ಸೋಲಿನೊಂದಿಗೆ ಧೋನಿ ನಾಯಕತ್ವ ಕೊನೆ

Update: 2017-01-10 18:29 GMT

ಮುಂಬೈ, ಜ.10: ಇಲ್ಲಿನ ಬ್ರೆಬೋರ್ನ್ ಸ್ಟೇಡಿಯಂನಲ್ಲಿ ಇಂದು ನಡೆದ ಅಭ್ಯಾಸ ಪಂದ್ಯದಲ್ಲಿ ಮಹೆಂದ್ರ ಸಿಂಗ್ ಧೋನಿ ನಾಯಕತ್ವದ ಭಾರತ‘ಎ’ ತಂಡ ಇಂಗ್ಲೆಂಡ್ ಇಲೆವೆನ್ ವಿರುದ್ಧ ಸೋಲು ಅನುಭವಿಸಿದೆ.
ಗೆಲುವಿಗೆ 305 ರನ್‌ಗಳ ಸವಾಲನ್ನು ಪಡೆದ ಇಂಗ್ಲೆಂಡ್ ತಂಡ ಇನ್ನೂ 7 ಎಸೆತಗಳು ಬಾಕಿ ಇರುವಾಗಲೇ 7 ವಿಕೆಟ್ ನಷ್ಟದಲ್ಲಿ 307 ರನ್ ಗಳಿಸುವ ಮೂಲಕ 3 ವಿಕೆಟ್ ಗಳ ಜಯ ಗಳಿಸಿದೆ,
ಸೀಮಿತ ಓವರ್‌ಗಳ ನಾಯಕತ್ವಕ್ಕೆ ಕಳೆದ ವಾರ ರಾಜೀನಾಮೆ ನೀಡಿದ್ದ ಧೋನಿ ನಾಯಕತ್ವ ವಹಿಸಿದ್ದ ಕೊನೆಯ ಪಂದ್ಯ ಸೋಲಿನೊಂದಿಗೆ ಕೊನೆಗೊಂಡಿದೆ. ಅಂತಿಮ ಎರಡು ಓವರ್‌ಗಳಲ್ಲಿ ಇಂಗ್ಲೆಂಡ್‌ನ ಗೆಲವಿಗೆ 7 ರನ್ ಬೇಕಾಗಿತ್ತು .ವೋಕ್ಸ್ 48.4 ಮತ್ತು 48.5 ಓವರ್‌ನಲ್ಲಿ ಚೆಂಡನ್ನು ಎರಡು ಬಾರಿ ಬೌಂಡರಿ ಗೆರೆ ದಾಟಿಸುವ ಮೂಲಕ ಇಂಗ್ಲೆಂಡ್‌ನ್ನು ಗೆಲುವಿನ ದಡ ಸೇರಿಸಿದರು. ಇಂಗ್ಲೆಂಡ್ ತಾನು ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಬಲಿಷ್ಠ ಎನ್ನುವುದನ್ನು ತೋರಿಸಿಕೊಟ್ಟಿತು.
ಇಂಗ್ಲೆಂಡ್‌ನ ಆರಂಭಿಕ ದಾಂಡಿಗ ಜೆ.ಜೆ.ರಾಯ್ 62 ರನ್, ಹೆಲ್ಸ್ 40ರನ್, ಬಿಲ್ಲಿಂಗ್ಸ್ 93 ರನ್, ಬಟ್ಲರ್ 46ರನ್, ಡಾವ್ಸನ್ 41ರನ್ ಗಳಿಸಿದರು . ಭಾರತದ ಕುಲದೀಪ್ ಯಾದವ್ 60ಕ್ಕೆ 5 ವಿಕೆಟ್ ಪಡೆದು ಮಿಂಚಿದರು.
ಇದಕ್ಕೂ ಮೊದಲು ಮಹೇಂದ್ರ ಸಿಂಗ್ ಧೋನಿ ಮತ್ತು ಆಲ್‌ರೌಂಡರ್ ಯುವರಾಜ್ ಸಿಂಗ್ ಅಭಿಮಾನಿಗಳ ನಿರೀಕ್ಷೆಯಂತೆ ಆಡಿದ್ದರು.
ಧೋನಿ ಔಟಾಗದೆ 40 ಎಸೆತಗಳಲ್ಲಿ 8 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 68 ರನ್ ಗಳಿಸಿದರು. ಯುವರಾಜ್ ಸಿಂಗ್ 48 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್ ಸಹಾಯದಿಂದ 56 ರನ್ ಗಳಿಸಿದರು. ಮೂರು ವರ್ಷಗಳ ಬಳಿಕ ಸೀಮಿತ ಓವರ್‌ಗಳ ಕ್ರಿಕೆಟ್‌ಗೆ ವಾಪಸಾಗಿದ್ದ ಯುವರಾಜ್ ಸಿಂಗ್ ನೈಜ ಆಟ ಪ್ರದರ್ಶಿಸಿದರು.
ಅಂಬಟಿ ರಾಯುಡು ಶತಕದ ನೆರವಿನಲ್ಲಿ ಭಾರತ ’ಎ’ ತಂಡ ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 304 ರನ್ ಗಳಿಸಿತ್ತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಭಾರತ 7.3 ಓವರ್‌ಗಳಲ್ಲಿ 25 ರನ್ ಗಳಿಸುವಷ್ಟರಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ಆರಂಭಿಕ ದಾಂಡಿಗ ಮನ್‌ದೀಪ್ ಸಿಂಗ್ (8) ಅವರು ವಿಲ್ಲಿ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಎರಡನೆ ವಿಕೆಟ್‌ಗೆ ಶಿಖರ್ ಧವನ್‌ಗೆ ಅಂಬಟಿ ರಾಯುಡು ಜೊತೆಯಾದರು. ಇವರು 111 ರನ್‌ಗಳ ಜೊತೆಯಾಟ ನೀಡಿದರು. ಮೂರು ತಿಂಗಳ ಬಳಿಕ ತಂಡಕ್ಕೆ ವಾಪಸಾಗಿದ್ದ ಧವನ್ 84 ಎಸೆತಗಳನ್ನು ಎದುರಿಸಿ 8 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 63 ರನ್ ಗಳಿಸಿ ನಿರ್ಗಮಿಸಿದರು. ಧವನ್ ಅವರು ಯುರಾಜ್ ಬ್ಯಾಟಿಂಗ್‌ಗೆ ಹಾದಿ ಮಾಡಿಕೊಟ್ಟರು.
ಯುವರಾಜ್ ಮತ್ತು ರಾಯುಡು ಮೂರನೆ ವಿಕೆಟ್‌ಗೆ ಸೊಗಸಾದ ಬ್ಯಾಟಿಂಗ್ ಪ್ರದರ್ಶಿಸಿದರು.ಇವರ ಜೊತೆಯಾಟದಲ್ಲಿ ತಂಡದ ಖಾತೆಗೆ 91 ರನ್ ಸೇರ್ಪಡೆಗೊಂಡಿತು. 97 ಎಸೆತಗಳಲ್ಲಿ 11 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ ಶತಕ ಪೂರ್ಣಗೊಳಿಸಿದ ರಾಯುಡು ಅವರು ಗಾಯಾಳುವಾಗಿ ಬ್ಯಾಟಿಂಗ್ ನಿಲ್ಲಿಸಿದರು. ನಾಯಕ ಧೋನಿಗೆ ಬ್ಯಾಟಿಂಗ್ ನಡೆಸಲು ಹಾದಿ ಸುಗಮಗೊಳಿಸಿದರು. ನಾಯಕನಾಗಿ ಕೊನೆಯ ಬಾರಿ ಬ್ಯಾಟಿಂಗ್ ಆಗಮಿಸಿದ ಧೋನಿಗೆ ಅಭಿಮಾನಿಗಳು ಭರ್ಜರಿ ಸ್ವಾಗತ ನೀಡಿದರು. ಧೋನಿ ಮತ್ತು ಯುವರಾಜ್ ಜೊತೆಯಾಟ ಹೆಚ್ಚು ಹೊತ್ತು ಇರಲಿಲ್ಲ. ಯುವರಾಜ್ ಸಿಂಗ್ ತಂಡದ ಸ್ಕೋರ್‌ನ್ನು 250ಕ್ಕೆ ತಲುಪಿಸಿ ನಿರ್ಗಮಿಸಿದರು. ಬಳಿಕ ಕ್ರೀಸ್‌ಗೆ ಆಗಮಿಸಿದ ಸಂಜು ಸ್ಯಾಮ್ಸನ್ ಖಾತೆ ತೆರೆಯದೆ ವಾಪಸಾದರು. ಹಾರ್ದಿಕ್ ಪಾಂಡ್ಯ ಮತ್ತು ಧೋನಿ ಜೊತೆಯಾಗಿ ಸ್ಕೋರ್‌ನ್ನು 300ರ ಗಡಿ ದಾಟಿಸಿದರು. ಮುರಿಯದ ಜೊತೆಯಾಟದಲ್ಲಿ 54 ರನ್ ಸೇರಿಸಿದರು.
ವೋಕ್ಸ್ ಅವರ ಕೊನೆಯ ಓವರ್‌ನಲ್ಲಿ ಧೋನಿ 2 ಬೌಂಡರಿ ಮತ್ತು 2 ಸಿಕ್ಸರ್ ಸಿಡಿಸಿ ಅಭಿಮಾನಿಗಳನ್ನು ರಂಜಿಸಿದರು. ಔಟಾಗದೆ ಅರ್ಧಶತಕ ದಾಖಲಿಸಿದರು.
ಸಂಕ್ಷಿಪ್ತ ಸ್ಕೋರ್ ವಿವರ
ಭಾರತ ‘ಎ’ 50 ಓವರ್‌ಗಳಲ್ಲಿ 304/5( ರಾಯುಡು ಗಾಯಗೊಂಡು ನಿವೃತ್ತಿ 100, ಧೋನಿ ಔಟಾಗದೆ 68, ಧವನ್ 63, ಯುವರಾಜ್ ಸಿಂಗ್ 56; ವಿಲ್ಲಿ 55ಕ್ಕೆ 2, ಬಾಲ್ 61ಕ್ಕೆ 2).
ಇಂಗ್ಲೆಂಡ್ ಇಲೆವೆನ್ 48.5 ಓವರ್‌ಗಳಲ್ಲಿ 307/7( ಬಿಲ್ಲಿಂಗ್ಸ್ 93, ರಾಯ್ 62, ಬಟ್ಲರ್ 46, ಡಾವ್ಸನ್ 41, ಹೇಲ್ಸ್ 40; ಕುಲದೀಪ್ ಯಾದವ್ 60ಕ್ಕೆ 5).


    

    
 

    

    
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News