ಪೃಥ್ವಿ ಶಾ ಶತಕದ ಕ್ಷಣ ತಂದೆಯ ಎದೆ ಢವ ಢವ...!

Update: 2017-01-06 18:05 GMT

 ರಾಜ್‌ಕೋಟ್,ಜ.6: ತನ್ನ ಮೊದಲ ರಣಜಿ ಪಂದ್ಯದಲ್ಲಿ ಚೊಚ್ಚಲ ಶತಕ ದಾಖಲಿಸಿದ ಮುಂಬೈನ 17ರ ಹರೆಯದ ಪೃಥ್ವಿ ಶಾ ಶತಕ ದಾಖಲಿಸುವ ವೇಳೆ ಅವರ ತಂದೆಯ ಎದೆ ಢವ ಢವ ಆಗಿತ್ತು.
 ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಕ್ರೀಡಾಂಗಣದಲ್ಲಿ ಪೃಥ್ವಿ 99 ರಲ್ಲಿ ಔಟಾಗುವ ಅವಕಾಶ ಕಂಡು ಬಂದಾಗ ಅವರ ಹೆತ್ತವರು ಆಘಾತಗೊಂಡರು. ತಂದೆ ಪಂಕಜ್ ಮತ್ತು ಅಜ್ಜಿ ದುಲ್ಲಾರಿ ಸಾಂತಾಕ್ರೂಝ್‌ನಲ್ಲಿರುವ ಮನೆಯಲ್ಲಿ ದೇವರ ಫೋಟೋದ ಮುಂದೆ ನಿಂತು ಪೃಥ್ವಿಗೆ ಶತಕ ದಯಪಾಲಿಸುವಂತೆ ಪ್ರಾರ್ಥಿಸುತ್ತಿದ್ದರು.
 
ಪೃಥ್ವಿ 99ರಿಂದ 100 ರನ್ ತಲುಪಲು 330 ಸೆಕೆಂಡ್‌ಗಳು ಅವರ ಹೆತ್ತವರಿಗೆ ಅದೊಂದು ಸವಾಲಿನ ಕ್ಷಣವಾಗಿತ್ತು. 50.2ನೆ ಓವರ್‌ನಲ್ಲಿ ಶಾ ಅವರು ವಿಜಯ ಶಂಕರ್ ಎಸೆತದಲ್ಲಿ ಚೆಂಡನ್ನು ಶಾರ್ಟ್ ಥರ್ಡ್ ಮ್ಯಾನ್ ಕಡೆಗೆ ತಳ್ಳಿದರು. ಗಲ್ಲಿಯಲ್ಲಿ ಕ್ಷೇತ್ರ ರಕ್ಷಣೆಯಲ್ಲಿದ್ದ ತಮಿಳುನಾಡಿನ ಫೀಲ್ಡರ್ ಬಾಬಾ ಕ್ಯಾಚ್ ತೆಗೆದುಕೊಂಡಿದ್ದರು. ಅಂಪೈರ್ ಔಟೆಂದು ಬೆರಳು ಮೇಲೆತ್ತಿದ್ದರು. ಆಗ ಶಾ ಹೆತ್ತವರು ಆಘಾತಗೊಂಡರು.
 ‘‘ಎಂತಹ ಕೆಲಸ ಮಾಡಿದಿ ಮಗನೆ ?’’ ಎನ್ನುತ್ತಾ ತಂದೆ ಪಂಕಜ್ ಮುಖಕ್ಕೆ ಕೈ ಇಟ್ಟರು. ಅವರ ಕನಸು ನುಚ್ಚುನೂರಾಯಿತು. ಅಜ್ಜಿ ಆಘಾತಗೊಂಡು ಏನನ್ನು ಮಾತನಾಡದೆ ಬೆಡ್‌ರೂಮ್‌ಗೆ ತೆರಳಿದರು. ಮನೆಯೊಳಗೆ ವೌನ ಆವರಿಸಿತು.
 
ಆಗ ಅಲ್ಲೊಂದು ಅಚ್ಚರಿ ಕಾದಿತ್ತು. ಟಿವಿ ರಿಪ್ಲೇಯನ್ನು ಪರೀಕ್ಷಿಸಿದಾಗ ಪೃಥ್ವಿ ಎದುರಿಸಿದ ಎಸೆತ ನೋಬಾಲ್ ಆಗಿತ್ತು. ವಿಜಯ್ ಶಂಕರ್ ನೋಬಾಲ್ ಎಸೆದಿದ್ದರು. ಇದರಿಂದಾಗಿ ಪೃಥ್ವಿ ಜೀವದಾನ ಪಡೆದರು. ಈ ಸುದ್ದಿ ತಿಳಿದ ಪಂಕಜ್ ಆಘಾತದಿಂದ ಹೊರ ಬಂದರು. ಪಂಕಜ್ ನೀವು ಹೆದರಬೇಡಿ.ದೇವನು ನಮ್ಮಿಂದಿಗೆ ಇದ್ದಾನೆ. ಪೃಥ್ವಿ ಶತಕ ಬಾರಿಸುತ್ತಾನೆ ಎಂದು ನೆರೆಮನೆಯೊಬ್ಬರು ಪಂಕಜ್‌ಗೆ ಧೈರ್ಯ ತುಂಬಿದರು.
ಜೀವದಾನ ಪಡೆದ ಪೃಥ್ವಿ ಮುಂದಿನ ಎಸೆತವನ್ನು ಎದುರಿಸುವಾಗ ಟಿವಿ ಪರದೆಯಲ್ಲಿ ಅವರ ಬ್ಯಾಟಿಂಗ್‌ನ್ನು ನೋಡುತ್ತಿದ್ದ ಪಂಕಜ್ ‘‘ ಮಗ ಎಚ್ಚರಿಕೆಯಿಂದ ಆಡುವಂತೆ ಹೇಳಿದರು.ಮುಂದೆ ಮೂರು ಎಸೆತಗಳನ್ನು ಎದುರಿಸಿದ ಅವರು ರನ್ ಗಳಿಸಲಿಲ್ಲ.ನಾಲ್ಕನೆ ಎಸೆತದಲ್ಲಿ ಪೃಥ್ವಿ 1 ರನ್ ಗಳಿಸುವ ಮೂಲಕ ಶತಕ ಪೂರ್ಣಗೊಳಿಸಿದರು. ಫೃಥ್ವಿ ತಂದೆ ಪಂಕಜ್ ಸಂತಸಕ್ಕೆ ಪಾರವೇ ಇರಲಿಲ್ಲ. ಕುಣಿದಾಡಿದರು. ಭಗವಂತನನ್ನು ಸ್ಮರಿಸಿದರು. ಪೃಥ್ವಿ 90ರಿಂದ 100 ರನ್ ಪೂರೈಸುವುದಕ್ಕಾಗಿ 25 ಎಸೆತಗಳನ್ನು ಎದುರಿಸಿದ್ದರು.
ಪೃಥ್ವಿ ಮೊದಲ ಇನಿಂಗ್ಸ್‌ನಲ್ಲಿ 4 ರನ್ ಗಳಿಸಿ ಔಟಾಗಿದ್ದರು. ಅಂದು ರಾತ್ರಿ ಮಗನನ್ನು ದೂರವಾಣಿಯಲ್ಲಿ ಸಂಪರ್ಕಿಸಿದ್ದ ತಂದೆ ಪಂಕಜ್ ಅವರು ಮಗನಿಗೆ ‘‘ಇದು ನಿನಗೆ ಕೊನೆಯ ಅವಕಾಶವಾಗಿದೆ. ರಣಜಿಯಲ್ಲಿ ಆಡಲು ಅವಕಾಶ ಸಿಕ್ಕಿದೆ. ಈ ಅವಕಾಶವನ್ನು ವ್ಯರ್ಥಗೊಳಿಸಬೇಡ. 50 ಅಥವಾ 60 ರನ್ ಗಳಿಸಿದರೆ ಫೈನಲ್‌ನಲ್ಲಿ ಅವಕಾಶ ಪಡೆಯಲು ಸಾಧ್ಯ’’ ಎಂದು ಸಲಹೆ ನೀಡಿರುವುದಾಗಿ ಪಂಕಜ್ ಹೇಳಿದ್ದಾರೆ.
ಪೃಥ್ವಿ ಮೂರು ವರ್ಷದ ಮಗುವಾಗಿದ್ದಾಗ ಅವರ ತಾಯಿ ಸುನೀತಾ ನಿಧನರಾಗಿದ್ದರು. ತಂದೆ ಮತ್ತು ಅಜ್ಜಿಯ ಆಶ್ರಯದಲ್ಲಿ ಪೃಥ್ವಿ ಬೆಳೆದಿದ್ದರು.
 ಪೃಥ್ವಿ ಚೊಚ್ಚಲ ಪಂದ್ಯದಲ್ಲಿ ಶತಕ ಬಾರಿಸಿದ ಎರಡನೆ ದಾಂಡಿಗ ಎಂಬ ದಾಖಲೆ ಬರೆದಿದ್ದರು. ಪೃಥ್ವಿ ವಯಸ್ಸು 17 ವರ್ಷ ಮತ್ತು 57ದಿನಗಳು. ಅವರು ಆಡಿದ ಮೊದಲ ಪಂದ್ಯದಲ್ಲಿ ಚೊಚ್ಚಲ ಶತಕ ದಾಖಲಿಸಿದ ಎರಡನೆ ಕಿರಿಯ ಆಟಗಾರ. ಸಚಿನ್ ತೆಂಡುಲ್ಕರ್ ಈ ಸಾಧನೆ ಮಾಡಿದ ಮೊದಲ ಆಟಗಾರ. ಸಚಿನ್ ತೆಂಡುಲ್ಕರ್ 1998ರಲ್ಲಿ ಈ ದಾಖಲೆ ನಿರ್ಮಿಸುವಾಗ ಅವರ ವಯಸ್ಸು 15 ವರ್ಷ ಮತ್ತು 231 ದಿನಗಳು.

ಪೃಥ್ವಿ ಕಳೆದ 23 ವರ್ಷಗಳ ಅವಧಿಯಲ್ಲಿ ಚೊಚ್ಚಲ ಶತಕ ದಾಖಲಿಸಿದ ಮುಂಬೈನ ಮೊದಲ ಆಟಗಾರ. 1994ರಲ್ಲಿ ಅಮೊಲ್ ಮಜುಂದಾರ್ ಅವರು ಹರ್ಯಾಣದ ವಿರುದ್ಧ ಚೊಚ್ಚಲ ಶತಕ(260) ದಾಖಲಿಸಿದ್ದರು.

,,,,,,,,,,

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News