ಧೋನಿ ನಾಯಕತ್ವ ತ್ಯಜಿಸಿದ್ದು ಸ್ವ ಇಚ್ಛೆಯಿಂದಲ್ಲ !

Update: 2017-01-09 05:08 GMT

ಮುಂಬೈ, ಜ.9: ಮಹೇಂದ್ರ ಸಿಂಗ್ ಧೋನಿ ತಾನು ಟೀಂ ಇಂಡಿಯಾದ ಸೀಮಿತ ಓವರ್ ಗಳ ನಾಯಕ ಸ್ಥಾನದಿಂದ ಕೆಳಗಿಳಿಯುವುದಾಗಿ ಇತ್ತೀಚೆಗೆ ಘೋಷಿಸಿದ್ದು ಎಲ್ಲರಿಗೂ ತಿಳಿದ ವಿಚಾರ. ಆದರೆ ಧೋನಿ ನಾಯಕತ್ವವನ್ನು ಸ್ವಇಚ್ಛೆಯಿಂದ ತ್ಯಜಿಸಿಲ್ಲವೆಂಬ ಸುದ್ದಿ ಇದೀಗ ಹರಿದಾಡುತ್ತಿದೆ. ಮೂಲಗಳ ಪ್ರಕಾರ ಕ್ರಿಕೆಟ್ ಆಯ್ಕೆ ಮಂಡಳಿಯ ಒತ್ತಡದಿಂದಲೇ ಧೋನಿ ಈ ನಿರ್ಧಾರ ಕೈಗೊಂಡಿದ್ದಾರೆ.

ಧೋನಿ ಅವರು ಏಕದಿನ ಹಾಗೂ ಟಿ-20 ಪಂದ್ಯಗಳಲ್ಲಿ ನಾಯಕತ್ವ ಹುದ್ದೆ ತೊರೆದಿದ್ದಾರಾದರೂ ತಂಡದಲ್ಲಿ ತಮ್ಮ ಆಟವನ್ನು ಎಂದಿನಂತೆ ಮುಂದುವರಿಸಲಿದ್ದಾರೆಂದು ಕ್ರಿಕೆಟ್ ಮಂಡಳಿ ಹೇಳಿದೆ.

ಆದರೆ ಬಿಸಿಸಿಐ ಮೂಲಗಳಿಂದ ತಿಳಿದು ಬಂದಂತೆ ಧೋನಿ ತಾನಾಗಿಯೇ ನಾಯಕತ್ವ ತ್ಯಜಿಸಿಲ್ಲ. ಆಯ್ಕೆ ಮಂಡಳಿ ಅಧ್ಯಕ್ಷ ಎಂ.ಎಸ್.ಕೆ.ಪ್ರಸಾದ್ ಕಳೆದ ವಾರ ನಾಗ್ಪರದಲ್ಲಿ ಝಾರ್ಖಂಡ್ ಹಾಗೂ ಗುಜರಾತ್ ತಂಡಗಳ ನಡುವೆ ನಡೆಯುತ್ತಿದ್ದ ರಣಜಿ ಸೆಮಿಫೈನಲ್ ಪಂದ್ಯಾಟದ ವೇಳೆ ತಮ್ಮ ತವರು ರಾಜ್ಯದ ತಂಡವನ್ನು ಉತ್ತೇಜಿಸಲು ಅಲ್ಲಿ ಹಾಜರಿದ್ದ ಧೋನಿಯನ್ನು ಭೇಟಿಯಾಗಿದ್ದರು. ತರುವಾಯ ಧೋನಿ ನಾಯಕತ್ವ ಹುದ್ದೆಗೆ ವಿದಾಯ ಹೇಳಿದ್ದಾರೆಂದು ಕ್ರಿಕೆಟ್ ಮಂಡಳಿ ಘೋಷಿಸುತ್ತಿದ್ದಂತೆಯೇ ಪ್ರಸಾದ್ ಅದನ್ನು ಸ್ವಾಗತಿಸಿದ್ದರು ಕೂಡ.

‘‘ಧೋನಿ ಸರಿಯಾದ ಸಮಯಕ್ಕೆ ನಿರ್ಧಾರ ಕೈಗೊಂಡಿದ್ದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ. ವಿರಾಟ್ ಅವರು ಟೆಸ್ಟ್ ಪಂದ್ಯಗಳಲ್ಲಿ ತಮ್ಮ ಸಾಧನೆಯ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆಂದು ಅವರಿಗೆ ತಿಳಿದಿದೆ’’ ಎಂದೂ ಹೇಳಿದ್ದರು ಪ್ರಸಾದ್.

ಆದರೆ ವಿರಾಟ್ ಕೊಹ್ಲಿಯನ್ನು ಧೋನಿ ಸ್ಥಾನಕ್ಕೆ ತರುವ ಪ್ರಯತ್ನಗಳು ಸೆಪ್ಟೆಂಬರ್ ತಿಂಗಳಿನಿಂದಲೇ ಆರಂಭವಾಗಿತ್ತು. ಹೊಸ ಆಯ್ಕೆ ಸಮಿತಿ ಸೆಪ್ಟೆಂಬರ್ 21ರಂದು ರಚನೆಯಾದಂದಿನಿಂದ 2019ರ ವಿಶ್ವಕಪ್ ಗಾಗಿ ನಡೆಸಬೇಕಾದ ತಯಾರಿ ಬಗ್ಗೆ ಚರ್ಚಿಸಿತ್ತಲ್ಲದೆ, ವಿಶ್ವಕಪ್ ಪಂದ್ಯ ನಡೆಯುವ ಧೋನಿಗೆ 39 ವರ್ಷ ತುಂಬುವುದರಿಂದ ಅವರು ಕೊಹ್ಲಿ ನಾಯಕನಾಗಲು ಅನುವು ಮಾಡಿಕೊಡಬೇಕೆಂದು ಅವರಿಗೆ ಮನವರಿಕೆ ಮಾಡಲಾಗಿತ್ತು. ಇದೇ ವಿಚಾರವನ್ನು ಪ್ರಸಾದ್ ನಾಗ್ಪುರದಲ್ಲಿ ಧೋನಿಯನ್ನು ಭೇಟಿಯಾದಾಗ ಚರ್ಚಿಸಿದ್ದರು. ಇದರ ನಂತರದ ಬೆಳವಣಿಗೆಯಲ್ಲಿ ತಾವು ನಾಯಕತ್ವ ತ್ಯಜಿಸುವ ನಿರ್ಧಾರವನ್ನು ಧೋನಿ ಬಿಸಿಸಿಐಗೆ ತಿಳಿಸಿದ್ದರು. ಜನವರಿ 4ರಂದು ಬಿಸಿಸಿಐ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿತ್ತು.

ಟೆಸ್ಟ್ ನಾಯಕನಾಗಿ ವಿರಾಟ್ ಮಿಂಚಿರುವುದು ಹಾಗೂ ಅವರ ನಾಯಕತ್ವದಲ್ಲಿ ಐದು ಟೆಸ್ಟ್ ಸರಣಿಗಳನ್ನು ಗೆದ್ದಿರುವುದು ಒಂದೆಡೆಯಾದರೆ ಧೋನಿ ನಾಯಕತ್ವದ ತಂಡ ನಿಗದಿತ ಓವರ್ ಪಂದ್ಯಗಳಲ್ಲಿ ಅಷ್ಟೊಂದೇನೂ ಅತ್ಯುತ್ತಮ ಪ್ರದರ್ಶನ ನೀಡದಿರುವುದೂ ಧೋನಿಯ ಮೇಲೆ ಒತ್ತಡವುಂಟಾಗಲು ಕಾರಣವಾಗಿತ್ತೆಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News