×
Ad

ಧೋನಿ ತೆಗೆದುಕೊಂಡ ಆ ಐದು ದಿಟ್ಟ ನಿರ್ಧಾರಗಳು...

Update: 2017-01-05 17:27 IST

ಹೊಸದಿಲ್ಲಿ, ಜ.5:  ಬುಧವಾರ ಸಂಜೆ ಸೀಮಿತ ಓವರ್ ಕ್ರಿಕೆಟ್ ತಂಡದ ನಾಯಕತ್ವವನ್ನು ತ್ಯಜಿಸಿದ ಎಂಎಸ್ ಧೋನಿ ಮತ್ತೊಂದು ಬಾಂಬ್ ಸಿಡಿಸಿದ್ದರು. ಈ ಮೂಲಕ ಭಾರತೀಯ ಕ್ರಿಕೆಟ್‌ನಲ್ಲಿ ತನ್ನ ಭವ್ಯ ಅಧ್ಯಾಯಕ್ಕೆ ತೆರೆ ಎಳೆದಿದ್ದರು.

ಜಾರ್ಖಂಡ್‌ನ 35ರ ಪ್ರಾಯದ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಧೋನಿ ದಿಟ್ಟ ನಿರ್ಧಾರ ಕೈಗೊಳ್ಳುವುದರಲ್ಲಿ ಎತ್ತಿದ ಕೈ. ಧೋನಿ 2014ರಲ್ಲಿ ಭಾರತ ತಂಡ ಆಸ್ಟ್ರೆಲಿಯ ಪ್ರವಾಸದಲ್ಲಿದ್ದಾಗ ಟೆಸ್ಟ್ ನಾಯಕತ್ವಕ್ಕೆ ದಿಢೀರ್ ಆಗಿ ರಾಜೀನಾಮೆ ನೀಡಿ ಎಲ್ಲರನ್ನು ಅಚ್ಚರಿಗೊಳಿಸಿದ್ದರು.

ಧೋನಿ ವೃತ್ತಿಜೀವನದಲ್ಲಿ ತೆಗೆದುಕೊಂಡ 5 ದಿಟ್ಟ ನಿರ್ಧಾರಗಳು ಇಂತಿವೆ.

 1. 2007ರ ಟ್ವೆಂಟಿ-20 ವಿಶ್ವಕಪ್ ಫೈನಲ್‌ನ ಅಂತಿಮ ಓವರ್‌ನಲ್ಲಿ ಜೋಗಿಂದರ್ ಶರ್ಮಗೆ ಬೌಲಿಂಗ್ ಅವಕಾಶ: 2007ರ ಟ್ವೆಂಟಿ-20 ವಿಶ್ವಕಪ್ ಫೈನಲ್‌ನಲ್ಲಿ ಪಾಕಿಸ್ತಾನದ ಗೆಲುವಿಗೆ ಅಂತಿಮ 6 ಎಸೆತಗಳಲ್ಲಿ 13 ರನ್ ಅಗತ್ಯವಿತ್ತು. ಅನುಭವಿ ಬೌಲರ್ ಹರ್ಭಜನ್ ಸಿಂಗ್‌ಗೆ ಇನ್ನೂ ಒಂದು ಓವರ್ ಎಸೆಯಲು ಬಾಕಿಯಿತ್ತು. ಮತ್ತೊಂದೆಡೆ ಕ್ರೀಸ್‌ನಲ್ಲಿ ತಲೆವೂರಿದ್ದ ಮಿಸ್ಬಾವುಲ್ ಹಕ್ ಗೆಲುವಿನ ರನ್ ಗಳಿಸಲು ಹಾತೊರೆಯುತ್ತಿದ್ದರು. ಈ ಹಂತದಲ್ಲಿ ಧೋನಿ ಅವರು ತಂಡಕ್ಕೆ ತೀರಾ ಹೊಸಬ, ಹರ್ಯಾಣದ ಕ್ರಿಕೆಟಿಗ ಜೋಗಿಂದರ್ ಶರ್ಮಗೆ ಕೊನೆಯ ಓವರ್ ಬೌಲಿಂಗ್ ಮಾಡುವ ಗುರುತರ ಜವಾಬ್ದಾರಿ ನೀಡಿದ್ದರು. ನಾಯಕನ ವಿಶ್ವಾಸವನ್ನು ಉಳಿಸಿಕೊಂಡ ಶರ್ಮ ಭಾರತಕ್ಕೆ ರೋಚಕ ಗೆಲುವು ತಂದುಕೊಟ್ಟರು.

  ಜೋಗಿಂದರ್ ಸಿಂಗ್ ಆಫ್-ಸ್ಟಂಪ್‌ನ ಹೊರಗೆ ಚೆಂಡನ್ನು ಎಸೆದಿದ್ದರು. ಒತ್ತಡಕ್ಕೆ ಸಿಲುಕಿದ ಮಿಸ್ಬಾ ಸ್ಕೂಪ್ ಮಾಡಲು ಹೋಗಿ ಫೈನ್‌ಲೆಗ್‌ನಲ್ಲಿ ಫೀಲ್ಡಿಂಗ್ ನಡೆಸುತ್ತಿದ್ದ ಶ್ರೀಶಾಂತ್‌ಗೆ ಕ್ಯಾಚ್ ನೀಡಿದ್ದರು. ಕೊನೆಯ ಓವರ್‌ನಲ್ಲಿ ಧೋನಿಯ ಬೌಲಿಂಗ್ ಹಾಗೂ ಫೀಲ್ಡಿಂಗ್ ತಂತ್ರಗಾರಿಕೆ ಎಲ್ಲರ ಮನ ಗೆದ್ದಿತ್ತು.

2.: 2011ರ ವಿಶ್ವಕಪ್‌ನಲ್ಲಿ ಯುವಿಗಿಂತ ಮೊದಲು ಬ್ಯಾಟಿಂಗ್ ಭಡ್ತಿ:  ಭಾರತ 2011ರ ವಿಶ್ವಕಪ್‌ನ್ನು ತನ್ನದೇ ನೆಲದಲ್ಲಿ ಆಡಿತ್ತು. ಫೈನಲ್‌ಗೆ ತಲುಪಿದ್ದ ಭಾರತ 28 ವರ್ಷಗಳ ಬಳಿಕ ವಿಶ್ವಕಪ್ ಜಯಿಸುವ ಕನಸು ಕಾಣುತ್ತಿತ್ತು. ಶ್ರೀಲಂಕಾ ವಿರುದ್ಧ 275 ರನ್ ಗುರಿ ಪಡೆದಿದ್ದ ಭಾರತ 31 ರನ್‌ಗೆ 2 ವಿಕೆಟ್ ಕಳೆದುಕೊಂಡಿತ್ತು. ಯುವರಾಜ್ ಸಿಂಗ್‌ಗಿಂತ ಮೊದಲೇ ಬ್ಯಾಟಿಂಗ್‌ನಲ್ಲಿ ಭಡ್ತಿ ಪಡೆದು ಕ್ರೀಸ್‌ಗೆ ಇಳಿದಿದ್ದ ಧೋನಿ ಮ್ಯಾಚ್ ವಿನ್ನಿಂಗ್ ಸ್ಕೋರ್(79 ಎಸೆತ, ಅಜೇಯ 91)ಗಳಿಸಿದ್ದಲ್ಲದೆ ಗೌತಮ್ ಗಂಭೀರ್‌ರೊಂದಿಗೆ 4ನೆ ವಿಕೆಟ್‌ಗೆ ನಿರ್ಣಾಯಕ 109 ರನ್ ಜೊತೆಯಾಟ ನಡೆಸಿದ್ದರು. ನುವಾನ್ ಕುಲಶೇಖರ ಎಸೆತವನ್ನು ಸಿಕ್ಸರ್‌ಗೆ ಅಟ್ಟಿದ್ದ ಧೋನಿ ತನ್ನದೇ ಶೈಲಿಯಲ್ಲಿ ಭಾರತಕ್ಕೆ ಗೆಲುವು ತಂದುಕೊಟ್ಟರು. ಬಿಲಿಯನ್ ಅಭಿಮಾನಿಗಳ ಹೃದಯ ಗೆದ್ದಿದ್ದರು.

 3. 2013ರ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಇಶಾಂತ್ ಶರ್ಮಗೆ ಬೌಲಿಂಗ್ ಚಾನ್ಸ್: ಆಂಗ್ಲರ ನಾಡಿನಲ್ಲಿ ನಡೆದಿದ್ದ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯ ಮಳೆಯಿಂದಾಗಿ 20 ಓವರ್‌ಗೆ ಕಡಿತಗೊಂಡಿತ್ತು. 130 ರನ್ ಗುರಿ ಪಡೆದಿದ್ದ ಇಂಗ್ಲೆಂಡ್ ಬೇಗನೆ ಆರಂಭಿಕ ವಿಕೆಟ್ ಕಳೆದುಕೊಂಡಿತ್ತು. ಮಧ್ಯಮ ಕ್ರಮಾಂಕದಲ್ಲಿ ಇಯಾನ್ ಮೊರ್ಗನ್ ಹಾಗೂ ರವಿ ಬೋಪಾರ ತಂಡಕ್ಕೆ ಆಸರೆಯಾಗಿದ್ದರು. ಇಂಗ್ಲೆಂಡ್‌ಗೆ 18 ಎಸೆತಗಳಲ್ಲಿ 6 ವಿಕೆಟ್ ನೆರವಿನಿಂದ 28 ರನ್ ಅಗತ್ಯವಿತ್ತು. ಆಗ ಧೋನಿಗೆ ಒತ್ತಡ ಹೆಚ್ಚಿತ್ತು. ಇಶಾಂತ್, ಅಶ್ವಿನ್ ಹಾಗೂ ರವೀಂದ್ರ ಜಡೇಜಗೆ ಇನ್ನೂ 1 ಓವರ್ ಬೌಲಿಂಗ್ ಬಾಕಿಯಿತ್ತು. ‘ಕ್ಯಾಪ್ಟನ್‌ಕೂಲ್’ ಖ್ಯಾತಿಯ ಧೋನಿ ನಿರ್ಣಾಯಕ 18ನೆ ಓವರ್‌ನಲ್ಲಿ ಇಶಾಂತ್ ಕೈಗೆ ಚೆಂಡು ನೀಡಲು ನಿರ್ಧರಿಸಿದ್ದರು. 2 ಮ್ಯಾಜಿಕ್ ಎಸೆತದ ಮೂಲಕ ಇಶಾಂತ್ ಕ್ರೀಸ್‌ನಲ್ಲಿ ತಲೆವೂರಿದ್ದ ಇಬ್ಬರು ಬ್ಯಾಟ್ಸ್‌ಮನ್‌ಗಳನ್ನು ಪೆವಿಲಿಯನ್‌ಗೆ ಅಟ್ಟಿದ್ದರು. ಈ ಮೂಲಕ ಪಂದ್ಯ ಭಾರತದ ಪರ ವಾಲಿಸಿದ್ದರು. ಇಂಗ್ಲೆಂಡ್‌ನ ಉಳಿದ ಆಟಗಾರರು ಸ್ಪಿನ್‌ದ್ವಯರಾದ ಅಶ್ವಿನ್-ಜಡೇಜ ದಾಳಿಗೆ ಉತ್ತರಿಸಲಾಗದೆ ಹೋದರು. ಅಂತಿಮವಾಗಿ ಭಾರತ 5 ರನ್‌ಗಳ ರೋಚಕ ಗೆಲುವು ಸಾಧಿಸಿತ್ತು. ಧೋನಿ ಐಸಿಸಿ ಆಯೋಜಿತ ಪ್ರಮುಖ 3 ಟೂರ್ನಿಗಳನ್ನು ಗೆದ್ದ ವಿಶ್ವದ ಮೊದಲ ನಾಯಕ ಎನಿಸಿಕೊಳ್ಳುವ ಮೂಲಕ ಇತಿಹಾಸ ನಿರ್ಮಿಸಿದ್ದರು.

4: 2014ರ ಲಾರ್ಡ್ಸ್ ಟೆಸ್ಟ್‌ನಲ್ಲಿ ಇಶಾಂತ್‌ಗೆ ಬೌಲಿಂಗ್ ಬದಲಾವಣೆಗೆ ಸಲಹೆ: ಭಾರತ 2014ರಲ್ಲಿ ಇಂಗ್ಲೆಂಡ್ ವಿರುದ್ಧದ 2ನೆ ಟೆಸ್ಟ್ ಪಂದ್ಯವನ್ನು 95 ರನ್‌ಗಳ ಅಂತರದಿಂದ ಗೆದ್ದುಕೊಂಡಿತ್ತು. ಈ ಗೆಲುವು ಭಾರತಕ್ಕೆ ಸುಲಭವಾಗಿರಲಿಲ್ಲ. ಕೊನೆಯ ದಿನದಾಟದ ಮೊದಲ ಅವಧಿಯಲ್ಲಿ ಜೋ ರೂಟ್ ಹಾಗೂ ಮೊಯಿನ್ ಅಲಿ 5ನೆ ವಿಕೆಟ್‌ಗೆ ನಿರ್ಣಾಯಕ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದ್ದರು. ಆಗ ನಾಯಕ ಧೋನಿ ವೇಗಿ ಇಶಾಂತ್‌ಗೆ ಬೌಲಿಂಗ್ ತಂತ್ರವನ್ನು ಬದಲಿಸಲು ಹೇಳಿದ್ದರು. ಧೋನಿಯ ಸಲಹೆಯನ್ನು ಪಾಲಿಸಿದ್ದ ಇಶಾಂತ್ ಐದು ವಿಕೆಟ್‌ಗಳನ್ನು ಕಬಳಿಸಿ ಭಾರತ ಸರಣಿಯಲ್ಲಿ 1-0 ಮುನ್ನಡೆಗೆ ನೆರವಾಗಿದ್ದರು.

5. 2016ರ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಬಲಗೈ ಗ್ಲೌ ತೆಗೆದ ಧೋನಿ: ಐಸಿಸಿ ಟ್ವೆಂಟಿ-20 ವಿಶ್ವಕಪ್‌ನಲ್ಲಿ ನೆರೆಯ ಬಾಂಗ್ಲಾದೇಶದ ಮುಶ್ಫಿಕುರ್ರಹೀಂ ಹಾಗೂ ಮಹ್ಮೂದುಲ್ಲಾ ಭಾರತಕ್ಕೆ ಸೋಲುಣಿಸಲು ಹೊಂಚುಹಾಕುತ್ತಿದ್ದರು. ಹಾರ್ದಿಕ್ ಪಾಂಡ್ಯ ಎಸೆದ ಕೊನೆಯ ಓವರ್‌ನಲ್ಲಿ ರಹೀಂ ಸತತ ಬೌಂಡರಿ ಬಾರಿಸಿ ತಂಡವನ್ನು ಗೆಲುವಿತ್ತ ಮುನ್ನಡೆಸಿದ್ದರು. ಬಾಂಗ್ಲಾಕ್ಕೆ ಕೊನೆಯ 3 ಎಸೆತಗಳಲ್ಲಿ 2 ರನ್‌ಗಳ ಅಗತ್ಯವಿತ್ತು. ಬಾಂಗ್ಲಾದೇಶ ಮುಂದಿನ 2 ಎಸೆತಗಳಲ್ಲಿ 2 ವಿಕೆಟ್ ಕಳೆದುಕೊಂಡಿತ್ತು. ಬಾಂಗ್ಲಾಕ್ಕೆ ಅಂತಿಮ ಎಸೆತದಲ್ಲಿ 2 ರನ್ ಅಗತ್ಯವಿತ್ತು. ಆಗ ಧೋನಿ ಬಲಗೈ ಗ್ಲೌವನ್ನು ತೆಗೆಯಲು ನಿರ್ಧರಿಸಿದರು. ಅಂತಿಮ ಎಸೆತ ಎದುರಿಸಿದ್ದ ಶುವಗತ ಹೊಮ್ ಚೆಂಡನ್ನು ತಳ್ಳಿ ಒಂದು ರನ್ ಗಳಿಸಲು ಓಡಿದರು. ತಕ್ಷಣವೇ ಬಲಗೈಯಲ್ಲಿ ಚೆಂಡನ್ನು ಸಂಗ್ರಹಿಸಿದ್ದ ಧೋನಿ ಸ್ಟಂಪ್ಸ್‌ನತ್ತ ಓಡಿ ಮುಸ್ತಾಫಿಝುರ್ರಹ್ಮಾನ್‌ರನ್ನು ರನೌಟ್ ಮಾಡಿದ್ದರು. ಭಾರತಕ್ಕೆ 1 ರನ್‌ಗಳ ರೋಚಕ ಗೆಲುವು ತಂದುಕೊಟ್ಟಿದ್ದರು. ಗ್ಲೌ ತೆಗೆದ ಧೋನಿ ನಿರ್ಧಾರ ನೆರವಿಗೆ ಬಂತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News