ಭಾರತ ವಿರುದ್ಧ ಸರಣಿಯ ಬಗ್ಗೆ ಇಸಿಬಿ ಆತಂಕ

Update: 2017-01-12 11:03 GMT

 ಮುಂಬೈ, ಜ.12: ಇಂಗ್ಲೆಂಡ್ ಕ್ರಿಕೆಟ್ ಮಂಡಳಿ(ಇಸಿಬಿ)ಉಭಯ ತಂಡಗಳ ನಡುವೆ ಸೀಮಿತ ಓವರ್‌ಗಳ ಕ್ರಿಕೆಟ್ ಸರಣಿ ನಡೆಯುವ ಬಗ್ಗೆ ಆತಂಕ ವ್ಯಕ್ತಪಡಿಸಿ ಬಿಸಿಸಿಐಗೆ ಇ-ಮೇಲ್ ಕಳುಹಿಸಿಕೊಟ್ಟಿದೆ. ಇಸಿಬಿ ಇ-ಮೇಲ್ ಕಳುಹಿಸಲು ಬಿಸಿಸಿಐನ ಮಾಜಿ ಕಾರ್ಯದರ್ಶಿ ಅಜಯ್ ಶಿರ್ಕೆ ಕಾರಣವಾಗಿದ್ದು, ಅವರೀಗ ಹೊಸ ವಿವಾದಕ್ಕೆ ಸಿಲುಕಿದ್ದಾರೆ.

ಭಾರತ ಹಾಗೂ ಇಂಗ್ಲೆಂಡ್‌ನ ನಡುವೆ ಐದು ಪಂದ್ಯಗಳ ಟೆಸ್ಟ್ ಸರಣಿಯು ಕಳೆದ ತಿಂಗಳು ಕೊನೆಗೊಂಡಿದ್ದು, ಏಕದಿನ ಹಾಗೂ ಟ್ವೆಂಟಿ-20 ಸರಣಿಯು ರವಿವಾರದಿಂದ ಆರಂಭವಾಗಲಿದೆ.

ಸುಪ್ರೀಂಕೋರ್ಟ್‌ನ ಆದೇಶದ ಬಳಿಕ ಬಿಸಿಸಿಐನಲ್ಲಿ ಭಾರೀ ಬದಲಾವಣೆಯಾಗುತ್ತಿದ್ದು, ಇದರಿಂದ ಸರಣಿಯಲ್ಲಿ ಅನಿಶ್ಚಿತತೆ ಇಲ್ಲ ಎಂದು ಭರವಸೆ ನೀಡುವಂತೆ ಬಿಸಿಸಿಐನ ಸಿಇಒ ರಾಹುಲ್ ಜೊಹ್ರಾಗೆ ಇಸಿಬಿ ಮುಖ್ಯಸ್ಥ ಗಿಲ್ಸ್ ಕ್ಲಾರ್ಕ್ ಇ-ಮೇಲ್ ಮೂಲಕ ಆಗ್ರಹಿಸಿದ್ದಾರೆ.

 ಶಿರ್ಕೆ ತನಗೆ ದೂರವಾಣಿ ಕರೆ ಮಾಡಿದ್ದರು. ಈ ವೇಳೆ ಅವರು ಬಿಸಿಸಿಐ ಕಾರ್ಯದರ್ಶಿ ಸ್ಥಾನದಿಂದ ವಜಾಗೊಂಡಿರುವ ವಿಷಯ ತಿಳಿಯಿತು. ಅವರು ಇಂಗ್ಲೆಂಡ್ ಸರಣಿ ನಡೆಯುವ ಬಗ್ಗೆ ಚಿಂತೆ ವ್ಯಕ್ತಪಡಿಸಿದ್ದರು. ಇಂಗ್ಲೆಂಡ್ ಕ್ರಿಕೆಟ್ ತಂಡಕ್ಕೆ ಈ ಹಿಂದಿನಂತೆಯೇ ಸೂಕ್ತ ಭದ್ರತೆ, ದಿನ ಭತ್ಯೆ, ಹೊಟೇಲ್ ಬಿಲ್ಸ್ ಹಾಗೂ ಎಲ್ಲ ಸಮಯದಲ್ಲಿ ಸಾರಿಗೆ ವ್ಯವಸ್ಥೆ ಸಿಗಲಿದೆ ಎಂಬ ಬಗ್ಗೆ ಖಚಿತಪಡಿಸಬೇಕು. ಬಿಸಿಸಿಐ ಎಲ್ಲಿ ಪಂದ್ಯಗಳು ನಡೆಯಬೇಕೆಂದು ನಿರ್ಧರಿಸುತ್ತದೆ .ವೇಳಾಪಟ್ಟಿಯಲ್ಲಿ ಏನಾದರೂ ಬದಲಾವಣೆಯಿದೆಯೇ ಎಂಬ ಕುರಿತು ದಯವಿಟ್ಟು ಮಾಹಿತಿ ನೀಡಿ ಎಂದು ಬಿಸಿಸಿಐ ಸಿಇಒಗೆ ಬರೆದ ಇ-ಮೇಲ್‌ನಲ್ಲಿ ಇಸಿಬಿ ಮುಖ್ಯಸ್ಥರು ವಿನಂತಿಸಿದ್ದಾರೆ.

ತಾನು ಇನ್ನು ಮುಂದೆ ಬಿಸಿಸಿಐನಲ್ಲಿ ಯಾವುದೇ ಅಧಿಕಾರ ಹೊಂದಿರುವುದಿಲ್ಲ ಎಂದು ಸುಪ್ರೀಂಕೋರ್ಟ್‌ನಿಂದ ವಜಾಗೊಳಿಸಲ್ಪಟ್ಟ ಬಿಸಿಸಿಐ ಕಾರ್ಯದರ್ಶಿ ಶಿರ್ಕೆ ಇಸಿಬಿಗೆ ಬರೆದ ಪತ್ರದಲ್ಲಿ ತಿಳಿಸಿದ್ದರು.

ಕ್ರಿಕೆಟ್ ಮಂಡಳಿಯು ಜಸ್ಟಿಸ್ ಲೋಧಾ ಸಮಿತಿ ಶಿಫಾರಸು ಮಾಡಿರುವ ಸುಧಾರಣೆಗಳನ್ನು ಜಾರಿಗೆ ತರಲು ವಿಳಂಬ ಮಾಡಿರುವ ಕಾರಣ ಜ.2 ರಂದು ಸುಪ್ರೀಂಕೋರ್ಟ್ ನೀಡಿರುವ ಆದೇಶದಲ್ಲಿ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಹಾಗೂ ಕಾರ್ಯದರ್ಶಿ ಅಜಯ್ ಶಿರ್ಕೆ ಅವರನ್ನು ವಜಾಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News