×
Ad

ರಣಜಿ ಟ್ರೋಫಿ: ಗುಜರಾತ್ ಫೈನಲ್‌ಗೆ ಲಗ್ಗೆ

Update: 2017-01-04 23:18 IST

 ನಾಗ್ಪುರ, ಜ.4: ಚಿರಾಗ್ ಗಾಂಧಿ ಹಾಗೂ ಮನ್‌ಪ್ರಿತ್ ಜುನೇಜ ಬಾರಿಸಿದ ಆಕರ್ಷಕ ಅರ್ಧಶತಕ, ಜಸ್‌ಪ್ರೀತ್ ಬುಮ್ರಾ ಸಂಘಟಿಸಿದ ಅಮೋಘ ಬೌಲಿಂಗ್‌ನ ಬೆಂಬಲದಿಂದ ಗುಜರಾತ್ ತಂಡ 2016-17ರ ಋತುವಿನ ರಣಜಿ ಟ್ರೋಫಿ ಟೂರ್ನಿಯಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದೆ.

ನಾಲ್ಕನೆ ದಿನವಾದ ಬುಧವಾರ ಗೆಲ್ಲಲು 235 ರನ್ ಗುರಿ ಪಡೆದಿದ್ದ ಜಾರ್ಖಂಡ್ ತಂಡವನ್ನು ಕೇವಲ 111 ರನ್‌ಗೆ ಆಲೌಟ್ ಮಾಡಿದ ಗುಜರಾತ್ 123 ರನ್‌ಗಳ ಅಂತರದಿಂದ ಜಯ ಸಾಧಿಸಿ ಪ್ರಶಸ್ತಿ ಸುತ್ತಿಗೆ ತೇರ್ಗಡೆಯಾದ ಮೊದಲ ತಂಡ ಎನಿಸಿಕೊಂಡಿತು.

ಜ.10 ರಿಂದ ಇಂದೋರ್‌ನಲ್ಲಿ ಆರಂಭವಾಗಲಿರುವ ಫೈನಲ್‌ನಲ್ಲಿ ಮತ್ತೊಂದು ಸೆಮಿಫೈನಲ್‌ನಲ್ಲಿ ಗೆಲ್ಲುವ ಮುಂಬೈ ಅಥವಾ ತಮಿಳುನಾಡು ತಂಡವನ್ನು ಎದುರಿಸಲಿದೆ.

83 ವರ್ಷಗಳ ಇತಿಹಾಸವಿರುವ ರಣಜಿ ಟ್ರೋಫಿಯಲ್ಲಿ ಗುಜರಾತ್ 2ನೆ ಬಾರಿ ಫೈನಲ್‌ಗೆ ಪ್ರವೇಶಿಸಿದೆ. 1950-51ರಲ್ಲಿ ಗುಜರಾತ್ ಕೊನೆಯ ಬಾರಿ ಫೈನಲ್‌ಗೆ ತಲುಪಿತ್ತು. ಪ್ರಸ್ತುತ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 18 ರನ್ ಹಿನ್ನಡೆ ಅನುಭವಿಸಿದ ಹೊರತಾಗಿಯೂ ಆಟಗಾರರ ಸಂಘಟಿತ ಪ್ರಯತ್ನದಿಂದ ಪ್ರಶಸ್ತಿ ಸುತ್ತಿಗೆ ತೇರ್ಗಡೆಯಾಗಿದೆ.

4 ವಿಕೆಟ್‌ಗಳ ನಷ್ಟಕ್ಕೆ 100 ರನ್‌ನಿಂದ ದ್ವಿತೀಯ ಇನಿಂಗ್ಸ್ ಮುಂದುವರಿಸಿದ ಗುಜರಾತ್ ತಂಡ 252 ರನ್‌ಗೆ ಆಲೌಟಾಯಿತು. ಹಾರ್ದಿಕ್ ಪಟೇಲ್ ಹಾಗೂರಾಜುಲ್ ಭಟ್ಟಿ ಅಲ್ಪ ಮೊತ್ತಕ್ಕೆ ಔಟಾದರು. ಆಗ ಗುಜರಾತ್ 137 ರನ್‌ಗೆ 6 ವಿಕೆಟ್ ಕಳೆದುಕೊಂಡಿತ್ತು.

ಚಿರಾಗ್ ಗಾಂಧಿ(51ರನ್) ಅವರೊಂದಿಗೆ 7ನೆ ವಿಕೆಟ್‌ಗೆ ನಿರ್ಣಾಯಕ 80 ರನ್ ಸೇರಿಸಿದ ಜುನೇಜ(81 ರನ್, 125 ಎಸೆತ, 12 ಬೌಂಡರಿ) ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ಜಾರ್ಖಂಡ್‌ನ ಪರ ಐದು ವಿಕೆಟ್ ಗೊಂಚಲು(5-69) ಪಡೆದ ಸ್ಪಿನ್ನರ್ ನದೀಮ್ ಈ ಋತುವಿನ ರಣಜಿಯಲ್ಲಿ ಒಟ್ಟು 56 ವಿಕೆಟ್ ಪಡೆದ ಸಾಧನೆ ಮಾಡಿದರು.

ಜಾರಿ ಬಿದ್ದ ಜಾರ್ಖಂಡ್: ಗೆಲ್ಲಲು 235 ರನ್ ಗುರಿ ಪಡೆದಿದ್ದ ಜಾರ್ಖಂಡ್ ತಂಡ ಭಾರತದ ಸೀಮಿತ ಓವರ್‌ನ ಬೌಲರ್ ಬುಮ್ರಾ ಅವರ ಜೀವನಶ್ರೇಷ್ಠ ಬೌಲಿಂಗ್‌(6-29) ದಾಳಿಗೆ ತತ್ತರಿಸಿ 41 ಓವರ್‌ಗಳಲ್ಲಿ 111 ರನ್‌ಗೆ ಆಲೌಟಾಯಿತು. ಬುಮ್ರಾಗೆ ಹಿರಿಯ ವೇಗದ ಬೌಲರ್ ಆರ್.ಪಿ.ಸಿಂಗ್(3-25) ಉತ್ತಮ ಸಾಥ್ ನೀಡಿದರು.

ಜಾರ್ಖಂಡ್ ಆರಂಭಿಕ ಆಟಗಾರರಾದ ಪ್ರತ್ಯುಷ್ ಸಿಂಗ್ ಹಾಗೂ ಸುಮಿತ್ ಕುಮಾರ್‌ರನ್ನು ಬೇಗನೆ ಕಳೆದುಕೊಂಡಿತು. ಈ ಇಬ್ಬರು ಆಟಗಾರರು ಶೂನ್ಯಕ್ಕೆ ಔಟಾದರು. ಮಧ್ಯಮ ಕ್ರಮಾಂಕದಲ್ಲಿ ವಿರಾಟ್ ಸಿಂಗ್, ಸೌರಬ್ ತಿವಾರಿ, ಇಶಾಂತ್ ಜಗ್ಗಿ ಹಾಗೂ ಇಶಾನ್ ಕಿಶನ್ ಅಲ್ಪ ಮೊತ್ತಕ್ಕೆ ಔಟಾದಾಗ ಜಾರ್ಖಂಡ್‌ನ ಫೈನಲ್ ಕನಸು ಭಗ್ನಗೊಂಡಿತು.

ಜಾರ್ಖಂಡ್ 34ನೆ ಓವರ್‌ನಲ್ಲಿ 72ರನ್‌ಗೆ 8 ವಿಕೆಟ್ ಕಳೆದುಕೊಂಡಿತ್ತು. ಕೌಶಲ್ ಸಿಂಗ್ ಹಾಗೂ ವಿಕಾಶ್ ತಂಡದ ಸೋಲಿನ ಅಂತರ ತಗ್ಗಿಸಲು ಯತ್ನಿಸಿದರು.

ಸಂಕ್ಷಿಪ್ತ ಸ್ಕೋರ್

ಗುಜರಾತ್ ಮೊದಲ ಇನಿಂಗ್ಸ್: 390

ಜಾರ್ಖಂಡ್ ಮೊದಲ ಇನಿಂಗ್ಸ್: 408

ಗುಜರಾತ್ ಎರಡನೆ ಇನಿಂಗ್ಸ್: 252

(ಜುನೇಜ 81, ಚಿರಾಗ್ ಗಾಂಧಿ 51, ಸಮಿತ್ ಗೊಹಿಲ್ 49, ಭಾರ್ಗವ್ 44, ನದೀಮ್ 5-69, ವಿಕಾಸ್ ಸಿಂಗ್ 2-44) ಜಾರ್ಖಂಡ್ ಎರಡನೆ ಇನಿಂಗ್ಸ್: 111

(ಕೌಶಲ್ ಸಿಂಗ್ 24, ತಿವಾರಿ 17, ಬುಮ್ರಾ 6-29, ಆರ್‌ಪಿ ಸಿಂಗ್ 3-25)

ಪಂದ್ಯಶ್ರೇಷ್ಠ: ಜಸ್ಪ್ರೀತ್ ಬುಮ್ರಾ.

ಮುಂಬೈಗೆ 251 ರನ್ ಗುರಿ: ತಮಿಳುನಾಡಿನ ಮುಕುಂದ್, ಇಂದ್ರಜಿತ್ ಶತಕ

  ರಾಜ್‌ಕೋಟ್, ಜ.4: ರಣಜಿ ಟ್ರೋಫಿ ಫೈನಲ್‌ಗೆ ತಲುಪಲು ಮುಂಬೈ ಹಾಗೂ ತಮಿಳುನಾಡು ನಡುವೆ ಇಲ್ಲಿನ ಸೌರಾಷ್ಟ್ರ ಕ್ರಿಕೆಟ್ ಸ್ಟೇಡಿಯಂನಲ್ಲಿ ಹೋರಾಟ ಮುಂದುವರಿದಿದೆ. ತಮಿಳುನಾಡಿನ ನಾಯಕ ಅಭಿನವ್ ಮುಕುಂದ್(122) ಹಾಗೂ ಇಂದ್ರಜಿತ್(138)2ನೆ ವಿಕೆಟ್‌ಗೆ 185 ರನ್ ಜೊತೆಯಾಟ ನಡೆಸಿ ಹಾಲಿ ಚಾಂಪಿಯನ್ ಮುಂಬೈ ಗೆಲುವಿಗೆ 251 ರನ್ ಸವಾಲು ನೀಡಿದ್ದಾರೆ. ರಣಜಿ ಟ್ರೋಫಿಯಲ್ಲಿ ಫೈನಲ್‌ಗೆ ತಲುಪುವ ವಿಶ್ವಾಸವನ್ನು ಜೀವಂತವಾಗಿರಿಸಿದ್ದಾರೆ.

 ನಾಲ್ಕನೆ ದಿನವಾದ ಬುಧವಾರ ಆಟ ಕೊನೆಗೊಂಡಾಗ ವಿಕೆಟ್ ನಷ್ಟವಿಲ್ಲದೆ 5 ರನ್ ಗಳಿಸಿರುವ ಮುಂಬೈ ಕೊನೆಯ ದಿನವಾದ ಗುರುವಾರ 246 ರನ್ ಗಳಿಸಬೇಕಾಗಿದೆ.

ತಮಿಳುನಾಡು 356/6 ಡಿಕ್ಲೇರ್: ಇದಕ್ಕೆ ಮೊದಲು 111 ರನ್ ಹಿನ್ನಡೆಯೊಂದಿಗೆ ಎರಡನೆ ಇನಿಂಗ್ಸ್ ಆರಂಭಿಸಿದ ತಮಿಳುನಾಡು 78 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 356 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿತು. ತಂಡಕ್ಕೆ ನಾಯಕ ಮುಕುಂದ್ ಹಾಗೂ ಇಂದ್ರಜಿತ್ ಆಸರೆಯಾದರು.

ಮುಕುಂದ್ ಟೂರ್ನಿಯಲ್ಲಿ 5ನೆ ಶತಕ(122 ರನ್, 186 ಎಸೆತ, 11 ಬೌಂಡರಿ) ಬಾರಿಸಿದರು. ಇಂದ್ರಜಿತ್ ತಂಡದ ಪರ ಗರಿಷ್ಠ ಸ್ಕೋರ್(138 ರನ್, 169 ಎಸೆತ, 13 ಬೌಂಡರಿ, 1 ಸಿಕ್ಸರ್) ದಾಖಲಿಸಿದರು. ಈ ಇಬ್ಬರು ಭರ್ಜರಿ ಆರಂಭದ ನೆರವಿನಿಂದ ತಮಿಳುನಾಡು ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡಿತು.

ತಮಿಳುನಾಡಿಗೆ ಗಂಗಾರಾಜು(28) ಹಾಗೂ ಮುಕುಂದ್ ಮೊದಲ ವಿಕೆಟ್‌ಗೆ 64 ರನ್ ಸೇರಿಸಿ ಎಚ್ಚರಿಕೆಯ ಆರಂಭ ನೀಡಿದರು. ರಾಜು 21ನೆ ಓವರ್‌ನಲ್ಲಿ ಸಂಧುಗೆ ವಿಕೆಟ್ ಒಪ್ಪಿಸಿದರು. ಆಗ 3ನೆ ಕ್ರಮಾಂಕದಲ್ಲಿ ಭಡ್ತಿ ಪಡೆದು ಬಂದ ಇಂದ್ರಜಿತ್ ನಾಯಕ ಮುಕುಂದ್ ಜೊತೆಗೂಡಿ ಇನಿಂಗ್ಸ್ ಬೆಳೆಸಿದರು.

 159 ಎಸೆತಗಳಲ್ಲಿ ಶತಕ ಪೂರೈಸಿದ ಮುಕುಂದ್ ಪ್ರಸ್ತುತ ರಣಜಿ ಋತುವಿನಲ್ಲಿ ಒಟ್ಟು 800 ರನ್ ಗಳಿಸಿದರು. ನಾಲ್ಕನೆ ಬಾರಿ ಮುಕುಂದ್ ಈ ಸಾಧನೆ ಮಾಡಿದರು. ಟೆಸ್ಟ್‌ನಲ್ಲಿ ಮೂರನೆ ಆರಂಭಿಕ ಬ್ಯಾಟ್ಸ್‌ಮನ್ ಸ್ಥಾನವನ್ನು ಗಿಟ್ಟಿಸಿಕೊಳ್ಳುವತ್ತ ಚಿತ್ತವಿರಿಸಿದ್ದಾರೆ.

ಮುಂಬೈ ಆಟಗಾರರು ಮುಕುಂದ್ ಹಾಗೂ ಇಂದ್ರಜಿತ್‌ಗೆ ಹಲವು ಬಾರಿ ಜೀವದಾನ ನೀಡಿದ್ದರು. 41ನೆ ಓವರ್‌ನಲ್ಲಿ ಮುಕುಂದ್ ಸ್ಟಂಪ್‌ಔಟ್‌ನಿಂದ ಪಾರಾದರು. 104 ರನ್ ಗಳಿಸಿದ್ದಾಗ ಮತ್ತೊಮ್ಮೆ ಜೀವದಾನ ಪಡೆದರು.

 ದಿನೇಶ್ ಕಾರ್ತಿಕ್ ಔಟಾದ ಬಳಿಕ ವಿಜಯ್ ಶಂಕರ್ ಭಡ್ತಿ ಪಡೆದು ಬಂದರು. ತಮಿಳುನಾಡು 73 ಓವರ್ ಒಳಗೆ 300 ರನ್ ದಾಟಿತು.

ತಮಿಳುನಾಡು ದಾಂಡಿಗರು ಟ್ರಾಕ್ ಮೇಲೆ ಓಡುತ್ತಿರುವುದಕ್ಕೆ ಮುಂಬೈ ಆಟಗಾರರು ಅಸಮಾಧಾನ ವ್ಯಕ್ತಪಡಿಸಿದರು. 74ನೆ ಓವರ್‌ನಲ್ಲಿ ಈ ವಿಷಯದಲ್ಲಿ ಮಧ್ಯಪ್ರವೇಶಿಸಿದ ಅಂಪೈರ್ ವೀರೇಂದ್ರ ಶರ್ಮ ಇಬ್ಬರು ಬ್ಯಾಟ್ಸ್‌ಮನ್ ಬಳಿ ಮಾತನಾಡಿ ತಮಿಳುನಾಡಿನ 5 ರನ್ ದಂಡ ಹಾಕಿದರು. ಈ ಹಿನ್ನೆಲೆಯಲ್ಲಿ ಮುಂಬೈ ಮೊದಲ ಇನಿಂಗ್ಸ್‌ನಲ್ಲಿ 406 ಬದಲಿಗೆ 411 ರನ್ ಮುನ್ನಡೆ ಸಾಧಿಸಿತು.

ಸಂಕ್ಷಿಪ್ತ ಸ್ಕೋರ್

ತಮಿಳುನಾಡು ಪ್ರಥಮ ಇನಿಂಗ್ಸ್: 305 ರನ್‌ಗೆ ಆಲೌಟ್

ಮುಂಬೈ ಪ್ರಥಮ ಇನಿಂಗ್ಸ್: 411

ತಮಿಳುನಾಡು ಎರಡನೆ ಇನಿಂಗ್ಸ್: 356/6 ಡಿಕ್ಲೇರ್

(ಇಂದ್ರಜಿತ್ 138, ಮುಕುಂದ್ 122, ಸಂಧು 2-67,ಗೊಹಿಲ್ 2-110)

ಮುಂಬೈ 2ನೆ ಇನಿಂಗ್ಸ್: 5/0

(ಪ್ರಥ್ವಿ ಶಾ ಅಜೇಯ 2, ವೇಲ ಅಜೇಯ 3)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News