×
Ad

ನ್ಯೂಸ್ ವೆಬ್‌ಸೈಟ್ ತಪ್ಪನ್ನು ಹುಡುಕಲು ಹೋಗಿ ತಾನೆ ತಪ್ಪು ಮಾಡಿದ ಸೆಹ್ವಾಗ್!

Update: 2017-01-08 20:54 IST

ಹೊಸದಿಲ್ಲಿ, ಜ.8: ಭಾರತದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಮತ್ತೊಮ್ಮೆ ಸಾಮಾಜಿಕ ಜಾಲತಾಣ ಟ್ವಿಟರ್‌ನ ಮೂಲಕ ಸುದ್ದಿಯಾಗಿದ್ದಾರೆ.

ನ್ಯೂಸ್ ವೆಬ್‌ಸೈಟ್ ಎಮಿರೇಟ್ಸ್ 2/47ಡಾಟ್‌ಕಾಮ್ ತನ್ನ ಟ್ವಿಟರ್ ಖಾತೆಯಲ್ಲಿ ಮಹೇಂದ್ರ ಸಿಂಗ್ ಧೋನಿಯ ನಿವೃತ್ತಿ ಕುರಿತ ಪ್ರತಿಕ್ರಿಯೆ ವೇಳೆ ಧೋನಿಯ ಬದಲಿಗೆ ಬಾಲಿವುಡ್ ನಟ ಸುಶಾಂತ್ ಸಿಂಗ್ ರಾಜ್‌ಪೂತ್ ಚಿತ್ರವನ್ನು ಹಾಕಿತ್ತು. ಇದನ್ನು ಗಮನಿಸಿದ ಸೆಹ್ವಾಗ್ ನ್ಯೂಸ್ ವೆಬ್‌ಸೈಟ್‌ನ ಟ್ವಿಟರ್ ಖಾತೆ ಎಮಿರೇಟ್ಸ್ ಏರ್‌ಲೈನ್‌ಗೆ ಸೇರಿದ್ದೆಂದು ತಪ್ಪಾಗಿ ಭಾವಿಸಿ ತನ್ನ ಟ್ವಿಟರ್‌ನಲ್ಲಿ ವೆಬ್‌ಸೈಟ್ ಸುದ್ದಿಯನ್ನು ಉಲ್ಲೇಖಿಸಿದ್ದರು.

ಎಮಿರೇಟ್ಸ್ 2/47ಡಾಟ್‌ಕಾಮ್ ವೆಬ್‌ಸೈಟ್ ವಿರಾಟ್ ಕೊಹ್ಲಿ ಅವರು ಧೋನಿಯ ಉತ್ತರಾಧಿಕಾರಿಯಾಗಿ ಆಯ್ಕೆಯಾಗಿರುವುದನ್ನು ಕುರಿತ ಸುದ್ದಿಯನ್ನು ಹಾಕಿದ್ದಾಗ ಕೊಹ್ಲಿ ಹಾಗೂ ರಾಜ್‌ಪೂತ್ ಫೋಟೊವನ್ನು ಹಾಕಿತ್ತು. ರಾಜ್‌ಪೂತ್ ಧೋನಿಯ ಜೀವನಾಧಾರಿತ ಬಾಲಿವುಡ್ ಸಿನೆಮಾ ‘ಎಂ.ಎಸ್. ಧೋನಿ-ಅನ್‌ಟೋಲ್ಡ್ ಸ್ಟೋರಿ’ಯಲ್ಲಿ ಧೋನಿಯ ಪಾತ್ರ ನಿರ್ವಹಿಸಿದ್ದರು.

ಸೆಹ್ವಾಗ್ ನ್ಯೂಸ್ ವೆಬ್‌ಸೈಟ್‌ನ ಈ ತಪ್ಪನ್ನು ಎತ್ತಿ ಹಿಡಿದು ತನ್ನನ್ನು ಹೋಲುವ ವ್ಯಕ್ತಿಯ ಚಿತ್ರವನ್ನು ಹಾಕಿ ‘‘ನಾನು ನಿಮ್ಮೊಂದಿಗೆ ವಿಮಾನ ಯಾನ ಮಾಡಬೇಕೆಂದು ಯೋಚಿಸಿರುವೆ. ನನ್ನ ಬದಲಿಗೆ ಈ ವ್ಯಕ್ತಿಯನ್ನು ಕರೆದುಕೊಂಡು ಹೋಗುವುದಿಲ್ಲ ಎಂಬ ವಿಶ್ವಾಸದಲ್ಲಿರುವೆ’’ ಎಂದು ಟ್ವೀಟ್ ಮಾಡಿದ್ದರು.

ಈ ತಮಾಷೆ ಇಲ್ಲಿಗೆ ನಿಲ್ಲಲಿಲ್ಲ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಎಮಿರೇಟ್ಸ್ ಏರ್‌ಲೈನ್ ಅಧಿಕಾರಿಗಳು ‘‘ವೀರೇಂದ್ರ ಸೆಹ್ವಾಗ್‌ರೇ  ಚಿಂತೆ ಮಾಡಬೇಡಿ. ನಾವು ನಿಮ್ಮ ಬೆನ್ನಿಗಿದ್ದೇವೆ. ನೀವು ಮುಂದಿನ ದಿನಗಳಲ್ಲಿ ನಮ್ಮ ವಿಮಾನದಲ್ಲೇ ಬರುವ ನಿರೀಕ್ಷೆಯಲ್ಲಿದ್ದೇವೆ’’ ಎಂದು ಟ್ವೀಟ್ ಮಾಡಿದ್ದಾರೆ.

 ಸೆಹ್ವಾಗ್ ಅವರು ವೆಬ್‌ಸೈಟ್ ಯಾರಿಗೆ ಸೇರಿದ್ದು ಎಂಬ ಮುಖ್ಯ ಅಂಶವನ್ನೇ ತಪ್ಪಾಗಿ ತಿಳಿದುಕೊಂಡಿದ್ದರು. ಟ್ವಿಟರ್ ಖಾತೆ ಏರ್‌ಲೈನ್‌ಗೆ ಸಂಬಂಧಿಸಿದ್ದು ಎಂದು ಅವರು ಭಾವಿಸಿದ್ದರು. ಆದರೆ ಅದು ನಿಜವಾಗಿಯೂ ಎಮಿರೇಟ್ಸ್ ಏರ್‌ಲೈನ್ಸ್‌ಗೆ ಸಂಬಂಧಿಸಿದ್ದಾಗಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News