ಸಾನಿಯಾಗೆ ಬ್ರಿಸ್ಬೇನ್ ಡಬಲ್ಸ್ ಪ್ರಶಸ್ತಿ

Update: 2017-01-07 18:25 GMT

ಬ್ರಿಸ್ಬೇನ್, ಜ.7: ಭಾರತೀಯ ಟೆನಿಸ್ ತಾರೆ ಸಾನಿಯಾ ಮಿರ್ಝಾ ಅಮೆರಿಕದ ಬೆಥಾನಿ ಮ್ಯಾಟೆಕ್-ಸ್ಯಾಂಡ್ಸ್ ಜೊತೆಗೂಡಿ ವರ್ಷದ ಮೊದಲ ಡಬಲ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಆದರೆ, ವಿಶ್ವದ ನಂ.1 ಸ್ಥಾನವನ್ನು ಕಳೆದುಕೊಂಡಿದ್ದಾರೆ.

ಇಲ್ಲಿ ನಡೆದ ಮಹಿಳೆಯರ ಡಬಲ್ಸ್ ಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ಇಂಡೋ-ಅಮೆರಿಕದ ಜೋಡಿ ಸಾನಿಯಾ-ಬೆಥಾನಿ ರಶ್ಯದ ದ್ವಿತೀಯ ಶ್ರೇಯಾಂಕದ ಎಕಟೆರಿನಾ ಮಕರೋವಾ ಹಾಗೂ ಎಲೆನಾ ವೆಸ್ನಿನಾರನ್ನು 6-2, 6-3 ನೇರ ಸೆಟ್‌ಗಳ ಅಂತರದಿಂದ ಮಣಿಸಿ ಪ್ರಶಸ್ತಿ ಎತ್ತಿಹಿಡಿದರು.

ಸಾನಿಯಾ ಪ್ರಶಸ್ತಿಯನ್ನು ಗೆದ್ದ ಹೊರತಾಗಿಯೂ ಕಳೆದ 91 ವಾರಗಳ ಕಾಲ ಕಾಯ್ದುಕೊಂಡಿದ್ದ ವಿಶ್ವದ ನಂ.1 ಡಬಲ್ಸ್ ರ್ಯಾಂಕಿಂಗ್‌ನ್ನು ಕಳೆದುಕೊಂಡಿದ್ದಾರೆ. ನಂ.1 ರ್ಯಾಂಕ್ ಸಾನಿಯಾರ ಜೊತೆಗಾರ್ತಿ ಬೆಥಾನಿ ಪಾಲಾಗಿದೆ.

 ‘‘ನನಗೆ ವಿಶ್ವದ ನಂ.1 ಮಿಸ್ ವರ್ಲ್ಡ್ ಕಿರೀಟವನ್ನು ಹಸ್ತಾಂತರಿಸಿದ ಅನುಭವವಾಗುತ್ತಿದೆ. ಫೈನಲ್‌ನಲ್ಲಿ ವೆಸ್ನಿನಾ ಹಾಗೂ ಮಕರೋವಾ ವಿರುದ್ಧ ಉತ್ತಮ ಪಂದ್ಯಗಳನ್ನು ಆಡಿದ್ದೇವೆ. ಹಾಲಿ ಚಾಂಪಿಯನ್ ಆಗಿ ಮತ್ತೊಮ್ಮೆ ಪ್ರಶಸ್ತಿ ಜಯಿಸಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ. ನನ್ನ ಜೊತೆಗಾರ್ತಿ ಹಾಗೂ ಸ್ನೇಹಿತೆ ಬೆಥಾಲಿಗೆ ಕೃತಜ್ಞತೆ ಸಲ್ಲಿಸುವೆ’’ ಎಂದು ಸಾನಿಯಾ ಪ್ರತಿಕ್ರಿಯಿಸಿದರು.

 ಸಾನಿಯಾ ಮುಂದಿನ ವಾರ ಆರಂಭವಾಗಲಿರುವ ಪ್ರತಿಷ್ಠಿತ ಆಸ್ಟ್ರೇಲಿಯನ್ ಓಪನ್‌ನಲ್ಲಿ ಹೊಸ ಜೊತೆಗಾರ್ತಿ ಝೆಕ್‌ನ ಬಾರ್ಬೊರ ಸ್ಟ್ರೈಕೋವಾರೊಂದಿಗೆ ಆಡಲಿದ್ದಾರೆ.

ಪ್ಲಿಸ್ಕೋವಾಗೆ ಸಿಂಗಲ್ಸ್ ಪ್ರಶಸ್ತಿ: ಬ್ರಿಸ್ಬೇನ್ ಇಂಟರ್‌ನ್ಯಾಶನಲ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ಫ್ರಾನ್ಸ್‌ನ ಅಲಿಝ್ ಕಾರ್ನೆಟ್‌ರನ್ನು 6-0, 6-3 ನೇರ ಸೆಟ್‌ಗಳ ಅಂತರದಿಂದ ಮಣಿಸಿರುವ ಕ್ಯಾರೊಲಿನಾ ಪ್ಲಿಸ್ಕೋವಾ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಈ ಮೂಲಕ ಮುಂಬರುವ ಆಸ್ಟ್ರೇಲಿಯನ್ ಓಪನ್‌ಗೆ ಭರ್ಜರಿ ತಯಾರಿ ನಡೆಸಿದ್ದಾರೆ.

ಈ ಗೆಲುವಿನೊಂದಿಗೆ ಪ್ಲಿಸ್ಕೋವಾ ಸೋಮವಾರ ಬಿಡುಗಡೆಯಾಗಲಿರುವ ಟೆನಿಸ್ ರ್ಯಾಂಕಿಂಗ್‌ನಲ್ಲಿ ನಂ.5ನೆ ಸ್ಥಾನಕ್ಕೇರಲಿದ್ದಾರೆ. ಕಳೆದ ವರ್ಷ ಯುಎಸ್ ಓಪನ್‌ನಲ್ಲಿ ಏಂಜೆಲಿಕ್ ಕೆರ್ಬರ್‌ಗೆ ಶರಣಾಗಿ ರನ್ನರ್-ಅಪ್ ಆಗಿದ್ದ ಪ್ಲಿಸ್ಕೋವಾ ಈ ವರ್ಷ ಆಸ್ಟ್ರೇಲಿಯನ್ ಓಪನ್ ಜಯಿಸುವ ಓರ್ವ ಫೇವರಿಟ್ ಆಟಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ.

ಬ್ರಿಸ್ಬೇನ್ ಪುರುಷರ ಫೈನಲ್: ಡಿಮಿಟ್ರೊವ್‌ಗೆ ನಿಶಿಕೊರಿ ಎದುರಾಳಿ

ಬ್ರಿಸ್ಬೇನ್, ಜ.7: ಹಾಲಿ ಚಾಂಪಿಯನ್ ಕೆನಡಾದ ಮಿಲಾಸ್ ರಾವೊನಿಕ್‌ರನ್ನು 7-6(7), 6-2 ಸೆಟ್‌ಗಳ ಅಂತರದಿಂದ ಮಣಿಸಿರುವ ಬಲ್ಗೇರಿಯದ ಗ್ರಿಗೊರ್ ಡಿಮಿಟ್ರೊವ್ ಬ್ರಿಸ್ಬೇನ್ ಇಂಟರ್‌ನ್ಯಾಶನಲ್ ಟೆನಿಸ್ ಟೂರ್ನಿಯಲ್ಲಿ ಫೈನಲ್‌ಗೆ ತಲುಪಿದರು.

ಶನಿವಾರ ಇಲ್ಲಿ ನಡೆದ ಪುರುಷರ ಸಿಂಗಲ್ಸ್‌ನ ಸೆಮಿ ಫೈನಲ್‌ನಲ್ಲಿ ಜಯಶಾಲಿಯಾಗಿರುವ ಡಿಮಿಟ್ರೊವ್ ಫೈನಲ್‌ನಲ್ಲಿ ಜಪಾನ್‌ನ ಕೀ ನಿಶಿಕೊರಿ ಅವರನ್ನು ಎದುರಿಸಲಿದ್ದಾರೆ. ನಿಶಿಕೊರಿ ಮತ್ತೊಂದು ಸೆಮಿಫೈನಲ್‌ನಲ್ಲಿ ಸ್ವಿಸ್‌ನ ಯುಎಸ್ ಓಪನ್ ಚಾಂಪಿಯನ್ ಸ್ಟಾನ್ ವಾವ್ರಿಂಕರನ್ನು 7-6(3), 6-3 ಸೆಟ್‌ಗಳ ಅಂತರದಿಂದ ಮಣಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News