ಇಂಗ್ಲೆಂಡ್ ವಿರುದ್ಧ ಏಕದಿನ, ಟ್ವೆಂಟಿ-20ಗೆ ಭಾರತ ತಂಡ ಪ್ರಕಟ: ವಿರಾಟ್ ಕೊಹ್ಲಿ ಸಾರಥ್ಯ

Update: 2017-01-06 17:54 GMT

 ಮುಂಬೈ, ಜ.6: ಇಂಗ್ಲೆಂಡ್ ವಿರುದ್ಧ ಜ.15 ರಿಂದ ಆರಂಭವಾಗಲಿರುವ ಸೀಮಿತ ಓವರ್‌ಗಳ ಕ್ರಿಕೆಟ್ ಸರಣಿಗೆ ಬಿಸಿಸಿಐ ಶುಕ್ರವಾರ ಟೀಮ್ ಇಂಡಿಯಾವನ್ನು ಪ್ರಕಟಿಸಿದೆ. ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಎಲ್ಲ ಮೂರು ಮಾದರಿಯ ಕ್ರಿಕೆಟ್‌ಗೆ ನಾಯಕನಾಗಿ ಆಯ್ಕೆಯಾಗಿದ್ದಾರೆ.

ಮುಂಬೈನಲ್ಲಿ ಸಭೆ ಸೇರಿದ ಎಂಎಸ್‌ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿ ನಿರೀಕ್ಷೆಯಂತೆಯೇ ಟೆಸ್ಟ್ ಕ್ರಿಕೆಟ್‌ನ ನಾಯಕ ಕೊಹ್ಲಿಗೆ ಏಕದಿನ ಹಾಗೂ ಟ್ವೆಂಟಿ-20 ಕ್ರಿಕೆಟ್‌ನ ನಾಯಕತ್ವದ ಜವಾಬ್ದಾರಿ ವಹಿಸಿದೆ. ಪ್ರಸಾದ್ ಇಂಗ್ಲೆಂಡ್ ವಿರುದ್ಧದ ಏಕದಿನ ಹಾಗೂ ಟ್ವೆಂಟಿ-20 ಸರಣಿಗೆ 15 ಸದಸ್ಯರ ತಂಡವನ್ನು ಪ್ರಕಟಿಸಿದರು.

ಬುಧವಾರ ದಿಢೀರನೆ ಸೀಮಿತ ಓವರ ಕ್ರಿಕೆಟ್ ನಾಯಕತ್ವ ತ್ಯಜಿಸಿದ್ದ ಎಂಎಸ್ ಧೋನಿ ಏಕದಿನ ಹಾಗೂ ಟ್ವೆಂಟಿ-20 ತಂಡಕ್ಕೆ ಸ್ಪೆಷಲಿಸ್ಟ್ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಆಗಿ ಆಯ್ಕೆಯಾಗಿದ್ದಾರೆ. 2011ರ ವಿಶ್ವಕಪ್‌ನಲ್ಲಿ ಆಲ್‌ರೌಂಡ್ ಪ್ರದರ್ಶನ ನೀಡಿದ್ದ ಯುವರಾಜ್ ಸಿಂಗ್ ದೀರ್ಘ ಸಮಯದ ಬಳಿಕ ತಂಡಕ್ಕೆ ವಾಪಸಾಗಿದ್ದಾರೆ. ಯುವಿ ಕಳೆದ ವರ್ಷ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಕೊನೆಯ ಬಾರಿ ಆಡಿದ್ದರು. 2013ರ ಡಿಸೆಂಬರ್‌ನಲ್ಲಿ ಕೊನೆಯ ಬಾರಿ ಏಕದಿನ ಪಂದ್ಯ ಆಡಿದ್ದರು.

  ದಿಲ್ಲಿಯ ಯುವ ಬ್ಯಾಟ್ಸ್‌ಮನ್ ರಿಷಬ್ ಪಂತ್ ಟ್ವೆಂಟಿ-20 ತಂಡಕ್ಕೆ ಇದೇ ಮೊದಲ ಬಾರಿ ಆಯ್ಕೆಯಾಗಿದ್ದಾರೆ. ಅಜಿಂಕ್ಯ ರಹಾನೆಯನ್ನು ಟ್ವೆಂಟಿ-20 ತಂಡದಿಂದ ಕೈಬಿಡಲಾಗಿದೆ. ರಹಾನೆ ಬದಲಿಗೆ ಪಂತ್‌ಗೆ ಮಣೆ ಹಾಕಲಾಗಿದೆ. ದಿಲ್ಲಿ ಹಾಗೂ ಅಂಡರ್-19 ತಂಡದ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಪಂತ್ ಈಗ ನಡೆಯುತ್ತಿರುವ ರಣಜಿಯಲ್ಲಿ ಒಟ್ಟು 972 ರನ್ ಗಳಿಸಿದ್ದು, ಇದರಲ್ಲಿ 4 ಶತಕಗಳಿವೆ. 19ರ ಹರೆಯದ ಪಂತ್ ರಣಜಿಯ ಆರಂಭದ ಹಂತದಲ್ಲಿ ಮಹಾರಾಷ್ಟ್ರದ ವಿರುದ್ಧ 326 ಎಸೆತಗಳಲ್ಲಿ 308 ರನ್‌ಗಳಿಸಿ ದಿಲ್ಲಿ ಪಂದ್ಯ ಡ್ರಾಗೊಳಿಸಲು ನೆರವಾಗಿದ್ದರು.

ಯುವರಾಜ್ ಸಿಂಗ್ ಈ ವರ್ಷದ ರಣಜಿ ಟ್ರೋಫಿಯಲ್ಲಿ ಪಂಜಾಬ್‌ನ ಪರ ಆಡಿರುವ 5 ಪಂದ್ಯಗಳಲ್ಲಿ ಒಟ್ಟು 672 ರನ್ ಗಳಿಸಿದ್ದಾರೆ. 84ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದ ಯುವಿ ಬರೋಡಾದ ವಿರುದ್ಧ ಗರಿಷ್ಠ 260 ರನ್ ಗಳಿಸಿದ್ದರು. ಆಲ್‌ರೌಂಡರ್‌ಗಳಾದ ಅಕ್ಷರ್ ಪಟೇಲ್, ಜಯಂತ್ ಯಾದವ್, ವೇಗದ ಬೌಲರ್‌ಗಳಾದ ಮುಹಮ್ಮದ್ ಶಮಿ ಹಾಗೂ ಧವಳ್ ಕುಲಕರ್ಣಿ ಗಾಯಗೊಂಡಿರುವ ಕಾರಣದಿಂದ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಆಡಿ ದಣಿದಿದ್ದ ಸ್ಪಿನ್‌ದ್ವಯರಾದ ಅಶ್ವಿನ್ ಹಾಗೂ ಜಡೇಜರನ್ನು ಆಯ್ಕೆಗಾರರು ಅನಿವಾರ್ಯವಾಗಿ ತಂಡಕ್ಕೆ ಸೇರಿಸಿಕೊಂಡಿದ್ದಾರೆ.

ಹರ್ಯಾಣದ ಲೆಗ್ ಸ್ಪಿನ್ನರ್ ಯುರ್ವೆುಂದ್ರ ಚಾಹಲ್‌ಗೆ ಕರೆ ನೀಡಲಾಗಿದೆ. ಅವರು ಝಿಂಬಾಬ್ವೆ ಪ್ರವಾಸದಲ್ಲಿ 3 ಏಕದಿನ ಹಾಗೂ ಟ್ವೆಂಟಿ-20 ಪಂದ್ಯ ಆಡಿದ್ದರು. ಈ ಋತುವಿನ ರಣಜಿಯಲ್ಲಿ ಹರ್ಯಾಣದ ಪರ 7 ಪಂದ್ಯಗಳಲ್ಲಿ 33 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಅಮಿತ್ ಮಿಶ್ರಾ, ಮನೀಶ್ ಪಾಂಡೆ, ಕೇದಾರ್ ಜಾಧವ್, ಉಮೇಶ್ ಯಾದವ್ ಹಾಗೂ ಜಸ್‌ಪ್ರಿತ್ ಬುಮ್ರಾ ಏಕದಿನದಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ. ಶಿಖರ್ ಧವನ್, ಸುರೇಶ್ ರೈನಾ, ಹಾರ್ದಿಕ್ ಪಾಂಡ್ಯ,ಭುವನೇಶ್ವರ್ ಹಾಗೂ ಆಶೀಷ್ ನೆಹ್ರಾ ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ವಾಪಸಾಗಿದ್ದಾರೆ.

 ಕನ್ನಡಿಗರಾದ ಕೆಎಲ್ ರಾಹುಲ್ ಹಾಗೂ ಮನೀಶ್ ಪಾಂಡೆ ಉಭಯ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

 ಲೋಧಾ ಸಮಿತಿ ಮುಂಬೈನಲ್ಲಿ ತಂಡದ ಆಯ್ಕೆ ಪ್ರಕ್ರಿಯೆ ನಡೆಸಲು ಸಮ್ಮತಿ ನೀಡಿದ ಬಳಿಕ ಏಕದಿನ ಹಾಗೂ ಟ್ವೆಂಟಿ-20 ತಂಡದ ಆಯ್ಕೆಗೆ ಆಯ್ಕೆ ಸಮಿತಿಯ ಸಭೆ ಶುಕ್ರವಾರ ಸಭೆ ಸೇರಿತ್ತು. ಸುಪ್ರೀಂಕೋರ್ಟ್‌ನ ಆದೇಶದ ಪ್ರಕಾರ ಬಿಸಿಸಿಐನ ಯಾವೊಬ್ಬ ಪದಾಧಿಕಾರಿಯೂ ತಂಡದ ಆಯ್ಕೆಯ ಸಭೆಯಲ್ಲಿ ಭಾಗವಹಿಸುವಂತಿಲ್ಲ.

ಏಕದಿನ ಪಂದ್ಯಗಳು ಪುಣೆ(ಜ.15), ಕಟಕ್(ಸಜ.19) ಹಾಗೂ ಕೋಲ್ಕತಾ (ಜ.22)ದಲ್ಲಿ ನಡೆಯಲಿವೆ. ಟ್ವೆಂಟಿ-20 ಪಂದ್ಯಗಳು ಕಾನ್ಪುರ(ಜ.26),ನಾಗ್ಪುರ(ಜ.29) ಹಾಗೂ ಬೆಂಗಳೂರು(ಫೆ.1)ನಲ್ಲಿ ನಡೆಯಲಿದೆ. ಭಾರತ ಏಕದಿನ ತಂಡ: ವಿರಾಟ್ ಕೊಹ್ಲಿ(ನಾಯಕ), ಎಂಎಸ್ ಧೋನಿ, ಕೆಎಲ್ ರಾಹುಲ್, ಶಿಖರ್ ಧವನ್, ಮನೀಷ್ ಪಾಂಡೆ, ಕೇದಾರ್ ಜಾಧವ್, ಯುವರಾಜ್ ಸಿಂಗ್, ಅಜಿಂಕ್ಯ ರಹಾನೆ, ಹಾರ್ದಿಕ್ ಪಾಂಡ್ಯ, ಆರ್.ಅಶ್ವಿನ್, ರವೀಂದ್ರ ಜಡೇಜ, ಅಮಿತ್ ಮಿಶ್ರಾ, ಭುವನೇಶ್ವರ ಕುಮಾರ್, ಉಮೇಶ್ ಯಾದವ್, ಜಸ್‌ಪ್ರಿತ್ ಬುಮ್ರಾ.

ಟ್ವೆಂಟಿ-20 ತಂಡ: ವಿರಾಟ್ ಕೊಹ್ಲಿ(ನಾಯಕ), ಎಂಎಸ್ ಧೋನಿ(ವಿಕೆಟ್‌ಕೀಪರ್), ಮನೀಷ್ ಪಾಂಡೆ, ಮನ್‌ದೀಪ್ ಸಿಂಗ್, ಕೆಎಲ್ ರಾಹುಲ್, ಯುವರಾಜ್ ಸಿಂಗ್, ಸುರೇಶ್ ರೈನಾ, ರಿಷಬ್ ಪಂತ್, ಹಾರ್ದಿಕ್ ಪಾಂಡ್ಯ, ಆರ್.ಅಶ್ವಿನ್, ರವೀಂದ್ರ ಜಡೇಜ, ಯುಝ್ವೆಂದ್ರ ಚಾಹಲ್, ಜಸ್‌ಪ್ರಿತ್ ಬುಮ್ರಾ, ಭುವನೇಶ್ವರ ಕುಮಾರ್, ಆಶೀಷ್ ನೆಹ್ರಾ.

ಗೊಂದಲಕ್ಕೆ ಸಿಲುಕಿದ್ದ ಬಿಸಿಸಿಐ

 ಬಿಸಿಸಿಐ ಗುರುವಾರ ಆಯ್ಕೆ ಸಮಿತಿಯ ಸಭೆಯನ್ನು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಮಧ್ಯಾಹ್ನ 12:30ಕ್ಕೆ ನಿಗದಿಪಡಿಸಿತ್ತು. ಆದರೆ, ಸುಪ್ರೀಂಕೋರ್ಟ್ ಈ ವಾರ ನೀಡಿರುವ ಆದೇಶದಲ್ಲಿ ಬಿಸಿಸಿಐ ಪದಾಧಿಕಾರಿಗಳು ತಮ್ಮ ಹುದ್ದೆಯಲ್ಲಿರಲು ಅನರ್ಹ ಎಂದು ತೀರ್ಪು ನೀಡಿರುವ ಕಾರಣ ಆಯ್ಕೆ ಸಮಿತಿಯ ಪಟ್ಟಿಯನ್ನು ಯಾರಿಗೆ ನೀಡಬೇಕೆಂಬ ಗೊಂದಲದಲ್ಲಿ ಬಿಸಿಸಿಐ ಸಿಲುಕಿತ್ತು. ಹೀಗಾಗಿ ಮಧ್ಯಾಹ್ನ 3 ಗಂಟೆಯ ತನಕ ಸಭೆ ನಡೆಯಲಿಲ್ಲ.

ಸಂಜೆ 4:20ಕ್ಕೆ ಆಯ್ಕೆ ಸಮಿತಿಯ ಅಧ್ಯಕ್ಷ ಎಂಎಸ್‌ಕೆ ಪ್ರಸಾದ್ ಪತ್ರಿಕಾಗೋಷ್ಠಿ ನಡೆಸಿದ ಬಳಿಕವಷ್ಟೇ ಎಲ್ಲ ಗೊಂದಲಕ್ಕೆ ತೆರೆ ಬಿತ್ತು.

   ‘‘ಧೋನಿಯ ಬಗ್ಗೆ ನಮಗೆಲ್ಲರಿಗೂ ಗೊತ್ತಿದೆ. ಅವರೋರ್ವ ಸಹಜ ಹಾಗೂ ಮುಂಚೂಣಿಯಲ್ಲಿರುವ ನಾಯಕ. ಯುವರಾಜ್ ಸಿಂಗ್ ಆಡುವ ರೀತಿಗೆ ನಾವು ಶ್ಲಾಘಿಸಲೇಬೇಕು. ದೇಶೀಯ ಕ್ರಿಕೆಟ್‌ನಲ್ಲಿ ಅವರು ನೀಡಿರುವ ಪ್ರದರ್ಶನ ಶ್ಲಾಘನೀಯ. ವಿರಾಟ್ ಕೊಹ್ಲಿ ನಮ್ಮಿಂದಿಗೆ ಮಾತನಾಡಿದ್ದು, ನಾಯಕತ್ವದ ಹೊಣೆ ಹೊರಲು ಸಮ್ಮತಿ ವ್ಯಕ್ತಪಡಿಸಿದ್ದಾರೆ. ಇದೊಂದು ಉತ್ತಮ ತಂಡವಾಗಿದೆ. ಆಯ್ಕೆ ಸಮಿತಿಯು ಯಶಸ್ಸು ಹಾಗೂ ವೈಫಲ್ಯದ ಜವಾಬ್ದಾರಿಯನ್ನು ತೆಗೆದುಕೊಳ್ಳಲಿದೆ’’

 ಎಂಎಸ್‌ಕೆ ಪ್ರಸಾದ್, ಆಯ್ಕೆ ಸಮಿತಿಯ ಅಧ್ಯಕ್ಷ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News