ಮುನ್ನಡೆ ಸಾಧಿಸಿದೆ.
ಮೂರನೆ ದಿನದಾಟದಂತ್ಯಕ್ಕೆ ಮುಂಬೈ ತಂಡ ಮೊದಲ ಇನಿಂಗ್ಸ್‌ನಲ್ಲಿ 406 ರನ್‌ಗೆ ಆಲೌಟಾಗಿದೆ. 101 ರನ್ ಮುನ್ನಡೆ ಪಡೆದಿದೆ. ತಾರೆ ಹಾಗೂ ನಾಯರ್ ಆರನೆ ವಿಕೆಟ್‌ಗೆ 121 ರನ್ ಜೊತೆಯಾಟ ನಡೆಸಿ ತಂಡಕ್ಕೆ ಮುನ್ನಡೆ ತಂದರು.
ನಾಯಕ ತಾರೆ 181ಎಸೆತಗಳಲ್ಲಿ 9 ಬೌಂಡರಿಗಳಿರುವ 83 ರನ್ ಗಳಿಸಿದರು. ಆಲ್‌ರೌಂಡರ್ ನಾಯರ್ 143 ಎಸೆತಗಳಲ್ಲಿ 9 ಬೌಂಡರಿಗಳ ಸಹಿತ 58 ರನ್ ಗಳಿಸಿದರು. ಈ ಇಬ್ಬರು 6ನೆ ವಿಕೆಟ್‌ಗೆ ನಿರ್ಣಾಯಕ ಜೊತೆಯಾಟ ನಡೆಸಿ ತಂಡದ ಸ್ಕೋರನ್ನು 400ರ ಗಡಿ ದಾಟಿಸಿದರು.
4 ವಿಕೆಟ್ ನಷ್ಟಕ್ಕೆ 171 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಮುಂಬೈ ತಂಡ ಶ್ರೇಯಸ್ ಐಯ್ಯರ್(36) ಬೇಗನೆ ಔಟಾದರು. ಆಗ ಮುಂಬೈ ಸ್ಕೋರ್ 5 ವಿಕೆಟ್‌ಗೆ 190. 6ನೆ ವಿಕೆಟ್‌ಗೆ ಜೊತೆಯಾದ ತಾರೆ-ನಾಯರ್ ಜೋಡಿ ತಮಿಳುನಾಡಿಗೆ ಮೇಲುಗೈ ನಿರಾಕರಿಸಿತು.
ಎಡಗೈ ದಾಂಡಿಗ ನಾಯರ್ ಮತ್ತೊಮ್ಮೆ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ಮುಂಬೈ 311 ರನ್ ಗಳಿಸಿದಾಗ ನಾಯರ್ ಔಟಾದರು. ನಾಯರ್ ಔಟಾದ ಬೆನ್ನಿಗೆ ತಾರೆ ವಿಕೆಟ್ ಒಪ್ಪಿಸಿದರು. ಬಲ್ವಿಂದರ್ ಸಿಂಗ್ ಸಂಧು(32) ಹಾಗೂ ಶಾರ್ದೂಲ್ ಠಾಕೂರ್(52) 8ನೆ ವಿಕೆಟ್‌ಗೆ ನಿರ್ಣಾಯಕ 44 ರನ್ ಸೇರಿಸಿ ತಂಡವನ್ನು ಆಧರಿಸಿದರು. 126 ಎಸೆತಗಳಲ್ಲಿ 5 ಬೌಂಡರಿ,1 ಸಿಕ್ಸರ್ ಬಾರಿಸಿದ ಠಾಕೂರ್ ತಮಿಳುನಾಡು ಬೌಲರ್‌ಗಳಿಗೆ ನಿರಾಸೆಗೊಳಿಸಿದರು.
ಸಂಕ್ಷಿಪ್ತ ಸ್ಕೋರ್
ತಮಿಳುನಾಡು ಪ್ರಥಮ ಇನಿಂಗ್ಸ್: 305 ರನ್‌ಗೆ ಆಲೌಟ್
ಮುಂಬೈ ಪ್ರಥಮ ಇನಿಂಗ್ಸ್: 406
(ಆದಿತ್ಯ ತಾರೆ 83, ಸೂರ್ಯಕುಮಾರ್ ಯಾದವ್ 73, ನಾಯರ್ 58, ಠಾಕೂರ್ 52, ವೇಲಾ 48, ಐಯ್ಯರ್ ಅಜೇಯ 24, ವಿ. ಶಂಕರ್ 4-59, ಅಪರಾಜಿತ್ 2-35)
ಜಗ್ಗಿ ಶತಕ, ಜಾರ್ಖಂಡ್ 408
ಮುನ್ನಡೆಯ ವಿಶ್ವಾಸದಲ್ಲಿ ಗುಜರಾತ್ ನಾಗ್ಪುರ, ಜ.3: ರಣಜಿ ಟ್ರೋಫಿಯ ಎರಡನೆ ಸೆಮಿ ಫೈನಲ್ ಪಂದ್ಯದಲ್ಲಿ ಗುಜರಾತ್ ಹಾಗೂ ಜಾರ್ಖಂಡ್ ತಂಡ ಗೆಲುವಿಗಾಗಿ ಹೋರಾಟ ಮುಂದುವರಿಸಿವೆ. ಮೂರನೆ ದಿನದಾಟದಲ್ಲಿ ಉಭಯ ತಂಡಗಳು ಸಮಾನ ಗೌರವಕ್ಕೆ ಪಾತ್ರವಾದವು.
3ನೆ ದಿನದಾಟದಂತ್ಯಕ್ಕೆ 82 ರನ್ ಮುನ್ನಡೆಯಲ್ಲಿರುವ ಗುಜರಾತ್ 2ನೆ ಇನಿಂಗ್ಸ್‌ನಲ್ಲಿ 4 ವಿಕೆಟ್ ನಷ್ಟಕ್ಕೆ 100 ರನ್ ಗಳಿಸಿದೆ. ಜನೇಜ ಹಾಗೂ ಪಟೇಲ್ ಕ್ರೀಸ್‌ನಲ್ಲಿದ್ದಾರೆ. ದಿನದಾಟದಂತ್ಯಕ್ಕೆ ಫಾರ್ಮ್‌ನಲ್ಲಿರುವ ಆಟಗಾರ ಸಮಿತ್ ಗೊಹೆಲ್ ವಿಕೆಟ್ ಕಬಳಿಸಿರುವ ಸ್ಪಿನ್ನರ್ ನದೀಮ್(3-36) ಜಾರ್ಖಂಡ್ ತಿರುಗೇಟು ನೀಡಲು ನೆರವಾಗಿದ್ದಾರೆ. ಎರಡನೆ ಇನಿಂಗ್ಸ್‌ನಲ್ಲಿ ಗುಜರಾತ್‌ನ ಆರಂಭ ಉತ್ತಮವಾಗಿರಲಿಲ್ಲ. ಮೊದಲ ಇನಿಂಗ್ಸ್‌ನಲ್ಲಿ ಶತಕ ಬಾರಿಸಿದ್ದ ಪ್ರಿಯಾಂಕ್ ಪಾಂಚಾಲ್(1) ಬೇಗನೆ ಔಟಾದರು.
ಸಮಿತ್ ಗೊಹಿಲ್(49) ಹಾಗೂ ಭಾರ್ಗವ್(44) 2ನೆ ವಿಕೆಟ್‌ಗೆ 69 ರನ್ ಸೇರಿಸಿ ತಂಡವನ್ನು ಆಧರಿಸಿದರು. ಈ ಜೋಡಿಯನ್ನು ನದೀಮ್ ಬೇರ್ಪಡಿಸಿದರು.
ಇಶಾಂತ್ ಜಗ್ಗಿ ಶತಕ: ಇದಕ್ಕೆ ಮೊದಲು 5 ವಿಕೆಟ್ ನಷ್ಟಕ್ಕೆ 214 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಜಾರ್ಖಂಡ್ ಇಶಾಂತ್ ಜಗ್ಗಿ ಆಕರ್ಷಕ ಶತಕ(129 ರನ್) ನೆರವಿನಿಂದ 408 ರನ್ ಗಳಿಸಿ 18 ರನ್ ಮುನ್ನಡೆ ಸಾಧಿಸಿತು.
2ನೆ ದಿನದಾಟದಲ್ಲಿ 3 ವಿಕೆಟ್ ಪಡೆದಿದ್ದ ವೇಗಿ ಆರ್‌ಪಿ ಸಿಂಗ್ ಮಂಗಳವಾರ ಜಗ್ಗಿ, ನದೀಮ್ ಹಾಗೂ ಅಜಯ್ ಯಾದವ್ ವಿಕೆಟ್ ಉರುಳಿಸಿ 6 ವಿಕೆಟ್ ಗೊಂಚಲು ಪಡೆದರು.
ರಾಹುಲ್‌ರೊಂದಿಗೆ 6ನೆ ವಿಕೆಟ್‌ಗೆ 69 ರನ್ ಹಾಗೂ ಕೌಶಲ್ ಸಿಂಗ್(53) ಅವರೊಂದಿಗೆ 8ನೆ ವಿಕೆಟ್‌ಗೆ 98 ರನ್ ಜೊತೆಯಾಟದಲ್ಲಿ ಪಾಲ್ಗೊಂಡ ಜಗ್ಗಿ ತಂಡದ ಸ್ಕೋರನ್ನು 400ರ ಗಡಿ ದಾಟಲು ನೆರವಾದರು.
ಆರ್‌ಪಿ ಸಿಂಗ್‌ಗೆ ವಿಕೆಟ್ ಒಪ್ಪಿಸಿದ ಜಗ್ಗಿ 182 ಎಸೆತಗಳಲ್ಲಿ 15 ಬೌಂಡರಿ, 1 ಸಿಕ್ಸರ್ ಬಾರಿಸಿದರು.
ಸಂಕ್ಷಿಪ್ತ ಸ್ಕೋರ್
ಗುಜರಾತ್ ಮೊದಲ ಇನಿಂಗ್ಸ್: 390
ಜಾರ್ಖಂಡ್ ಮೊದಲ ಇನಿಂಗ್ಸ್: 408(ಇಶಾಂಕ್ ಜಗ್ಗಿ 129, ಕುಶಾಲ್ ಸಿಂಗ್ 53, ಇಶಾನ್ ಕಿಶನ್ 61, ಆರ್‌ಪಿ ಸಿಂಗ್ 6-90)
ಗುಜರಾತ್ ಎರಡನೆ ಇನಿಂಗ್ಸ್: 100/4
(ಸಮಿತ್ ಗೊಹಿಲ್ 49, ಭಾರ್ಗವ್ 44, ನದೀಮ್ 3-36)