ಕತರ್ ಟೆನಿಸ್ ಓಪನ್: ಮರ್ರೆ, ಜೊಕೊವಿಕ್ ಫೈನಲ್ ಸೆಣಸಾಟ

Update: 2017-01-07 18:23 GMT

ದೋಹಾ, ಜ.7: ವಿಶ್ವದ ಇಬ್ಬರು ಶ್ರೇಷ್ಠ ಆಟಗಾರರಾದ ಆ್ಯಂಡಿ ಮರ್ರೆ ಹಾಗೂ ನೊವಾಕ್ ಜೊಕೊವಿಕ್ ಕತರ್ ಓಪನ್ ಟೆನಿಸ್ ಟೂರ್ನಿಯಲ್ಲಿ ಫೈನಲ್‌ಗೆ ತಲುಪಿದ್ದಾರೆ.

ಶುಕ್ರವಾರ ಇಲ್ಲಿ ನಡೆದ ಪುರುಷರ ಸಿಂಗಲ್ಸ್‌ನ ಮೊದಲ ಸೆಮಿ ಫೈನಲ್‌ನಲ್ಲಿ ಜೊಕೊವಿಕ್ ಅವರು ವಿಶ್ವದ ನಂ.42ನೆ ಆಟಗಾರ ಫೆರ್ನಾಂಡೊ ವೆರ್ಡಾಸ್ಕೊರನ್ನು 4-6, 7-6(9/7),6-3 ಸೆಟ್‌ಗಳ ಅಂತರದಿಂದ ರೋಚಕವಾಗಿ ಮಣಿಸಿದರು.

 ಮತ್ತೊಂದು ಸೆಮಿಫೈನಲ್‌ನಲ್ಲಿ ಬ್ರಿಟನ್‌ನ ಆ್ಯಂಡಿ ಮರ್ರೆ ಅವರು ಥಾಮಸ್ ಬೆರ್ಡಿಕ್‌ರನ್ನು 6-3, 6-4 ನೇರ ಸೆಟ್‌ಗಳಿಂದ ಸೋಲಿಸಿದ್ದಾರೆ. ಈ ಮೂಲಕ ಸತತ 28ನೆ ಗೆಲುವು ದಾಖಲಿಸಿದ್ದಾರೆ. ಕಳೆದ ವರ್ಷ ಸೆಪ್ಟಂಬರ್‌ನಲ್ಲಿ ಮರ್ರೆಯ ಅಜೇಯ ಗೆಲುವಿನ ಓಟ ಆರಂಭವಾಗಿತ್ತು.

ವಿಶ್ವದ ನಂ.1 ಆಟಗಾರ ಮರ್ರೆ ಹಾಗೂ ಪ್ರತಿಸ್ಪರ್ಧಿ ಜೊಕೊವಿಕ್ ನಡುವೆ ಶನಿವಾರ ಫೈನಲ್ ಪಂದ್ಯ ನಡೆಯಲಿದೆ. ಜ.16 ರಿಂದ ಆರಂಭವಾಗಲಿರುವ ವರ್ಷದ ಮೊದಲ ಗ್ರಾನ್‌ಸ್ಲಾಮ್ ಟೂರ್ನಿಗೆ ಮೊದಲು ಈ ಟೂರ್ನಿಯು ಉಭಯ ಆಟಗಾರರಿಗೆ ಲಿಟ್ಮಸ್ ಟೆಸ್ಟ್ ಆಗಿದೆ.

‘‘ಮೊದಲ ಸೆಟ್‌ನಲ್ಲಿ ಸೋತ ಬಳಿಕ ಎರಡನೆ ಸೆಟ್‌ನಲ್ಲಿ ಟೈ-ಬ್ರೇಕ್‌ನ ಮೂಲಕ ಗೆಲುವು ಸಾಧಿಸಿದ್ದು ಸತತ ಎರಡನೆ ಬಾರಿ ದೋಹಾ ಓಪನ್‌ನ ಫೈನಲ್‌ಗೆ ತಲುಪಿದ್ದು ನನ್ನ ಪಾಲಿಗೆ ಅದೃಷ್ಟದ ಸಂಗತಿ. ಖಂಡಿತವಾಗಿಯೂ ಇದು ನಾನು ಆಡಿರುವ ಅತ್ಯಂತ ಕುತೂಹಲಭರಿತ ಪಂದ್ಯವಾಗಿತ್ತು. ಫಲಿತಾಂಶ ಏನೇ ಬಂದರೂ ನಮಗೆ ಇಂತಹ ಪಂದ್ಯಗಳ ಅಗತ್ಯವಿದೆ’’ ಎಂದು ಜೊಕೊವಿಕ್ ಹೇಳಿದ್ದಾರೆ.

ಈ ಹಿಂದಿನ ಸುತ್ತಿನಲ್ಲಿ ಜೋರಾಗಿ ಬೀಸುತ್ತಿದ್ದ ಗಾಳಿ ಹಾಗೂ ಎದುರಾಳಿಗಳ ವಿರುದ್ಧ ಪರದಾಟ ನಡೆಸಿದ್ದ ಮರ್ರೆ ಸೆಮಿ ಫೈನಲ್ ಪಂದ್ಯವನ್ನು ಸುಲಭವಾಗಿ ಗೆದ್ದುಕೊಂಡರು. ಬೆರ್ಡಿಕ್ ವಿರುದ್ಧ ಒಂದು ಗಂಟೆಯೊಳಗೆ ಜಯ ಸಾಧಿಸಿದರು.

ಜೊಕೊವಿಕ್ ವಿರುದ್ಧದ ಪಂದ್ಯವನ್ನು ಎದುರು ನೋಡುತ್ತಿರುವೆ. ಅದೊಂದು ಶ್ರೇಷ್ಠ ಪಂದ್ಯವಾಗಿದೆ. ವಿಶ್ವಶ್ರೇಷ್ಠ ಆಟಗಾರನ ವಿರುದ್ಧ ಫೈನಲ್ ಪಂದ್ಯವನ್ನು ಆಡುವ ಮೂಲಕ ಹೊಸ ವರ್ಷ ಆರಂಭಿಸುತ್ತಿರುವುದು ಮರೆಯಲಾರದ ಕ್ಷಣ ಎಂದು ಮರ್ರೆ ಹೇಳಿದ್ದಾರೆ.

ಮರ್ರೆ ವಿರುದ್ಧ 24 ಪಂದ್ಯಗಳನ್ನು ಜಯಿಸಿರುವ ಜೊಕೊವಿಕ್ ಐತಿಹಾಸಿಕವಾಗಿ ಮೇಲುಗೈ ಹೊಂದಿದ್ದಾರೆ. ಆದರೆ, ಮರ್ರೆ ಕಳೆದ ಬಾರಿ ನವೆಂಬರ್‌ನಲ್ಲಿ ಲಂಡನ್‌ನಲ್ಲಿ ನಡೆದಿದ್ದ ಎಟಿಪಿ ವರ್ಲ್ಡ್ ಟೂರ್ ಫೈನಲ್ಸ್ ಟೂರ್ನಿಯಲ್ಲಿ ಜೊಕೊವಿಕ್‌ರನ್ನು ಮಣಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News