ಹೈದರಾಬಾದ್‌ನಲ್ಲಿ ಭಾರತ-ಬಾಂಗ್ಲಾ ಟೆಸ್ಟ್

Update: 2017-01-09 13:49 GMT

ಹೈದರಾಬಾದ್, ಜ.9: ಹೈದರಾಬಾದ್‌ನಲ್ಲಿ ಫೆ.13ರಿಂದ ಭಾರತ ಮತ್ತು ಬಾಂಗ್ಲಾ ದೇಶ ತಂಡಗಳ ನಡುವೆ ಕ್ರಿಕೆಟ್ ನಡೆಯಲಿದೆ. ಹೈದರಾಬಾದ್‌ನಲ್ಲಿ ಟೆಸ್ಟ್ ನಡೆಯುವುದಿಲ್ಲ ಎಂಬ ಉಹಾಪೋಹಗಳಿಗೆ ಅಂತಿಮ ತೆರೆ ಎಳೆದಿರುವ ಹೈದರಾಬಾದ್ ಕ್ರಿಕೆಟ್ ಅಸೋಸಿಯೇಶನ್(ಎಚ್‌ಸಿಎ) ಕಾರ್ಯದರ್ಶಿ ಕೆ. ಜೋನ್ ಮನೋಜ್ ಅವರು ಟೆಸ್ಟ್ ಈ ಹಿಂದೆ ನಿಗದಿಯಾಗಿರುವಂತೆ ನಡೆಯಲಿದೆ. ಎಚ್‌ಸಿಎ ಕ್ರಿಕೆಟ್ ಆಯೋಜಿಸುವ ನಿರ್ಧಾರದಿಂದ ಹಿಂದೆ ಸರಿದಿಲ್ಲ ಎಂದು ಹೇಳಿದ್ಧಾರೆ.

‘‘ಕ್ರೀಡಾಂಗಣದ ಜಾಹೀರಾತಿಗೆ ಸಂಬಂಧಿಸಿ ಟೆಂಡರ್ ಕರೆಯಾಗಲಿದೆ. ಟ್ವೆಂಟಿ ಫಸ್ಟ್ ಸೆಂಚೂರಿ ಮೀಡಿಯಾ(ಟಿಸಿಎಂ) ಸಂಸ್ಥೆಯ ಜೊತೆ ಇನ್ನೆರಡು ದಿನಗಳಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಗುವುದು ಎಂದು ಮಾಹಿತಿ ನೀಡಿರುವ ಕೆ. ಜೋನ್ ಮನೋಜ್ ಹೈದರಾಬಾದ್‌ನಲ್ಲಿ ಟೆಸ್ಟ್ ಪಂದ್ಯ ನಡೆಯುವುದಿಲ್ಲವೆಂದು ವದಂತಿ ಹರಡಿದವರು ಯಾರೆಂದು ಗೊತ್ತಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಟೆಸ್ಟ್ ಪಂದ್ಯಕ್ಕೆ ಅಗತ್ಯದ ಹಣಕಾಸು ಎಲ್ಲಿಂದ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ‘‘ಪ್ರತಿಯೊಂದು ಕ್ರಿಕೆಟ್ ಸಂಘಟನೆಯೂ ಹಣಕಾಸಿನ ನೆರವು ಪಡೆಯಲು ಸುಪ್ರೀಂ ಕೋರ್ಟ್‌ನಿಂದ ಅನುಮತಿ ಪಡೆಯಬೇಕಾಗಿದೆ. ನಾವು ಪಂದ್ಯ ಅಯೋಜಿಸಲು ಅಗತ್ಯದ ಹಣವನ್ನು ಜಾಹೀರಾತು ಮೂಲಕ ಸಂಗ್ರಹಿಸುತ್ತೇವೆ’’ ಎಂದು ಅವರು ಹೇಳಿದ್ಧಾರೆ.

‘‘ಬಾಂಗ್ಲಾದೇಶ ತಂಡ ಟೆಸ್ಟ್‌ಗಿಂತ ಒಂದು ವಾರ ಮೊದಲೇ ಹೈದರಾಬಾದ್‌ಗೆ ಆಗಮಿಸಿ ಅಭ್ಯಾಸ ನಡೆಸಲು ಆಸಕ್ತಿ ವಹಿಸಿದೆ. ಈ ಉದ್ದೇಶಕ್ಕಾಗಿ ಅವರಿಗೆ ಅಭ್ಯಾಸಕ್ಕೆ ನೆರವು ನೀಡಲು ನಾವು ಹೆಚ್ಚಿನ ಫಂಡ್ ಸಂಗ್ರಹಿಸಬೇಕಾಗಿದೆ. ಹೈದರಾಬಾದ್ ಟೆಸ್ಟ್ ಪಂದ್ಯವನ್ನು ಆಯೋಜಿಸುವ ನಿರ್ಧಾರದಿಂದ ಹಿಂದೆ ಸರಿದಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿರುವ ಜೋನ್ ಮನೋಜ್ ಅವರು ಅನರ್ಹಗೊಂಡಿರುವ ಕೆಲವು ಬಿಸಿಸಿಐ ಧುರೀಣರು ಹೈದರಾಬಾದ್‌ನಲ್ಲಿ ಟೆಸ್ಟ್ ಪಂದ್ಯ ನಡೆಯುವುದಿಲ್ಲವೆಂದು ಅನಗತ್ಯವಾಗಿ ಆಧಾರಹಿತ ಸುದ್ದಿ ಹರಡಿರುವ ಸಾಧ್ಯತೆ ಇದೆ ’’ಎಂದು ಗುಮಾನಿ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News