×
Ad

ರಣಜಿ ಟ್ರೋಫಿ ಫೈನಲ್: ಮುಂಬೈ ಟ್ರೋಫಿ ಕನಸು ಜೀವಂತವಾಗಿರಿಸಿದ ಶ್ರೇಯಸ್

Update: 2017-01-12 23:42 IST

 ಇಂದೋರ್, ಜ.12: ಆಕರ್ಷಕ ಅರ್ಧಶತಕ ಬಾರಿಸಿದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಹಾಲಿ ಚಾಂಪಿಯನ್ ಮುಂಬೈ ತಂಡ ಮತ್ತೊಮ್ಮೆ ರಣಜಿ ಟ್ರೋಫಿ ಪ್ರಶಸ್ತಿ ಗೆಲ್ಲುವ ವಿಶ್ವಾಸವನ್ನು ಜೀವಂತವಾಗಿರಿಸಿದ್ದಾರೆ.

137 ಎಸೆತಗಳಲ್ಲಿ 9 ಬೌಂಡರಿ ಹಾಗೂ 2 ಸಿಕ್ಸರ್‌ಗಳ ಸಹಿತ 82 ರನ್ ಗಳಿಸಿದ ಶ್ರೇಯಸ್ ಅಯ್ಯರ್ ಮುಂಬೈ ತಂಡ 3ನೆ ದಿನದಾಟದಂತ್ಯಕ್ಕೆ ಎರಡನೆ ಇನಿಂಗ್ಸ್‌ನಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 208 ರನ್ ಗಳಿಸಿ 108 ರನ್ ಮುನ್ನಡೆ ಸಾಧಿಸಲು ನೆರವಾದರು.

ಐಯ್ಯರ್ ಅವರಲ್ಲದೆ ಮೊದಲ ಇನಿಂಗ್ಸ್‌ನಲ್ಲಿ 71 ರನ್ ಗಳಿಸಿದ್ದ ಯುವ ಆಟಗಾರ ಪೃಥ್ವಿ ಶಾ ಎರಡನೆ ಇನಿಂಗ್ಸ್‌ನಲ್ಲಿ 35 ಎಸೆತಗಳಲ್ಲಿ 44 ರನ್ ಗಳಿಸಿದ್ದಾರೆ.

ಮೊದಲ ವಿಕೆಟ್‌ಗೆ 54 ರನ್ ಸೇರಿಸಿದ ಶಾ ಹಾಗೂ ಅಖಿಲ್ ಹೆರ್ವಾಡ್ಕರ್(16) ಮುಂಬೈಗೆ ಉತ್ತಮ ಆರಂಭ ನೀಡಿದರು. ಮಧ್ಯಮ ವೇಗದ ಬೌಲರ್ ಚಿಂತನ್ ಗಜ(3-54) ಮುಂಬೈ ಬ್ಯಾಟ್ಸ್‌ಮನ್‌ಗಳಿಬ್ಬರನ್ನು ಬೆನ್ನುಬೆನ್ನಿಗೆ ಔಟ್ ಮಾಡಿದರು.

ಗಜ 10ನೆ ಓವರ್‌ನಲ್ಲಿ ಹೆರ್ವಾಡ್ಕರ್ ವಿಕೆಟ್ ಪಡೆದರು. ಆ ಬಳಿಕ 14ನೆ ಓವರ್‌ನಲ್ಲಿ ಅಪಾಯಕಾರಿ ಬ್ಯಾಟ್ಸ್‌ಮನ್ ಶಾ ವಿಕೆಟ್ ಉರುಳಿಸಿದರು. ಮುಂಬೈ ತಂಡ 66 ರನ್‌ಗೆ 2 ವಿಕೆಟ್ ಕಳೆದುಕೊಂಡಿದ್ದಾಗ ಕೈಜೋಡಿಸಿದ ಐಯ್ಯರ್ ಹಾಗೂ ಸೂರ್ಯಕುಮಾರ್ ಯಾದವ್ 3ನೆ ವಿಕೆಟ್‌ಗೆ 127 ರನ್ ಜೊತೆಯಾಟ ನಡೆಸಿದರು. ಈ ಮೂಲಕ ಮುಂಬೈ ಪಂದ್ಯದ ಮೇಲೆ ಹಿಡಿತ ಸಾಧಿಸಲು ನೆರವಾದರು. ಮುಂಬೈ ಮೊದಲ ಇನಿಂಗ್ಸ್‌ನಲ್ಲಿ ಬರೋಬ್ಬರಿ 100 ರನ್ ಹಿನ್ನಡೆ ಅನುಭವಿಸಿತ್ತು.

ಆತ್ಮವಿಶ್ವಾಸದಿಂದ ಬ್ಯಾಟಿಂಗ್ ಮಾಡಿದ್ದ ಶ್ರೇಯಸ್ ಅಯ್ಯರ್ ಇನಿಂಗ್ಸ್‌ನಲ್ಲಿ 60ನೆ ಓವರ್‌ನಲ್ಲಿ ಚಿಂತನ್ ಗಜ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು. ಆಗ ಮುಂಬೈ ಸ್ಕೋರ್ 3 ವಿಕೆಟ್ ನಷ್ಟಕ್ಕೆ 193. ದಿನದಾಟದಂತ್ಯಕ್ಕೆ ಯಾದವ್(ಅಜೇಯ 45) ಹಾಗೂ ನಾಯಕ ಆದಿತ್ಯ ತಾರೆ(13) ಕ್ರೀಸ್ ಕಾಯ್ದುಕೊಂಡಿದ್ದರು.

ಇದಕ್ಕೆ ಮೊದಲು ಮುಂಬೈನ ಮೊದಲ ಇನಿಂಗ್ಸ್ 228 ರನ್‌ಗೆ ಉತ್ತರವಾಗಿ 6 ವಿಕೆಟ್‌ಗಳ ನಷ್ಟಕ್ಕೆ 291 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಗುಜರಾತ್ ತಂಡ ನಿನ್ನೆಯ ಮೊತ್ತಕ್ಕೆ ಕೇವಲ 37 ರನ್ ಗಳಿಸಿ 328 ರನ್‌ಗೆ ಆಲೌಟಾಯಿತು.

ವೇಗದ ಬೌಲರ್ ಶಾರ್ದೂಲ್ ಠಾಕೂರ್(4-84) ಮುಂಬೈ ಪರ ಯಶಸ್ವಿ ಬೌಲರ್ ಎನಿಸಿಕೊಂಡರು. ಬಲ್ವಿಂದರ್ ಸಿಂಗ್ ಸಂಧು(3-63) ಹಾಗೂ ಅಭಿಷೇಕ್ ನಾಯರ್(3-101) ಉಳಿದ ಆರು ವಿಕೆಟ್‌ಗಳನ್ನು ಹಂಚಿಕೊಂಡರು.

ಮೊದಲ ಇನಿಂಗ್ಸ್‌ನಲ್ಲಿ ಎದುರಾಳಿ ತಂಡಕ್ಕೆ 100 ರನ್ ಮುನ್ನಡೆ ಬಿಟ್ಟುಕೊಟ್ಟಿರುವ ಮುಂಬೈ ತಂಡ ದಾಖಲೆ 42ನೆ ಬಾರಿ ರಣಜಿ ಟ್ರೋಫಿ ಎತ್ತಬೇಕಾದರೆ ಉಳಿದ ಎರಡು ದಿನಪೂರ್ತಿ ಆಡಬೇಕಾಗಿದೆ.

ಸಂಕ್ಷಿಪ್ತ ಸ್ಕೋರ್

ಮುಂಬೈ ಮೊದಲ ಇನಿಂಗ್ಸ್: 228 ರನ್‌ಗೆ ಆಲೌಟ್

ಮುಂಬೈ ಎರಡನೆ ಇನಿಂಗ್ಸ್: 67 ಓವರ್‌ಗಳಲ್ಲಿ 208

(ಶ್ರೇಯಸ್ ಐಯ್ಯರ್ 82, ಸೂರ್ಯಕುಮಾರ್ ಯಾದವ್ ಅಜೇಯ 45, ಪೃಥ್ವಿ ಶಾ 44, ಚಿಂತನ್ ಗಜ 3-54)

ಗುಜರಾತ್ ಮೊದಲ ಇನಿಂಗ್ಸ್: 104.3 ಓವರ್‌ಗಳಲ್ಲಿ 328 ರನ್‌ಗೆ ಆಲೌಟ್

(ಪಾರ್ಥಿವ್ ಪಟೇಲ್ 90, ಮನ್‌ಪ್ರಿತ್ ಜುನೇಜ 77, ಶಾರ್ದೂಲ್ ಠಾಕೂರ್ 4-84, ಬಲ್ವಿಂದರ್ ಸಿಂಗ್ ಸಂಧು 3-63, ಅಭಿಷೇಕ್ ನಾಯರ್ 3-101).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News