×
Ad

ಪಾಕ್‌ಗೆ ಕಠಿಣ ಸವಾಲು, ಕ್ಲೀನ್‌ಸ್ವೀಪ್‌ನತ್ತ ಆಸೀಸ್ ಕಣ್ಣು

Update: 2017-01-06 23:22 IST

ಸಿಡ್ನಿ, ಜ.6: ಇಲ್ಲಿ ನಡೆಯುತ್ತಿರುವ ಮೂರನೆ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯ ತಂಡಕ್ಕೆ ಸರಣಿಯಲ್ಲಿ ಕ್ಲೀನ್‌ಸ್ವೀಪ್ ಸಾಧಿಸಲು ಇನ್ನು 9 ವಿಕೆಟ್‌ಗಳ ಅಗತ್ಯವಿದೆ. ಮತ್ತೊಂದೆಡೆ ಎದುರಾಳಿ ಪಾಕಿಸ್ತಾನ 410 ರನ್ ಗಳಿಸಬೇಕಾದ ಭಾರೀ ಸವಾಲು ಎದುರಿಸುತ್ತಿದೆ.

 ನಾಲ್ಕನೆ ದಿನವಾದ ಶುಕ್ರವಾರ ಆಟ ಕೊನೆಗೊಂಡಾಗ ಪಾಕಿಸ್ತಾನ 1 ವಿಕೆಟ್‌ಗಳ ನಷ್ಟಕ್ಕೆ 55 ರನ್ ಗಳಿಸಿದೆ. ಸ್ಪಿನ್ನರ್ ನಥಾನ್ ಲಿಯೊನ್ ಚೊಚ್ಚಲ ಪಂದ್ಯ ಆಡುತ್ತಿರುವ ಆರಂಭಿಕ ಆಟಗಾರ ಶಾರ್ಜೀಲ್ ಖಾನ್(40) ವಿಕೆಟ್ ಕಬಳಿಸಿದ್ದಾರೆ.

ಪಾಕಿಸ್ತಾನದ ಪರ ಸರಣಿಯಲ್ಲಿ ಗರಿಷ್ಠ ಸ್ಕೋರ್ ದಾಖಲಿಸಿರುವ ಅಝರ್ ಅಲಿ(ಅಜೇಯ 11) ಹಾಗೂ ನೈಟ್‌ವಾಚ್‌ಮ್ಯಾನ್ ಯಾಸಿರ್ ಷಾ(3) ಕ್ರೀಸ್ ಕಾಯ್ದುಕೊಂಡಿದ್ದಾರೆ.

ವಾರ್ನರ್ ಐತಿಹಾಸಿಕ ಅರ್ಧಶತಕ, ಆಸ್ಟ್ರೇಲಿಯ 241/2 ಡಿಕ್ಲೇರ್:

 ಇದಕ್ಕೆ ಮೊದಲು ಆಸ್ಟ್ರೇಲಿಯ ತಂಡ ನಾಲ್ಕನೆ ದಿನದಾಟದಲ್ಲಿ 16 ಓವರ್‌ಗಳ ಆಟ ಬಾಕಿ ಇರುವಾಗ 2 ವಿಕೆಟ್‌ಗೆ 241 ರನ್‌ಗೆ ಎರಡನೆ ಇನಿಂಗ್ಸ್ ಡಿಕ್ಲೇರ್ ಮಾಡಿತು. ಪ್ರವಾಸಿ ತಂಡ ಪಾಕ್ ಗೆಲುವಿಗೆ 465 ರನ್ ಗುರಿ ನೀಡಿತು.

ಉಸ್ಮಾನ್ ಖ್ವಾಜಾ(ಅಜೇಯ 79, 98 ಎಸೆತ) ಹಾಗೂ ಪೀಟರ್ ಹ್ಯಾಂಡ್ಸ್‌ಕಾಂಬ್(40 ರನ್, 25 ಎಸೆತ) ಅಜೇಯವಾಗುಳಿದರು.

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಎರಡನೆ ಅತ್ಯಂತ ವೇಗದಲ್ಲಿ ಅರ್ಧಶತಕ ಬಾರಿಸಿದ ಡೇವಿಡ್ ವಾರ್ನರ್ ಆಸ್ಟ್ರೇಲಿಯಕ್ಕೆ ಭರ್ಜರಿ ಆರಂಭ ನೀಡಿದರು. ವಾರ್ನರ್ ಅಬ್ಬರದ ನೆರವಿನಿಂದ ಆಸೀಸ್ 241 ರನ್ ಗಳಿಸಿ ಡಿಕ್ಲೇರ್ ಮಾಡಿತು.

ಸ್ಫೋಟಕ ಆರಂಭಿಕ ದಾಂಡಿಗ ವಾರ್ನರ್ ಪಾಕ್‌ನ ಲೆಗ್ ಸ್ಪಿನ್ನರ್ ಯಾಸಿರ್ ಮೇಲೆ ಮುಗಿಬಿದ್ದರು. ಯಾಸಿರ್ ಎಸೆದ 2ನೆ ಇನಿಂಗ್ಸ್‌ನ ನಾಲ್ಕನೆ ಓವರ್‌ನಲ್ಲಿ 6, 6, 4, 4 ರನ್ ಗಳಿಸಿದ ವಾರ್ನರ್ ವೇಗದ ಬೌಲರ್ ಇಮ್ರಾನ್ ಖಾನ್ ಎಸೆದ ಇನಿಂಗ್ಸ್‌ನ 7ನೆ ಓವರ್‌ನಲ್ಲಿ ಸತತ ನಾಲ್ಕು ಬೌಂಡರಿ ಬಾರಿಸಿದರು.

 ವಾರ್ನರ್ ಅವರ ಅಬ್ಬರದ ಅರ್ಧಶತಕ ಕೇವಲ 23 ಎಸೆತಗಳಲ್ಲಿ ಹೊರಹೊಮ್ಮಿತ್ತು. ಇದರಲ್ಲಿ ಏಳು ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳಿದ್ದವು. ವಾರ್ನರ್ ಟೆಸ್ಟ್ ಇತಿಹಾಸದಲ್ಲಿ ಎರಡನೆ ಅತ್ಯಂತ ವೇಗದ ಅರ್ಧಶತಕ ಬಾರಿಸಿದ ಗೌರವಕ್ಕೆ ಪಾತ್ರರಾದರು. ಪಾಕಿಸ್ತಾನದ ನಾಯಕ ಮಿಸ್ಬಾವುಲ್‌ಹಕ್ 2014ರಲ್ಲಿ ಅಬುಧಾಬಿಯಲ್ಲಿ ಆಸ್ಟ್ರೇಲಿಯದ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಕೇವಲ 21 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದರು.

ವಾರ್ನರ್ 27 ಎಸೆತಗಳಲ್ಲಿ 55 ರನ್ ಗಳಿಸಿದ್ದಾಗ ವಹಾಬ್ ರಿಯಾಝ್ ಸ್ವಿಂಗ್ ಎಸೆತಕ್ಕೆ ಕ್ಲೀನ್ ಬೌಲ್ಡಾದರು. ಆಸೀಸ್ ಪರ ನಾಯಕ ಸ್ಟೀವನ್ ಸ್ಮಿತ್ 59 ರನ್ ಕಾಣಿಕೆ ನೀಡಿದರು. 3ನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 67 ರನ್ ಸೇರಿಸಿದರು.

ಯೂನಿಸ್ ಖಾನ್ ಅಜೇಯ 175: ಇದಕ್ಕೆ ಮೊದಲು 8 ವಿಕೆಟ್ ನಷ್ಟಕ್ಕೆ 271 ರನ್‌ನಿಂದ ಮೊದಲ ಇನಿಂಗ್ಸ್ ಆರಂಭಿಸಿದ ಪಾಕಿಸ್ತಾನ ಹಿರಿಯ ಬ್ಯಾಟ್ಸ್‌ಮನ್ ಯೂನಿಸ್ ಖಾನ್ ನೀಡಿದ ಏಕಾಂಗಿ ಹೋರಾಟದ ಹೊರತಾಗಿಯೂ(ಅಜೇಯ 175 ರನ್, 334 ಎಸೆತ, 17 ಬೌಂಡರಿ, 3 ಸಿಕ್ಸರ್) 315 ರನ್‌ಗೆ ಆಲೌಟಾಯಿತು.

ಪಾಕಿಸ್ತಾನ ಮೊದಲ ಇನಿಂಗ್ಸ್‌ನಲ್ಲಿ 223 ರನ್ ಹಿನ್ನಡೆ ಅನುಭವಿಸಿದ್ದರೂ ಫಾಲೋ-ಆನ್ ವಿಧಿಸದ ಆಸೀಸ್ ನಾಯಕ ಸ್ಮಿತ್ ಬೌಲರ್‌ಗಳಿಗೆ ಸ್ವಲ್ಪ ವಿರಾಮ ನೀಡಿ ಬ್ಯಾಟಿಂಗ್ ಮಾಡಲು ನಿರ್ಧರಿಸಿದರು.

34ನೆ ಶತಕ ಬಾರಿಸಿ ಅಜೇಯವಾಗುಳಿದ ಯೂನಿಸ್‌ಖಾನ್ ಮೈದಾನದಿಂದ ತೆರಳುತ್ತಿದ್ದಾಗ ಎಸ್‌ಸಿಜಿಯಲ್ಲಿ ನೆರೆದಿದ್ದ ಪ್ರೇಕ್ಷಕರು ಎದ್ದುನಿಂತು ಗೌರವ ನೀಡಿದರು.

ಆಸೀಸ್ ಬೌಲಿಂಗ್ ವಿಭಾಗದಲ್ಲಿ ಹೇಝಲ್‌ವುಡ್(4-55) ಹಾಗೂ ಲಿಯೊನ್(3-115) ಯಶಸ್ವಿ ಬೌಲರ್ ಎನಿಸಿಕೊಂಡರು.

ವೇಗದ ಬೌಲರ್ ಮುಹಮ್ಮದ್ ಆಮಿರ್ ಗಾಯದ ಸಮಸ್ಯೆ ಎದುರಿಸಿದ ಕಾರಣ ಆಸ್ಟ್ರೇಲಿಯದ ಎರಡನೆ ಇನಿಂಗ್ಸ್‌ನಲ್ಲಿ ಬೌಲಿಂಗ್ ಮಾಡಲಿಲ್ಲ.

ಸಂಕ್ಷಿಪ್ತ ಸ್ಕೋರ್

ಆಸ್ಟ್ರೇಲಿಯ ಪ್ರಥಮ ಇನಿಂಗ್ಸ್: 538/8

ಪಾಕಿಸ್ತಾನ ಪ್ರಥಮ ಇನಿಂಗ್ಸ್: 315/10

(ಯೂನಿಸ್ ಖಾನ್ ಅಜೇಯ 175, ಅಲಿ 71, ಲಿಯೊನ್ 3-115, ಹೇಝಲ್‌ವುಡ್ 4-55) ಆಸ್ಟ್ರೇಲಿಯ ಎರಡನೆ ಇನಿಂಗ್ಸ್: 241/2 ಡಿಕ್ಲೇರ್

(ಖ್ವಾಜಾ ಅಜೇಯ 79, ವಾರ್ನರ್ 55, ಹ್ಯಾಂಡ್ಸ್‌ಕಾಬ್ ಅಜೇಯ 40, ಸ್ಮಿತ್ 59)

ಪಾಕಿಸ್ತಾನ ಎರಡನೆ ಇನಿಂಗ್ಸ್: 55/1(ಶಾರ್ಜೀಲ್ ಖಾನ್ 40)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News