×
Ad

ಇಂದಿನಿಂದ ರಣಜಿ ಟ್ರೋಫಿ ಫೈನಲ್

Update: 2017-01-09 23:56 IST

ಇಂದೋರ್, ಜ.9: ಹಾಲಿ ಚಾಂಪಿಯನ್ ಮುಂಬೈ ತಂಡ ಮಂಗಳವಾರ ಇಲ್ಲಿ ಆರಂಭವಾಗಲಿರುವ ಗುಜರಾತ್ ವಿರುದ್ಧದ ರಣಜಿ ಟ್ರೋಫಿ ಫೈನಲ್‌ನಲ್ಲಿ ಮತ್ತೊಮ್ಮೆ ಚಾಂಪಿಯನ್ ಪಟ್ಟ ಉಳಿಸಿಕೊಳ್ಳಲು ಹಣಾಹಣಿ ನಡೆಸಲಿದೆ.

ಮುಂಬೈ ತಂಡ ರಣಜಿ ಕ್ರಿಕೆಟ್ ಇತಿಹಾಸದಲ್ಲಿ 42ನೆ ಬಾರಿ ಪ್ರಶಸ್ತಿ ಗೆಲ್ಲುವ ಪ್ರಯತ್ನ ನಡೆಸಲಿದೆ. ಆದರೆ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಪಾರ್ಥಿವ್ ಪಟೇಲ್ ನಾಯಕತ್ವದ ಗುಜರಾತ್ ತಂಡ ಚೊಚ್ಚಲ ಪ್ರಶಸ್ತಿ ಗೆಲ್ಲುವ ನಿಟ್ಟಿನಲ್ಲಿ ಹೋರಾಟ ನಡೆಸುತ್ತಿದೆ. ಮುಂಬೈ ತಂಡ ಅಜೇಯ ಗೆಲುವಿನ ಓಟದೊಂದಿಗೆ ಫೈನಲ್‌ಗೆ ಲಗ್ಗೆ ಇಟ್ಟಿದೆ.ಭಾರತದ ದೇಶೀಯ ಕ್ರಿಕೆಟ್‌ನಲ್ಲಿ ಯಾವತ್ತೂ ಬಲಿಷ್ಠ ತಂಡವಾಗಿರುವ ಮುಂಬೈ ಈ ಬಾರಿ ಮತ್ತೆ ಪ್ರಶಸ್ತಿ ಬಾಚಿಕೊಳ್ಳುವುದರೊಂದಿಗೆ ದಾಖಲೆಯನ್ನು ಇನ್ನಷ್ಟು ಉತ್ತಮ ಪಡಿಸಲು ನೋಡುತ್ತಿದೆ.
82 ವರ್ಷಗಳ ರಣಜಿ ಇತಿಹಾಸದಲ್ಲಿ ಮುಂಬೈ ತಂಡ 45ನೆ ಬಾರಿ ರಣಜಿ ಫೈನಲ್ ಪ್ರವೇಶಿಸಿದೆ. ಗುಜರಾತ್ ಎರಡನೆ ಬಾರಿ ಫೈನಲ್ ತಲುಪಿದೆ. 1950-51ನೆ ಅವೃತ್ತಿಯಲ್ಲಿ ಮೊದಲ ಬಾರಿ ಫೈನಲ್ ತಲುಪಿತ್ತು. ಆದರೆ ಹೋಲ್ಕರ್ ತಂಡದ ವಿರುದ್ಧ ಸೋತು ಪ್ರಶಸ್ತಿ ಎತ್ತುವ ಅವಕಾಶ ಕಳೆದುಕೊಂಡಿತ್ತು. ಬಳಿಕ 66 ವರ್ಷಗಳಲ್ಲಿ ಇದೇ ಮೊದಲ ಬಾರಿ ಫೈನಲ್‌ಗೆ ಪ್ರವೇಶ ಗಿಟ್ಟಿಸಿಕೊಂಡಿದೆ.
 41 ಬಾರಿ ಟ್ರೋಫಿಯನ್ನು ಬಾಚಿಕೊಂಡಿದೆ. 1958-59ರಿಂದ 1972-73ರ ತನಕ ಸತತ 15 ವರ್ಷಗಳ ಮುಂಬೈ ಗೆಲುವಿನ ಅಜೇಯ ಓಟವನ್ನು ಮುಂದುವರಿಸಿತ್ತು. 1934-35ರಲ್ಲಿ ಬಾಂಬೆ ತಂಡ ಚೊಚ್ಚಲ ಪ್ರಶಸ್ತಿ ಜಯಿಸಿತ್ತು. ಬಳಿಕ ಬಾಂಬೆ ತಂಡ ಮುಂಬೈ ತಂಡ ಎಂಬ ಹೆಸರನ್ನು ಪಡೆಯಿತು.
ಕಳೆದ ಆವೃತ್ತಿಯಲ್ಲಿ ಮುಂಬೈ ತಂಡ ಫೈನಲ್‌ನಲ್ಲಿ ಸೌರಾಷ್ಟ್ರ ತಂಡವನ್ನು ಮಣಿಸಿ ಪ್ರಶಸ್ತಿ ಎತ್ತಿಕೊಂಡಿತ್ತು. ಈಗ ಮತ್ತೊಮ್ಮೆ ಗೆಲುವಿಗೆ ಪ್ರಯತ್ನಿಸಲಿದೆ. ಆದರೆ ಗುಜರಾತ್ ಇತಿಹಾಸ ನಿರ್ಮಿಸಲು ನೋಡುತ್ತಿದೆ. ಆದರೆ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಉತ್ತಮ ಫಾರ್ಮ್‌ನಲ್ಲಿರುವ ಗುಜರಾತ್ ಮುಂಬೈನ ಕೈಯಿಂದ ಚಾಂಪಿಯನ್ ಪಟ್ಟವನ್ನು ಕಿತ್ತುಕೊಳ್ಳಲು ಪ್ರಯತ್ನ ನಡೆಸಲಿದೆ.
  2005-06ರಲ್ಲಿ ಉತ್ತರ ಪ್ರದೇಶ ಮೊದಲ ಬಾರಿ ಫೈನಲ್ ಪ್ರವೇಶಿಸಿ ಪ್ರಶಸ್ತಿ ಜಯಿಸಿತ್ತು. ಅದೇ ರೀತಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಹಗೂ ನಾಯಕ ಪಾರ್ಥಿವ್ ಪಟೇಲ್ ಗುಜರಾತ್‌ಗೆ ಪ್ರಶಸ್ತಿ ತಂದುಕೊಡುವ ಹುಮ್ಮಸ್ಸಿನಲ್ಲಿದ್ದಾರೆ.
ಗುಜರಾತ್ ತಂಡದ  ಆಟಗಾರ ಪ್ರಿಯಾಂಕ್ ಪಾಂಚಾಲ್ ತಂಡ ಫೈನಲ್ ತಲುಪುವಲ್ಲಿ ದೊಡ್ಡ ಕೊಡುಗೆ ನೀಡಿದ್ದಾರೆ. ಅವರು 97.69 ಸರಾಸರಿಯಲ್ಲಿ 1,270 ರನ್ ಜಮೆ ಮಾಡಿದ್ದಾರೆ. ಐದು ಶತಕ ಮತ್ತು 4 ಅರ್ಧಶತಕಗಳನ್ನು ದಾಖಲಿಸಿದ್ದಾರೆ.
ಆರಂಭಿಕ ದಾಂಡಿಗ ಸಮಿತ್ ಗೋಯೆಲ್ 68.38 ಸರಾಸರಿಯಂತೆ 889 ರನ್ ದಾಖಲಿಸಿದ್ದಾರೆ. ಅವರು ಔಟಾಗದೆ 359 ರನ್ ಗಳಿಸಿರುವುದು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆಯಾಗಿತ್ತು.
 ಮುಂಬೈನ ಶ್ರೇಯಸ್ ಅಯ್ಯರ್ 629 ರನ್ , ಸೂರ್ಯಕುಮಾರ್ ಯಾದವ್ 609ರನ್ ಮತ್ತು ನಾಯಕ ಮತ್ತು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆದಿತ್ಯ ತಾರೆ 550 ರನ್ ಗಳಿಸಿ ಮುಂಬೈ ತಂಡ ಫೈನಲ್‌ಗೇರಲು ನೆರವು ನೀಡಿದ್ದಾರೆ. 17ರ ಹರೆಯದ ಪೃಥ್ವಿ ಶಾ ಚೊಚ್ಚಲ ಪಂದ್ಯದಲ್ಲಿ ಶತಕದ ಮೂಲಕ ಗಮನ ಸೆಳೆದಿದ್ದಾರೆ. ಅವರು ತಮಿಳುನಾಡು ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಶತಕ ದಾಖಲಿಸಿದ್ದರು.
 ಗುಜರಾತ್ ತಂಡ ವೇಗಿ ಜಸ್‌ಪ್ರೀತ್ ಬುಮ್ರಾ ಸೇವೆಯಿಂದ ವಂಚಿತಗೊಂಡಿದೆ. ಬುಮ್ರಾ ಭಾರತ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದಿರುವ ಹಿನ್ನೆಲೆಯಲ್ಲಿ ರಣಜಿ ಫೈನಲ್‌ನಲ್ಲಿ ಆಡುತ್ತಿಲ್ಲ. ಬುಮ್ರಾ ಅವರು ಜಾರ್ಖಂಡ್ ವಿರುದ್ಧದ ಸೆಮಿಫೈನಲ್‌ನಲ್ಲಿ 6 ವಿಕೆಟ್ ಉಡಾಯಿಸಿದ್ದರು.
ರುಶ್ ಕಲಾರಿಯಾ ಗುಜರಾತ್ ತಂಡದಲ್ಲಿ ಉತ್ತಮ ಫಾರ್ಮ್‌ನಲ್ಲಿರುವ ಮಧ್ಯಮ ವೇಗಿ. ಅವರು 26 ವಿಕೆಟ್ ಪಡೆದಿದ್ದಾರೆ. ಮುಂಬೈ ತಂಡದ ದಾಳಿಯ ನೇತೃತ್ವವನ್ನು ಯುವ ಬೌಲರ್ ವಿಜಯ್ ಗೋಹಿಲ್ ವಹಿಸಿಕೊಂಡಿದ್ದಾರೆ. ಅವರು 27 ವಿಕೆಟ್ ಪಡೆದಿದ್ದಾರೆ. ಎಡಗೈ ವೇಗಿ ಮೊದಲ ಬಾರಿ ರಣಜಿಯಲ್ಲಿ ಪ್ರವೇಶ ಗಿಟ್ಟಿಸಿಕೊಂಡು ತಂಡಕ್ಕೆ ಉಪಯುಕ್ತ ಕೊಡುಗೆ ನೀಡಿದ್ದಾರೆ.
ಸಂಭಾವ್ಯ ತಂಡ
ಮುಂಬೈ : ಆದಿತ್ಯ ತಾರೆ (ನಾಯಕ/ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಅಖಿಲ್ ಹೆರ್ವಾಡ್ಕರ್, ಪೃಥ್ವಿ ಶಾ, ಸೂರ್ಯಕುಮಾರ್ ಯಾದವ್, ಅಭಿಷೇಕ್ ಯಾದವ್, ಸಿದ್ದೇಶ್ ಲಾಡ್, ತುಷಾರ ದೇಶಪಾಂಡೆ, ವಿಜಯ್ ಗೋಹಿಲ್, ಶಾರ್ದೂಲ್ ಠಾಕೂರ್, ಬಲ್ವಿಂದರ್ ಸಂಧು.
ಗುಜರಾತ್: ಪಾರ್ಥಿವ್ ಪಟೇಲ್(ನಾಯಕ/ವಿಕೆಟ್ ಕೀಪರ್), ಸಮಿತ್ ಗೋಯೆಲ್, ಪ್ರಿಯಾಂಕ್ ಪಾಂಚಾಲ್, ಭಾರ್ಗವ್ ಮೆರಾಯ್, ಮನ್‌ಪ್ರೀತ್ ಜುನೇಜಾ, ರುಜುಲ್ ಭಟ್, ಚಿರಾಗ್ ಗಾಂಧಿ, ರುಶ್ ಕಲಾರಿಯಾ, ಆರ್.ಪಿ.ಸಿಂಗ್, ಮೆಹುಲ್ ಪಟೇಲ್, ಹಾರ್ದಿಕ್ ಪಟೇಲ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News