ಧೋನಿ ನಾಯಕನಾಗಿರದ ಕಾರಣ ಯುವರಾಜ್ ತಂಡಕ್ಕೆ ವಾಪಸ್: ಯೋಗರಾಜ್

Update: 2017-01-11 18:25 GMT

ಹೊಸದಿಲ್ಲಿ ಜ.11: ಪಂಜಾಬ್‌ನ ಎಡಗೈ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ ದೀರ್ಘ ಸಮಯದ ಬಳಿಕ ಭಾರತದ ಏಕದಿನ ತಂಡಕ್ಕೆ ವಾಪಸಾಗಿದ್ದಾರೆ. ಆದರೆ, ಯುವಿ ತಂದೆ ಯೋಗರಾಜ್ ಈಗಲೂ ತೃಪ್ತರಾಗಿಲ್ಲ.

ಈ ಹಿಂದೆ ಹಲವು ಬಾರಿ ಯುವರಾಜ್‌ರನ್ನು ತಂಡದಿಂದ ಹೊರಹಾಕಿರುವ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಧೋನಿಯ ವಿರುದ್ಧ ಯೋಗರಾಜ್ ಹರಿಹಾಯ್ದಿದ್ದಾರೆ.

‘‘ಧೋನಿ ನಾಯಕತ್ವ ತ್ಯಜಿಸಿದ್ದ ಕಾರಣ ನನ್ನ ಮಗ ಭಾರತೀಯ ತಂಡಕ್ಕೆ ವಾಪಸಾಗಿದ್ದಾನೆ. ಈಗ ಏನಾಗುತ್ತದೆ ಎಂದು ಎರಡು ವರ್ಷಗಳ ಹಿಂದೆಯೇ ನಾನು ಹೇಳಿದ್ದೆ’’ ಎಂದು ‘ಮಹಾರಾಷ್ಟ್ರ ಟೈಮ್ಸ್’ಗೆ ಯೋಗರಾಜ್ ತಿಳಿಸಿದರು.

2015ರಲ್ಲಿ ಭಾರತದ ವಿಶ್ವಕಪ್ ತಂಡದಿಂದ ಯುವರಾಜ್ ಸಿಂಗ್‌ರನ್ನು ಕೈಬಿಟ್ಟಾಗ ಧೋನಿಯ ವಿರುದ್ಧ ಕಿಡಿಕಾರಿದ್ದ ಯೋಗರಾಜ್, ತಂಡದ ಆಯ್ಕೆಯ ವೇಳೆ ಯುವರಾಜ್ ಕುರಿತು ಧೋನಿಯ ನಿಲುವಿನ ಬಗ್ಗೆ ಪ್ರಶ್ನೆ ಎತ್ತುತ್ತಾ ಬಂದಿದ್ದರು.

 ಧೋನಿ ಹಾಗೂ ಯುವರಾಜ್ ತಮ್ಮ ವೃತ್ತಿಜೀವನದಲ್ಲಿ ಆರೋಗ್ಯಕರ ಸಂಬಂಧವನ್ನು ಕಾಯ್ದುಕೊಂಡಿದ್ದರು. ಯುವರಾಜ್ ಅವರು ಧೋನಿಯ ನಾಯಕತ್ವವನ್ನು ಯಾವಾಗಲೂ ಶ್ಲಾಘಿಸುತ್ತಿದ್ದರು. ಧೋನಿ ನಾಯಕತ್ವದಡಿ ಆಡಲು ನನಗೆ ಯಾವುದೇ ಸಮಸ್ಯೆಯಿಲ್ಲ ಎಂದು ಹೇಳಿದ್ದರು. ಆದರೆ, 2015ರ ವಿಶ್ವಕಪ್‌ನಲ್ಲಿ ಯುವರಾಜ್‌ಗೆ ಅವಕಾಶ ನೀಡದೇ ಸುರೇಶ್‌ರೈನಾಗೆ ಮಣೆ ಹಾಕಿದ್ದರು.

ಧೋನಿ ಇತ್ತೀಚೆಗೆ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್‌ಕೆ ಪ್ರಸಾದ್‌ರನ್ನು ಭೇಟಿಯಾಗಿ ಸೀಮಿತ ಓವರ್ ಕ್ರಿಕೆಟ್‌ಗೆ ರಾಜೀನಾಮೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News