ಫುಟ್ಬಾಲ್ ವಿಶ್ವಕಪ್‌ನಲ್ಲಿ ಮಹತ್ವದ ಬದಲಾವಣೆ

Update: 2017-01-10 11:33 GMT

 ಝುರಿಕ್, ಜ.10: ಫುಟ್ಬಾಲ್ ವಿಶ್ವಕಪ್‌ನಲ್ಲಿ ಮಹತ್ವದ ಬದಲಾವಣೆಯಾಗಿದ್ದು, ಮುಂದಿನ 2026 ವಿಶ್ವಕಪ್‌ನಲ್ಲಿ ಗ್ರೂಪ್ ಹಂತದಲ್ಲಿ 48 ತಂಡಗಳು ಮುಂದಿನ ಹಂತಕ್ಕೇರಲು ಹಣಾಹಣಿ ನಡೆಸಲಿದೆ.
ಇಂದು ನಡೆದ ಜಾಗತಿಕ ಫುಟ್ಬಾಲ್ ಸಂಸ್ಥೆ ಫಿಫಾದ ಆಡಳಿತ ಮಂಡಳಿಯ ಸಭೆಯು ವಿಶ್ವಕಪ್‌ನಲ್ಲಿ ತಂಡಗಳ ಸಂಖೆಯನ್ನು ಹೆಚ್ಚಿಸುವ ಬಗ್ಗೆ ಒಮ್ಮತದ ತೀರ್ಮಾನ ಕೈಗೊಂಡಿದೆ.
 ಪ್ರಸ್ತುತ 32 ತಂಡಗಳು ವಿಶ್ವಕಪ್‌ನಲ್ಲಿ ಗ್ರೂಪ್ ಹಂತದಲ್ಲಿ ನಾಕೌಟ್ ಹಂತಕ್ಕೇರಲು ಹಣಾಹಣಿ ನಡೆಸುತ್ತಿದೆ. ಇದರ ಬದಲಿಗೆ 48 ತಂಡಗಳಿಗೆ ಅವಕಾಶ ಕಲ್ಪಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ.
ಟೂರ್ನಮೆಂಟ್‌ನಲ್ಲಿ ಪಂದ್ಯಗಳ ಸಂಖ್ಯೆ 64ರಿಂದ 80ಕ್ಕೆ ಏರಲಿದೆ. 32 ದಿನಗಳ ಕಾಲ ವಿಶ್ವಕಪ್ ಪಂದ್ಯಾವಳಿ ನಡೆಯಲಿದೆ. 1998ರಲ್ಲಿ ಫ್ರಾನ್ಸ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ಮೊದಲ ಬಾರಿ 32 ತಂಡಗಳು 8 ಗುಂಪುಗಳಲ್ಲಿ ಹಣಾಹಣಿ ನಡೆಸಿತ್ತು. ಆ ಬಳಿಕ ಇದೇ ಮೊದಲ ಬಾರಿ ತಂಡಗಳ ಹೆಚ್ಚಳವಾಗಿದೆ. 1930 ರಲ್ಲಿ ಮೊದಲ ವಿಶ್ವಕಪ್ ನಲ್ಲಿ 13 ತಂಡಗಳು ಕಣದಲ್ಲಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News