ನಂ.1 ಬ್ಯಾಟ್ಸ್‌ಮನ್ ಸ್ಥಾನಕ್ಕಾಗಿ ಕೊಹ್ಲಿ, ವಾರ್ನರ್ ಪೈಪೋಟಿ

Update: 2017-01-11 18:20 GMT

ದುಬೈ, ಜ.11: ಐಸಿಸಿ ಏಕದಿನ ರ್ಯಾಂಕಿಂಗ್‌ನಲ್ಲಿ ಪ್ರಸ್ತುತ ಎರಡನೆ ಸ್ಥಾನದಲ್ಲಿರುವ ಭಾರತದ ವಿರಾಟ್ ಕೊಹ್ಲಿ ಅಗ್ರ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಇದೀಗ ದಕ್ಷಿಣ ಆಫ್ರಿಕದ ಸ್ಟಾರ್ ಬ್ಯಾಟ್ಸ್‌ಮನ್ ಎಬಿಡಿವಿಲಿಯರ್ಸ್ ನಂ.1 ಸ್ಥಾನದಲ್ಲಿದ್ದಾರೆ.

ಜ.15 ರಿಂದ ಇಂಗ್ಲೆಂಡ್ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತದ ಪೂರ್ಣಕಾಲಿಕ ನಾಯಕನಾಗಿ ತಂಡವನ್ನು ಮುನ್ನಡೆಸಲಿರುವ ಕೊಹ್ಲಿ ನಂ.1 ಸ್ಥಾನದಲ್ಲಿರುವ ಡಿವಿಲಿಯರ್ಸ್‌ಗಿಂತ 13 ಅಂಕದಿಂದ ಹಿಂದಿದ್ದಾರೆ.

ಮತ್ತೊಂದೆಡೆ, ಕೊಹ್ಲಿಗೆ ಆಸ್ಟ್ರೇಲಿಯದ ಆಕ್ರಮಣಕಾರಿ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ತೀವ್ರ ಪೈಪೋಟಿ ನೀಡುತ್ತಿದ್ದಾರೆ. ಪ್ರಸ್ತುತ 3ನೆ ರ್ಯಾಂಕಿನಲ್ಲಿರುವ ವಾರ್ನರ್ ಭಾರತದ ಸ್ಟಾರ್ ಆಟಗಾರ ಕೊಹ್ಲಿಗಿಂತ ಕೇವಲ 2 ಅಂಕ ಹಿಂದಿದ್ದಾರೆ.

ಟೀಮ್ ರ್ಯಾಂಕಿಂಗ್‌ನಲ್ಲಿ 3ನೆ ಸ್ಥಾನದಲ್ಲಿರುವ ಭಾರತಕ್ಕೆ ಎರಡನೆ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕವನ್ನು ಹಿಂದಕ್ಕೆ ತಳ್ಳುವ ಅವಕಾಶ ಮುಕ್ತವಾಗಿದೆ. ಭಾರತ ಜ.15 ರಿಂದ 5ನೆ ರ್ಯಾಂಕಿನಲ್ಲಿರುವ ಇಂಗ್ಲೆಂಡ್‌ನ ವಿರುದ್ಧ ಏಕದಿನ ಸರಣಿ ಆಡಲಿದೆ.

111 ಅಂಕ ಹೊಂದಿರುವ ಭಾರತ ಇಯಾನ್ ಮೊರ್ಗನ್ ನೇತೃತ್ವದ ಇಂಗ್ಲೆಂಡ್‌ನ ವಿರುದ್ಧ ಕ್ಲೀನ್‌ಸ್ವೀಪ್ ಸಾಧಿಸಿದರೆ 114 ಅಂಕ ಗಳಿಸಲಿದೆ. ದಕ್ಷಿಣ ಆಫ್ರಿಕ ತಂಡಕ್ಕಿಂತ 2 ಅಂಕದಿಂದ ಹಿಂದುಳಿಯಲಿದೆ.

ಒಂದು ವೇಳೆ ಇಂಗ್ಲೆಂಡ್ ತಂಡ ಭಾರತದ ವಿರುದ್ಧ ಕ್ಲೀನ್‌ಸ್ವೀಪ್ ಸಾಧಿಸಿದರೆ ಭಾರತ ನಾಲ್ಕನೆ ಸ್ಥಾನಕ್ಕೇರಲಿದೆ ಹಾಗೂ ಕೊಹ್ಲಿ ಪಡೆ ಐದನೆ ಸ್ಥಾನಕ್ಕೆ ಕುಸಿಯಲಿದೆ.

ಪಾಕಿಸ್ತಾನ ತಂಡ ಇಂಗ್ಲೆಂಡ್‌ನಲ್ಲಿ 2019ರಲ್ಲಿ ನಡೆಯಲಿರುವ ವಿಶ್ವಕಪ್‌ನಲ್ಲಿ ನೇರ ಅರ್ಹತೆ ಗಿಟ್ಟಿಸಿಕೊಳ್ಳಬೇಕಾದರೆ ಶುಕ್ರವಾರ ಆರಂಭವಾಗಲಿರುವ ಆಸ್ಟ್ರೇಲಿಯ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಕನಿಷ್ಠ ಒಂದು ಪಂದ್ಯವನ್ನಾದರೂ ಗೆಲ್ಲಲೇಬೇಕು.

ಗ್ರೀನ್‌ಬ್ರಿಗೇಡ್ ಪಾಕಿಸ್ತಾನ ಸದ್ಯ 89 ಅಂಕಗಳನ್ನು ಗಳಿಸಿ 8ನೆ ಸ್ಥಾನದಲ್ಲಿದೆ. ಬಾಂಗ್ಲಾದೇಶಗಿಂತ 3 ಅಂಕ ಹಿಂದೆ ಹಾಗೂ ವೆಸ್ಟ್‌ಇಂಡೀಸ್‌ಗಿಂತ 3 ಅಂಕ ಮುಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News