ಟೆಸ್ಟ್ ರ್ಯಾಂಕಿಂಗ್: ಅಗ್ರಸ್ಥಾನ ಕಾಯ್ದುಕೊಂಡ ಅಶ್ವಿನ್, ಜಡೇಜ

Update: 2017-01-08 17:58 GMT

 ದುಬೈ, ಜ.8: ಭಾರತದ ಅವಳಿ ಸ್ಪಿನ್ನರ್‌ಗಳಾದ ರವಿಚಂದ್ರನ್ ಅಶ್ವಿನ್ ಹಾಗೂ ರವೀಂದ್ರ ಜಡೇಜ ಐಸಿಸಿ ಟೆಸ್ಟ್ ಬೌಲರ್‌ಗಳ ರ್ಯಾಂಕಿಂಗ್‌ನಲ್ಲಿ ಅಗ್ರ ಎರಡು ಸ್ಥಾನ ಉಳಿಸಿಕೊಂಡಿದ್ದಾರೆ. ನಾಯಕ ವಿರಾಟ್ ಕೊಹ್ಲಿ ದ್ವಿತೀಯ ಸ್ಥಾನದಲ್ಲಿ ಮುಂದುವರಿದಿದ್ದಾರೆ.

ಅಶ್ವಿನ್(887 ಅಂಕ) ಹಾಗೂ ಜಡೇಜ(879 ಅಂಕ) ಕ್ರಮವಾಗಿ ಬೌಲರ್‌ಗಳ ರ್ಯಾಂಕಿಂಗ್‌ನಲ್ಲಿ ನಂ.1 ಹಾಗೂ 2ನೆ ಸ್ಥಾನದಲ್ಲಿದ್ದಾರೆ. ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಆಸ್ಟ್ರೇಲಿಯದ ವೇಗದ ಬೌಲರ್ ಜೋಶ್ ಹೇಝಲ್‌ವುಡ್(860 ಅಂಕ) 29 ಅಂಕವನ್ನು ಗಳಿಸಿ ಮೂರನೆ ಸ್ಥಾನಕ್ಕೆ ಭಡ್ತಿ ಪಡೆದಿದ್ದಾರೆ.

ದಕ್ಷಿಣ ಆಫ್ರಿಕದ ವೇಗದ ಬೌಲರ್ ಕಾಗಿಸೊ ರಬಾಡ 9 ಸ್ಥಾನ ಭಡ್ತಿ ಪಡೆದು 8ನೆ ಸ್ಥಾನ ತಲುಪಿದರು. ಮುಹಮ್ಮದ್ ಶಮಿ(19ನೆ ಸ್ಥಾನ) ಅಗ್ರ-20 ಪಟ್ಟಿಯಲ್ಲಿರುವ ಭಾರತದ ಇನ್ನೋರ್ವ ಬೌಲರ್ ಆಗಿದ್ದಾರೆ.

ಯೂನಿಸ್‌ಖಾನ್‌ಗೆ ಭಡ್ತಿ: ಪಾಕಿಸ್ತಾನದ ಹಿರಿಯ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಯೂನಿಸ್ ಖಾನ್ ಸಿಡ್ನಿಯಲ್ಲಿ ಆಸ್ಟ್ರೇಲಿಯ ವಿರುದ್ಧದ ಮೂರನೆ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಅಜೇಯ 175 ರನ್ ಗಳಿಸಿದ್ದು, ಈ ಹಿನ್ನೆಲೆಯಲ್ಲಿ ಐಸಿಸಿ ಟೆಸ್ಟ್ ಬ್ಯಾಟ್ಸ್‌ಮನ್‌ಗಳ ರ್ಯಾಂಕಿಂಗ್‌ನಲ್ಲಿ ಏಳು ಸ್ಥಾನ ಮೇಲಕ್ಕೇರಿ ಏಳನೆ ಸ್ಥಾನ ತಲುಪಿದ್ದಾರೆ.

 ಆಸೀಸ್ ವಿರುದ್ಧದ ಸರಣಿಯಲ್ಲಿ 11 ವಿಕೆಟ್‌ಗಳನ್ನು ಕಬಳಿಸಿ ಪಾಕ್‌ನ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡಿದ್ದ ವೇಗದ ಬೌಲರ್ ವಹಾಬ್ ರಿಯಾಝ್ ಐಸಿಸಿ ಟೆಸ್ಟ್ ಬೌಲರ್‌ಗಳ ರ್ಯಾಂಕಿಂಗ್‌ನಲ್ಲಿ ಇದೇ ಮೊದಲ ಬಾರಿ ಅಗ್ರ-20ರಲ್ಲಿ ಸ್ಥಾನ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News