×
Ad

ರಹಾನೆ, ಪಂತ್ ಆಕರ್ಷಕ ಆಟ, ಭಾರತಕ್ಕೆ ಜಯ

Update: 2017-01-12 23:45 IST

ಮುಂಬೈ, ಜ.12: ನಾಯಕ ಅಜಿಂಕ್ಯ ರಹಾನೆ(91), ಹಾಗೂ ಯುವ ಬ್ಯಾಟ್ಸ್‌ಮನ್ ರಿಷಬ್ ಪಂತ್(59) ಬಾರಿಸಿದ ಆಕರ್ಷಕ ಅರ್ಧಶತಕದ ಸಹಾಯದಿಂದ ಭಾರತ ಎ ತಂಡ ಇಂಗ್ಲೆಂಡ್ ವಿರುದ್ಧದ ಎರಡನೆ ಏಕದಿನ ಪಂದ್ಯವನ್ನು 6 ವಿಕೆಟ್‌ಗಳ ಅಂತರದಿಂದ ಗೆದ್ದುಕೊಂಡಿದೆ.

ಇಲ್ಲಿನ ಬ್ರೆಬೋರ್ನ್ ಸ್ಟೇಡಿಯಂನಲ್ಲಿ ಗೆಲ್ಲಲು 283 ರನ್ ಗುರಿ ಪಡೆದಿದ್ದ ಭಾರತ 39.4 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ ಗೆಲುವಿನ ದಡ ಸೇರಿತು. 36 ಎಸೆತಗಳಲ್ಲಿ 59 ರನ್ ಬಾರಿಸಿದ ಪಂತ್ ಭಾರತ ‘ಎ’ ತಂಡದ ಪರ ಆಡಿರುವ ಪಾದಾರ್ಪಣೆ ಪಂದ್ಯದಲ್ಲಿ ಮಿಂಚಿದ್ದಾರೆ. ಶೆಲ್ಡನ್ ಜಾಕ್ಸನ್ 59 ರನ್ ಕೊಡುಗೆ ನೀಡಿದರು. ಹಿರಿಯ ಆಟಗಾರ ಸುರೇಶ್ ರೈನಾ 34 ಎಸೆತಗಳಲ್ಲಿ 45 ರನ್ ಗಳಿಸಿದರು.

 ದಿಲ್ಲಿ ಪರ ಏಕದಿನ ಹಾಗೂ ಟ್ವೆಂಟಿ-20 ಪಂದ್ಯಗಳಲ್ಲಿ ಆರಂಭಿಕನಾಗಿ ಕಣಕ್ಕಿಳಿಯುವ ಪಂತ್ ಇಂದು 3ನೆ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದರೂ 8 ಬೌಂಡರಿ ಹಾಗೂ 2 ಭರ್ಜರಿ ಸಿಕ್ಸರ್ ಬಾರಿಸಿ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು.

ಜಾಕ್ ಬಾಲ್ ಬೌಲಿಂಗ್‌ನಲ್ಲಿ ಸತತ 3 ಎಸೆತಗಳಲ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್ ಬಾರಿಸಿದ ಎಡಗೈ ಬ್ಯಾಟ್ಸ್‌ಮನ್ ಪಂತ್ ಕೇವಲ 32 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ರಹಾನೆ ಅವರೊಂದಿಗೆ 2ನೆ ವಿಕೆಟ್‌ಗೆ 78 ರನ್ ಸೇರಿಸಿದ ಪಂತ್ ಪ್ರಬುದ್ಧತೆ ಪ್ರದರ್ಶಿಸಿದರು.

  ಭಾರತ ನಾಯಕ ರಹಾನೆ ತಂಡದ ಗೆಲುವಿನಲ್ಲಿ ಪ್ರಮುಖ ಕಾಣಿಕೆ ನೀಡಿದರು. ಜಾಕ್ಸನ್(59 ರನ್, 56 ಎಸೆತ, 7 ಬೌಂಡರಿ) ಅವರೊಂದಿಗೆ ಮೊದಲ ವಿಕೆಟ್‌ಗೆ 119 ರನ್ ಜೊತೆಯಾಟ ನಡೆಸಿದ ರಹಾನೆ ತಂಡದ ಗೆಲುವಿಗೆ ಭದ್ರ ಬುನಾದಿ ಹಾಕಿಕೊಟ್ಟರು.

ಜಾಕ್ಸನ್ ಔಟಾದ ಬಳಿಕ 19ರ ಹರೆಯದ ರಿಷಬ್ ಪಂತ್(59 ರನ್, 36 ಎಸೆತ, 8 ಬೌಂಡರಿ, 2 ಸಿಕ್ಸರ್) ಅವರೊಂದಿಗೆ 2ನೆ ವಿಕೆಟ್‌ಗೆ 78 ರನ್ ಸೇರಿಸಿದ ರಹಾನೆ ತಂಡದ ಮೊತ್ತವನ್ನು 200ರ ಗಡಿ ತಲುಪಿಸಿದರು.

ಪಂತ್ ಸ್ಪಿನ್ನರ್ ರಶೀದ್‌ಗೆ ವಿಕೆಟ್ ಒಪ್ಪಿಸಿದರು. ಆಗ ಸುರೇಶ್ ರೈನಾರೊಂದಿಗೆ (45 ರನ್, 34 ಎಸೆತ, 7 ಬೌಂಡರಿ) ಕೈಜೋಡಿಸಿದ ರಹಾನೆ 4ನೆ ವಿಕೆಟ್‌ಗೆ 36 ರನ್ ಸೇರಿಸಿದರು. 83 ಎಸೆತಗಳಲ್ಲಿ 10 ಬೌಂಡರಿ ಹಾಗೂ 1 ಸಿಕ್ಸರ್‌ಗಳ ಸಹಿತ 91 ರನ್ ಗಳಿಸಿ ಔಟಾದ ರಹಾನೆ ಕೇವಲ 9 ರನ್‌ನಿಂದ ಶತಕ ವಂಚಿತರಾದರು.

ದೀಪಕ್ ಹೂಡಾ(ಅಜೇಯ 23) ಹಾಗೂ ಇಶಾನ್ ಕಿಶನ್(5) ಭಾರತ ಇನ್ನೂ 62 ಎಸೆತಗಳು ಬಾಕಿ ಇರುವಾಗಲೇ ಗೆಲುವು ದಾಖಲಿಸಲು ನೆರವಾದರು.

ಧೋನಿ ನಾಯಕತ್ವದಲ್ಲಿ ಮೊದಲ ಅಭ್ಯಾಸ ಪಂದ್ಯವನ್ನು ಸೋತಿದ್ದ ಭಾರತ 2ನೆ ಪಂದ್ಯ ಗೆದ್ದುಕೊಂಡು ಮುಂಬರುವ ಇಂಗ್ಲೆಂಡ್ ವಿರುದ್ಧ ಸರಣಿಗೆ ಉತ್ತಮ ತಯಾರಿ ನಡೆಸಿದೆ. ಇಂಗ್ಲೆಂಡ್ ವಿರುದ್ಧ ಗುರುವಾರ ಇಲ್ಲಿ ಆಡಿರುವ ಭಾರತ ‘ಎ’ ತಂಡದಲ್ಲಿದ್ದವರ ಪೈಕಿ ರಹಾನೆ ಹಾಗೂ ರೈನಾ ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯಲ್ಲಿ ಆಡಲಿದ್ದು, ರಿಷಬ್ ಪಂತ್ ಇದೇ ಮೊದಲ ಬಾರಿ ಟ್ವೆಂಟಿ-20 ಪಂದ್ಯದಲ್ಲಿ ಅವಕಾಶ ಪಡೆದಿದ್ದಾರೆ.

 ಇಂಗ್ಲೆಂಡ್ 282 ರನ್: ಇದಕ್ಕೆ ಮೊದಲು ಟಾಸ್ ಜಯಿಸಿದ ಇಂಗ್ಲೆಂಡ್‌ನ ನಾಯಕ ಇಯಾನ್ ಮೋರ್ಗನ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಹೇಲ್ಸ್(51) ಹಾಗೂ ಬೈರ್‌ಸ್ಟೋವ್(64) ಬಾರಿಸಿದ ಅರ್ಧಶತಕದ ಹೊರತಾಗಿಯೂ ಇಂಗ್ಲೆಂಡ್ ತಂಡ ಪರ್ವೇಝ್ ರಸೂಲ್(3-38), ಪ್ರದೀಪ್ ಸಾಂಗ್ವಾನ್(2-64), ಅಶೋಕ್ ದಿಂಡಾ(2-55) ಹಾಗೂ ಎಸ್. ನದೀಮ್(2-41) ದಾಳಿಗೆ ಸಿಲುಕಿ 48.5 ಓವರ್‌ಗಳಲ್ಲಿ 282 ರನ್‌ಗೆ ಆಲೌಟಾಯಿತು.

ಇಂಗ್ಲೆಂಡ್‌ನ ಪರ ಬೈರ್‌ಸ್ಟೋವ್(64 ರನ್, 65 ಎಸೆತ, 10 ಬೌಂಡರಿ)ಅಗ್ರ ಸ್ಕೋರರ್ ಎನಿಸಿಕೊಂಡಿದ್ದರು. ಬೈರ್‌ಸ್ಟೋವ್ ಅವರು ಹೇಲ್ಸ್‌ರೊಂದಿಗೆ 2ನೆ ವಿಕೆಟ್‌ಗೆ 78 ರನ್ ಸೇರಿಸಿದರು. ಬಳಿಕ ಸ್ಟೋಕ್ಸ್‌ರೊಂದಿಗೆ 4ನೆ ವಿಕೆಟ್‌ಗೆ 47 ರನ್ ಜೊತೆಯಾಟ ನಡೆಸಿದ್ದರು.

 ಇಂಗ್ಲೆಂಡ್ ಒಂದು ಹಂತದಲ್ಲಿ 211 ರನ್‌ಗೆ 9 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆಗ 10ನೆ ವಿಕೆಟ್‌ಗೆ 71 ರನ್ ಸೇರಿಸಿದ ಆದಿಲ್ ರಶೀದ್(39 ರನ್) ಹಾಗೂ ವಿಲ್ಲಿ(ಅಜೇಯ 38) ತಂಡ ಸ್ಪರ್ಧಾತ್ಮಕ ಮೊತ್ತ ಗಳಿಸಲು ನೆರವಾದರು.

ಸಂಕ್ಷಿಪ್ತ ಸ್ಕೋರ್

ಇಂಗ್ಲೆಂಡ್: 48.5 ಓವರ್‌ಗಳಲ್ಲಿ 282 ರನ್‌ಗೆ ಆಲೌಟ್

(ಬೈರ್‌ಸ್ಟೋವ್ 64, ಹೇಲ್ಸ್ 51, ರಶೀದ್ 39, ಸ್ಟೋಕ್ಸ್ 38, ವಿಲ್ಲಿ ಅಜೇಯ 38, ಪರ್ವೇಝ್ ರಸೂಲ್ 3-38, ಸಾಂಗ್ವಾನ್ 2-64, ಅಶೋಕ್ ದಿಂಡ 2-55, ನದೀಮ್ 2-41)

ಭಾರತ: 39.4 ಓವರ್‌ಗಳಲ್ಲಿ 283/4

(ಅಜಿಂಕ್ಯ ರಹಾನೆ 91, ಜಾಕ್ಸನ್ 59, ಪಂತ್ 59, ರೈನಾ 45, ಹೂಡ ಅಜೇಯ 23, ವಿಲ್ಲಿ 1-32)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News