100ನೆ ಟೆಸ್ಟ್ ಆಡಲು ಹಾಶಿಮ್ ಅಮ್ಲ ಸಜ್ಜು

Update: 2017-01-11 18:22 GMT

ಜೋಹಾನ್ಸ್‌ಬರ್ಗ್, ಜ.11: ಸುಮಾರು 12 ವರ್ಷಗಳ ಹಿಂದೆ ಕೋಲ್ಕತಾದ ಈಡನ್‌ಗಾರ್ಡನ್ಸ್‌ನಲ್ಲಿ ಕ್ರಿಕೆಟ್ ಪಯಣ ಆರಂಭಿಸಿರುವ ದಕ್ಷಿಣ ಆಫ್ರಿಕದ ಹಿರಿಯ ಬ್ಯಾಟ್ಸ್‌ಮನ್ ಹಾಶಿಮ್ ಅಮ್ಲ ಗುರುವಾರ ಇಲ್ಲಿನ ವಾಂಡರರ್ಸ್‌ ಸ್ಟೇಡಿಯಂನಲ್ಲಿ ಮಹತ್ವದ ಮೈಲುಗಲ್ಲು ತಲುಪಲಿದ್ದಾರೆ.

ಶ್ರೀಲಂಕಾದ ವಿರುದ್ಧ ಗುರುವಾರ ಆರಂಭವಾಗಲಿರುವ ಮೂರನೆ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಹಾಶಿಮ್ ಅಮ್ಲ 100ನೆ ಟೆಸ್ಟ್ ಪಂದ್ಯ ಆಡಲು ಸಜ್ಜಾಗಿದ್ದಾರೆ. ಅಮ್ಲ 100ನೆ ಟೆಸ್ಟ್ ಆಡಲಿರುವ ದಕ್ಷಿಣ ಆಫ್ರಿಕದ 8ನೆ ಬ್ಯಾಟ್ಸ್‌ಮನ್ ಎನಿಸಿಕೊಳ್ಳಲಿದ್ದಾರೆ.

ಅಮ್ಲ 2004ರಲ್ಲಿ 21ರ ಹರೆಯದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಕಾಲಿಟ್ಟಿದ್ದರು. ಅಮ್ಲ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಕ್ರಮವಾಗಿ 24 ಹಾಗೂ 2 ರನ್ ಗಳಿಸಿದ್ದರು. ಅಮ್ಲ ಮೊದಲ 15 ಟೆಸ್ಟ್‌ಗಳಲ್ಲಿ 25.50ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದರು.

ಆ ಬಳಿಕ ಆಫ್ರಿಕದ ಬ್ಯಾಟಿಂಗ್ ಶಕ್ತಿಯಾಗಿ ಬೆಳೆದ ಅಮ್ಲ ವಿಶ್ವದ ಎಲ್ಲ ವಾತಾವರಣದಲ್ಲಿ, ಎಲ್ಲ ರೀತಿಯ ಬೌಲಿಂಗ್‌ನ ಎದುರು ಪ್ರಚಂಡ ಪ್ರದರ್ಶನ ನೀಡಿದ್ದಾರೆ. ಸ್ವದೇಶದಲ್ಲಿ 49 ಸರಾಸರಿ ಹೊಂದಿರುವ ಅಮ್ಲ, ಏಷ್ಯಾದಲ್ಲಿ 52, ಇಂಗ್ಲೆಂಡ್‌ನಲ್ಲಿ 76, ಆಸ್ಟ್ರೇಲಿಯ ಹಾಗೂ ನ್ಯೂಝಿಲೆಂಡ್‌ನಲ್ಲಿ 46 ಸರಾಸರಿ ಹೊಂದಿದ್ದಾರೆ. ಆದರೆ, ಅಮ್ಲ ಕಳೆದ 18 ತಿಂಗಳಿಂದ ರನ್ ಬರ ಎದುರಿಸುತ್ತಿದ್ದಾರೆ.

 ಅಮ್ಲ ಇತ್ತೀಚೆಗೆ ಆಡಿರುವ 5 ಟೆಸ್ಟ್ ಪಂದ್ಯಗಳಲ್ಲಿ ಅರ್ಧಶತಕವನ್ನು ಬಾರಿಸಿಲ್ಲ. 21.66ರ ಸರಾಸರಿಯಲ್ಲಿ ಕೇವಲ 195 ರನ್ ಗಳಿಸಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಇದೇ ಮೊದಲ ಬಾರಿ ಅಮ್ಲರ ಬ್ಯಾಟಿಂಗ್ ಸರಾಸರಿ 50ಕ್ಕಿಂತ ಕೆಳಜಾರಿದೆ.

ಅಮ್ಲ ವಾಂಡರರ್ಸ್‌ ಸ್ಟೇಡಿಯಂನಲ್ಲಿ ಆಡಿರುವ 9 ಪಂದ್ಯಗಳಲ್ಲಿ 49.46ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಈ ಮೈದಾನದಲ್ಲಿ 2 ಶತಕ ಬಾರಿಸಿದ್ದು, 2011ರಲ್ಲಿ ಆಸ್ಟ್ರೇಲಿಯದ ವಿರುದ್ಧ ಕೊನೆಯ ಬಾರಿ ಶತಕ ಬಾರಿಸಿದ್ದರು.

ಸ್ಟಾರ್ ಆಟಗಾರರಾದ ಎಬಿಡಿ ವಿಲಿಯರ್ಸ್, ಡೇಲ್ ಸ್ಟೇಯ್ನಾ ಹಾಗೂ ಮಾರ್ನೆ ಮಾರ್ಕೆಲ್ ಅನುಪಸ್ಥಿತಿಯಲ್ಲಿ ಅಮ್ಲ ತಂಡದಲ್ಲಿರುವ ಅತ್ಯಂತ ಅನುಭವಿ ಆಟಗಾರನಾಗಿದ್ದಾರೆ. ಅಮ್ಲ 2010 ಹಾಗೂ 2015ರ ಐದೂವರೆ ವರ್ಷಗಳ ಅವಧಿಯಲ್ಲಿ 41 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 66.43ರ ಸರಾಸರಿಯಲ್ಲಿ 16 ಶತಕ ಬಾರಿಸಿದ್ದರು. ಈ ಅವಧಿಯಲ್ಲಿ 26 ಬ್ಯಾಟ್ಸ್‌ಮನ್‌ಗಳು 2,500ಕ್ಕೂ ಅಧಿಕ ರನ್ ಗಳಿಸಿದ್ದು,ಈ ಪೈಕಿ ಅಮ್ಲರ ಸರಾಸರಿಯಲ್ಲಿ ಶ್ರೇಷ್ಠವಾಗಿತ್ತು. ಈ ಅವಧಿಯಲ್ಲಿ ಆಫ್ರಿಕ ತಂಡ ಟೆಸ್ಟ್ ಕ್ರಿಕೆಟ್‌ನಲ್ಲಿ ಪ್ರಾಬಲ್ಯ ಸಾಧಿಸಿತ್ತು. ಐದೂವರೆ ವರ್ಷದಲ್ಲಿ 23-7 ಗೆಲುವು-ಸೋಲು ದಾಖಲೆ ಹೊಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News