×
Ad

ರಣಜಿ ಟ್ರೋಫಿ ಫೈನಲ್: ಮುಂಬೈ ವಿರುದ್ಧ ಗುಜರಾತ್ ಮುನ್ನಡೆ

Update: 2017-01-11 22:56 IST

ಇಂದೋರ್, ಜ.11: ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಫೈನಲ್‌ನಲ್ಲಿ ಮುಂಬೈ ವಿರುದ್ಧ ಗುಜರಾತ್ ತಂಡ ಮೊದಲ ಇನಿಂಗ್ಸ್‌ನಲ್ಲಿ 63 ರನ್‌ಗಳ ಮುನ್ನಡೆ ಸಾಧಿಸಿದೆ.
ಇಲ್ಲಿನ ಹೋಳ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಫೈನಲ್‌ನ ಎರಡನೆ ದಿನವಾಗಿರುವ ಇಂದು ದಿನದಾಟದಂತ್ಯಕ್ಕೆ ಗುಜರಾತ್ ಮೊದಲ ಇನಿಂಗ್ಸ್‌ನಲ್ಲಿ 92 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 291 ರನ್ ಗಳಿಸಿದೆ.
ಆಟ ನಿಂತಾಗ ಚಿರಾಗ್ ಗಾಂಧಿ 17 ರನ್ ಮತ್ತು ರುಶ್ ಕಲಾರಿಯಾ 16 ರನ್ ಗಳಿಸಿ ಔಟಾಗದೆ ಕ್ರೀಸ್‌ನಲ್ಲಿದ್ದರು.
ಎರಡನೆ ದಿನ ಗುಜರಾತ್ ತಂಡ ಪೂರ್ತಿಯಾಗಿ ಬ್ಯಾಟಿಂಗ್ ನಡೆಸಿತು. ನಾಯಕ ಪಾರ್ಥಿವ್ ಪಟೇಲ್ ಮತ್ತು ಮನ್‌ಪ್ರೀತ್ ಜುನೇಜ ಮುಂಬೈ ಬೌಲರ್‌ಗಳ ಬೆವರಿಳಿಸಿದರು.
ಮೊದಲ ದಿನದಾಟದಂತ್ಯಕ್ಕೆ ಗುಜರಾತ್ ತಂಡ 1 ಓವರ್‌ನಲ್ಲಿ ವಿಕೆಟ್ ನಷ್ಟವಿಲ್ಲದೆ 2 ರನ್ ಗಳಿಸಿತ್ತು. ಸಮಿತ್ ಗೋಯೆಲ್ ಔಟಾಗದೆ 2 ರನ್ ಮತ್ತು ಪ್ರಿಯಾಂಕ್ ಪಾಂಚಾಲ್ ಖಾತೆ ತೆರೆಯದೆ ಕ್ರೀಸ್‌ನಲ್ಲಿದ್ದರು. ಅವರು ಎರಡನೆ ದಿನ ಆಟ ಮುಂದುವರಿಸಿದರೂ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲು ಮುಂಬೈನ ಬೌಲರ್‌ಗಳು ಅವಕಾಶ ನೀಡಲಿಲ್ಲ.
ಗೋಯೆಲ್ 4ರನ್ ಮತ್ತು ಪಾಂಚಾಲ್ 6 ರನ್ ಗಳಿಸಿ ನಿರ್ಗಮಿಸಿದಾಗ ಗುಜರಾತ್ ತಂಡದ ಸ್ಕೋರ್ 19.2 ಓವರ್‌ಗಳಲ್ಲಿ 37 ಆಗಿತ್ತು. ಬಳಿಕ ಭಾರ್ಗವ್ ಮಿರೈ ಮತ್ತು ನಾಯಕ ಪಾರ್ಥಿವ್ ಪಟೇಲ್ ತಂಡವನ್ನು ಆಧರಿಸಿದರು.ಇವರ ಜೊತೆಯಾಟದಲ್ಲಿ ತಂಡದ ಸ್ಕೋರ್ ನೂರರ ಗಡಿ ದಾಟಿತು. ಮಿರೈ ಮತ್ತು ಪಟೇಲ್ 3ನೆ ವಿಕೆಟ್‌ಗೆ 69 ರನ್ ಸೇರಿಸಿದರು.
 ಮಿರೈ 45 ರನ್ ಗಳಿಸಿ ನಿರ್ಗಮಿಸಿದರು. ತೆರವಾದ ಸ್ಥಾನಕ್ಕೆ ಮನ್‌ಪ್ರೀತ್ ಜುನೇಜ ಜೊತೆಯಾದರು. ಇವರು ತಂಡದ ಖಾತೆಗೆ 120 ರನ್ ಜಮೆ ಮಾಡಿದರು. 68.3ನೆ ಓವರ್‌ನಲ್ಲಿ ಪಟೇಲ್ ಅವರು ಅಭಿಷೇಕ್ ನಾಯರ್ ಎಸೆತದಲ್ಲಿ ವಿಕೆಟ್ ಕೀಪರ್ ಆದಿತ್ಯ ತಾರೆಗೆ ಕ್ಯಾಚ್ ನೀಡುವುದರೊಂದಿಗೆ ಶತಕ ವಂಚಿತಗೊಂಡರು. ಪಟೇಲ್ 212 ನಿಮಿಷಗಳ ಬ್ಯಾಟಿಂಗ್‌ನಲ್ಲಿ 146 ಎಸೆತಗಳನ್ನು ಎದುರಿಸಿದರು. 12ಬೌಂಡರಿಗಳ ನೆರವಿನಿಂದ 90 ರನ್ ಗಳಿಸಿದರು. 168ನೆ ಪ್ರಥಮ ದರ್ಜೆ ಪಂದ್ಯವನ್ನಾಡುತ್ತಿರುವ ಪಾರ್ಥಿವ್ ಪಟೇಲ್ 56ನೆ ಅರ್ಧಶತಕ ದಾಖಲಿಸಿದರು.
ಪಟೇಲ್ ನಿರ್ಗಮನದ ಬಳಿಕ ಮುಂಬೈ ತಂಡ ಗುಜರಾತ್‌ನ ಬ್ಯಾಟಿಂಗ್‌ಗೆ ಕಡಿವಾಣ ಹಾಕಲು ಯತ್ನಿಸಿತು. ಜುನೇಜ 73.4ನೆ ಓವರ್‌ನಲ್ಲಿ ಠಾಕೂರ್‌ಗೆ ರಿಟರ್ನ್ ಕ್ಯಾಚ್ ನೀಡಿದರು. ಅಷ್ಟರ ವೇಳೆಗೆ ಗುಜರಾತ್ ಮೇಲುಗೈ ಸಾಧಿಸಿತ್ತು. ಜುನೇಜ ಮತ್ತು ರುಜುಲ್ ಭಟ್ ದಾಖಲಿಸಿದ 28 ರನ್‌ಗಳ ಜೊತೆಯಾಟದ ನೆರವಿನಲ್ಲಿ ಗುಜರಾತ್ 26 ರನ್‌ಗಳ ಮೇಲುಗೈ ಸಾಧಿಸಿತ್ತು. ಜುನೇಜ 77 ರನ್(95ಎ, 11ಬೌ) ಗಳಿಸಿದರು. ಜುನೇಜ 14ನೆ ಅರ್ಧಶತಕ ದಾಖಲಿಸಿದರು. ಭಟ್ 25 ರನ್ ಗಳಿಸಿ ಸಂಧು ಎಸೆತದಲ್ಲಿ ಶಾಗೆ ಕ್ಯಾಚ್ ನೀಡಿದರು. ಏಳನೆ ವಿಕೆಟ್‌ಗೆ ಚಿರಾಗ್ ಗಾಂಧಿ ಮತ್ತು ರುಶ್ ಕಲಾರಿಯಾ ಮುರಿಯದ ಜೊತೆಯಾಟದಲ್ಲಿ 27 ರನ್ ಸೇರಿಸಿ ಬ್ಯಾಟಿಂಗ್‌ನ್ನು ಮೂರನೆ ದಿನಕ್ಕೆ ಕಾಯ್ದಿರಿಸಿದರು.
ಮುಂಬೈ ತಂಡದ ಅಭಿಷೇಕ್ ನಾಯರ್ 91ಕ್ಕೆ 3 ವಿಕೆಟ್, ಶಾರ್ದೂಲ್ ಠಾಕೂರ್ 67ಕ್ಕೆ 2 ಮತ್ತು ಬಿ.ಎಸ್.ಸಂಧು 54ಕ್ಕೆ 1 ವಿಕೆಟ್ ಪಡೆದರು.
ಸ್ಕೋರ್ ಪಟ್ಟಿ
ಮುಂಬೈ ಮೊದಲ ಇನಿಂಗ್ಸ್ 83.5 ಓವರ್‌ಗಳಲ್ಲಿ ಆಲೌಟ್ 228
ಗುಜರಾತ್ ಮೊದಲ ಇನಿಂಗ್ಸ್ 92 ಓವರ್‌ನಲ್ಲಿ 291/6
    ಸಮಿತ್ ಗೋಯೆಲ್ ಸಿ ಯಾದವ್ ಬಿ ಠಾಕೂರ್04
        ಪಿ.ಪಾಂಚಾಲ್ ಸಿ ತಾರೆ ಬಿ ನಾಯರ್06
        ಭಾರ್ಗವ್ ಮಿರೈ ಸಿ ತಾರೆ ಬಿ ನಾಯರ್45
        ಪಾರ್ಥಿವ್ ಪಟೇಲ್ ಸಿ ತಾರೆ ಬಿ ನಾಯರ್90
        ಜುನೇಜ ಸಿ ಆ್ಯಂಡ್ ಬಿ ಠಾಕೂರ್77
        ರುಜುಲ್ ಭಟ್ ಸಿ ಶಾ ಬಿ ಸಂಧು25
            ಚಿರಾಗ್ ಗಾಂಧಿ ಔಟಾಗದೆ17
            ಕಲಾರಿಯಾ ಔಟಾಗದೆ16
                    ಇತರೆ11
ವಿಕೆಟ್ ಪತನ: 1-11, 2-37, 3-106, 4-226, 5-254, 6-264
ಬೌಲಿಂಗ್ ವಿವರ
     ಶಾರ್ದೂಲ್ ಠಾಕೂರ್  23-4-67-2
        ಬಲ್ವಿಂದರ್ ಸಂಧು    21-2-54-1
         ಅಭಿಷೇಕ್ ನಾಯರ್    27-6-91-3
        ಗೊಹಿಲ್              08-0-34-0
        ದಾಬೋಲ್ಕರ್   09-3-21-0
        ಸಿದ್ದೇಶ್ ಲಾಡ್    04-0-18-0
    


    

    
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News