ಶಾಕಿಬ್ ದ್ವಿಶತಕ: ಕಿವೀಸ್ ವಿರುದ್ಧ ಬಾಂಗ್ಲಾದೇಶ ಬಿಗಿ ಹಿಡಿತ
ವೆಲ್ಲಿಂಗ್ಟನ್, ಜ.13: ಆಲ್‌ರೌಂಡರ್ ಶಾಕಿಬ್ ಅಲ್ ಹಸನ್ ಬಾರಿಸಿದ ದ್ವಿಶತಕ ಹಾಗೂ ಮುಶ್ಫಿಕುರ್ರಹೀಂ ದಾಖಲಿಸಿದ ಆಕರ್ಷಕ ಶತಕದ ನೆರವಿನಿಂದ ಬಾಂಗ್ಲಾದೇಶ ತಂಡ ನ್ಯೂಝಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಹಿಡಿತ ಸಾಧಿಸಿದೆ.
ಬಾಂಗ್ಲಾ ಎರಡನೆ ದಿನವಾದ ಶುಕ್ರವಾರ ಆಟ ಕೊನೆಗೊಂಡಾಗ 7 ವಿಕೆಟ್‌ಗಳ ನಷ್ಟಕ್ಕೆ 542 ರನ್ ಗಳಿಸಿದೆ. ದಿನದಾಟ ಕೊನೆಗೊಳ್ಳಲು ಕೇವಲ 15 ನಿಮಿಷಗಳಿರುವಾಗ ಶಾಕಿಬ್ 217 ರನ್‌ಗೆ ಔಟಾದರು. ಶಾಕಿಬ್ ಬಾಂಗ್ಲಾದೇಶದ ಪರ ಗರಿಷ್ಠ ರನ್ ಗಳಿಸಿದ ಮೊದಲ ಟೆಸ್ಟ್ ಆಟಗಾರ ಎನಿಸಿಕೊಂಡರು.
ಮತ್ತೊಂದೆಡೆ 159 ರನ್ ಗಳಿಸಿದ ಮುಶ್ಫಿಕುರ್ರಹೀಂ ಹಾಗೂ ಶಾಕಿಬ್ 5ನೆ ವಿಕೆಟ್‌ಗೆ 359 ರನ್ ಜೊತೆಯಾಟ ನಡೆಸಿದರು. ಇದು ಬಾಂಗ್ಲಾದೇಶ ಪರ ದಾಖಲಾದ ಸಾರ್ವಕಾಲಿಕ ಶ್ರೇಷ್ಠ ಜೊತೆಯಾಟವಾಗಿದೆ. ಎರಡು ವರ್ಷಗಳ ಹಿಂದೆ ಪಾಕಿಸ್ತಾನದ ವಿರುದ್ಧ ತಮೀಮ್ ಇಕ್ಬಾಲ್ ಹಾಗೂ ಇಮ್ರುಲ್ ಕಯೆಸ್ 312 ರನ್ ಜೊತೆಯಾಟ ನಡೆಸಿದ್ದರು. ಮುಶ್ಫಿಕುರ್ರಹೀಂ ಹಾಗೂ ಶಾಕಿಬ್ ನ್ಯೂಝಿಲೆಂಡ್‌ನ ವಿರುದ್ಧ 5ನೆ ವಿಕೆಟ್‌ಗೆ ಗರಿಷ್ಠ ಜೊತೆಯಾಟ ನಡೆಸಿದ ಹೆಗ್ಗಳಿಕೆಗೂ ಪಾತ್ರರಾದರು.
ವೆಲ್ಲಿಂಗ್ಟನ್‌ನ 59 ಟೆಸ್ಟ್ ಇತಿಹಾಸದಲ್ಲಿ ಬಾಂಗ್ಲಾದೇಶ ದಾಖಲಿಸಿರುವ 542 ರನ್ ಮೊದಲ ಇನಿಂಗ್ಸ್‌ನಲ್ಲಿ ದಾಖಲಾದ 3ನೆ ಗರಿಷ್ಠ ಸ್ಕೋರ್ ಆಗಿದೆ.
ದ್ವಿಶತಕ ಬಾರಿಸಿ ಮಿಂಚಿರುವ ಶಾಕಿಬ್ ಟೆಸ್ಟ್‌ನಲ್ಲಿ 3,000 ರನ್ ಪೂರೈಸಿದರು. ಒಟ್ಟು 3,146 ರನ್ ಗಳಿಸಿರುವ ಶಾಕಿಬ್ ಬಾಂಗ್ಲಾದ ಪರ ಎರಡನೆ ಗರಿಷ್ಠ ಟೆಸ್ಟ್ ಸ್ಕೋರರ್ ಎನಿಸಿಕೊಂಡರು. ತಮೀಮ್ ಇಕ್ಬಾಲ್ ಮೊದಲ ದಿನದಾಟದಲ್ಲಿ 56 ರನ್ ಗಳಿಸಿದ್ದು, ಒಟ್ಟು 3,405 ರನ್ ಗಳಿಸಿದ್ದಾರೆ.
ಶಾಕಿಬ್ ನಾಲ್ಕು ಹಾಗೂ 189 ರನ್ ಗಳಿಸಿದ್ದಾಗ ಜೀವದಾನ ಪಡೆದಿದ್ದರು. ಲಭಿಸಿದ ಜೀವದಾನ ಲಾಭ ಪಡೆದ ಶಾಕಿಬ್ ಏಳು ಗಂಟೆಗಳ ಬ್ಯಾಟಿಂಗ್‌ನಲ್ಲಿ 276 ಎಸೆತಗಳನ್ನು ಎದುರಿಸಿ 31 ಬೌಂಡರಿಗಳ ಸಹಿತ 217 ರನ್ ಗಳಿಸಿದರು.
ನಾಯಕ ರಹೀಮ್ 260 ಎಸೆತಗಳನ್ನು ಎದುರಿಸಿ 23 ಬೌಂಡರಿ ಹಾಗೂ 1 ಸಿಕ್ಸರ್‌ಗಳ ಸಹಿತ 159 ರನ್ ಗಳಿಸಿದರು.