ಜೊಕೊವಿಕ್‌ಗೆ ಕತರ್ ಓಪನ್ ಪ್ರಶಸ್ತಿ

Update: 2017-01-08 18:02 GMT

ದೋಹಾ, ಜ.8: ವಿಶ್ವದ ನಂ.1 ಆಟಗಾರ ಆ್ಯಂಡಿ ಮರ್ರೆ ಎಟಿಪಿ ಟೂರ್‌ನಲ್ಲಿ ಸತತ 28 ಪಂದ್ಯಗಳ ಗೆಲುವಿನ ಓಟಕ್ಕೆ ಕೊನೆಗೂ ಬ್ರೇಕ್ ಹಾಕಿರುವ ಸರ್ಬಿಯದ ಆಟಗಾರ ನೊವಾಕ್ ಜೊಕೊವಿಕ್ ಕತರ್ ಓಪನ್ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಂಡಿದ್ದಾರೆ.

ಶನಿವಾರ ಇಲ್ಲಿ ಸುಮಾರು 3 ಗಂಟೆಗಳ ಕಾಲ ನಡೆದ ಪುರುಷರ ಸಿಂಗಲ್ಸ್‌ನ ಫೈನಲ್ ಹಣಾಹಣಿಯಲ್ಲಿ ಸರ್ಬಿಯದ ಸ್ಟಾರ್ ಆಟಗಾರ ಜೊಕೊವಿಕ್ ಬ್ರಿಟನ್‌ನ ಮರ್ರೆ ಅವರನ್ನು 6-3, 5-7, 6-4 ಸೆಟ್‌ಗಳ ಅಂತರದಿಂದ ಮಣಿಸಿದರು. ಜೊಕೊವಿಕ್ ಅವರು ಮರ್ರೆ ವಿರುದ್ಧ ಸಾಧಿಸಿರುವ 25ನೆ ಗೆಲುವು ಇದಾಗಿದೆ.

ಮರ್ರೆ ಸೆಪ್ಟಂಬರ್‌ನಲ್ಲಿ ಡೇವಿಸ್‌ಕಪ್ ಟೂರ್ನಿಯಲ್ಲಿ ಜುಯಾನ್ ಡೆಲ್ ಪೊಟ್ರೊ ವಿರುದ್ಧ ಸೋತ ಬಳಿಕ ಗೆಲುವಿನ ಓಟ ಆರಂಭಿಸಿದ್ದರು. ಇದೀಗ ಅವರು ದೀರ್ಘಸಮಯದ ಬಳಿಕ ಸ್ಪರ್ಧಾತ್ಮಕ ಟೆನಿಸ್‌ನಲ್ಲಿ ಸೋತಿದ್ದಾರೆ.

ಕಳೆದ ವರ್ಷದ ನವೆಂಬರ್‌ನಲ್ಲಿ ಲಂಡನ್‌ನಲ್ಲಿ ನಡೆದೆ ಎಟಿಪಿ ವರ್ಲ್ಡ್ ಟೂರ್ ಫೈನಲ್ಸ್‌ನ ನಂತರ ಇಲ್ಲಿ ಮರ್ರೆ-ಜೊಕೊವಿಕ್ 36ನೆ ಬಾರಿ ಮುಖಾಮುಖಿಯಾಗಿದ್ದಾರೆ. ಎಟಪಿ ವರ್ಲ್ಡ್ ಟೂರ್ ಪ್ರಶಸ್ತಿಯನ್ನು ಜಯಿಸಿದ್ದ ಮರ್ರೆ ಅವರು ಜೊಕೊವಿಕ್‌ರಿಂದ ನಂ.1 ಸ್ಥಾನ ವಶಪಡಿಸಿಕೊಂಡಿದ್ದರು.

 ಇದೀಗ ಈ ಇಬ್ಬರು ಆಟಗಾರರು ವರ್ಷದ ಮೊದಲ ಗ್ರಾನ್‌ಸ್ಲಾಮ್ ಟೂರ್ನಿ ಆಸ್ಟ್ರೇಲಿಯನ್ ಓಪನ್‌ನಲ್ಲಿ ಪಾಲ್ಗೊಳ್ಳಲು ಮೆಲ್ಬೋರ್ನ್‌ಗೆ ಪ್ರಯಾಣ ಬೆಳೆಸಲಿದ್ದಾರೆ. ಈ ಟೂರ್ನಿಯು ಜ.16ರಿಂದ ಆರಂಭವಾಗಲಿದೆ.

‘‘ನಾನು ಕತರ್ ಓಪನ್ ಪ್ರಶಸ್ತಿ ಜಯಿಸುವುದರೊಂದಿಗೆ ಹೊಸ ವರ್ಷವನ್ನು ಶುಭಾರಂಭ ಮಾಡಿರುವೆ. ನನ್ನ ದೊಡ್ಡ ಎದುರಾಳಿಯನ್ನು ಮಣಿಸಿ ಕನಸಿನ ಆರಂಭ ಪಡೆದಿರುವೆ’’ ಎಂದು ಫೈನಲ್ ಪಂದ್ಯ ಗೆದ್ದ ತಕ್ಷಣ ಸುದ್ದಿಗಾರರಿಗೆ 12 ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ಜೊಕೊವಿಕ್ ತಿಳಿಸಿದ್ದಾರೆ.

ಮರ್ರೆಯನ್ನು ಮಣಿಸಿರುವ ಜೊಕೊವಿಕ್ 209,665 ಯುಎಸ್ ಡಾಲರ್ ಬಹುಮಾನ ಮೊತ್ತದ ಕತರ್ ಓಪನ್‌ನಲ್ಲಿ ಸಿಂಗಲ್ಸ್ ಪ್ರಶಸ್ತಿಯನ್ನು ಸತತ ಎರಡನೆ ಬಾರಿ ಗೆದ್ದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News