×
Ad

ಜೋಹಾನಾ ಕೊಂಟಾಗೆ ಸಿಂಗಲ್ಸ್ ಪ್ರಶಸ್ತಿ

Update: 2017-01-13 23:24 IST

ಸಿಡ್ನಿ, ಜ.13: ಬ್ರಿಟನ್‌ನ ವಿಶ್ವದ ನಂ.10ನೆ ಆಟಗಾರ್ತಿ ಜೋಹಾನಾ ಕೊಂಟಾ ಸಿಡ್ನಿ ಇಂಟರ್‌ನ್ಯಾಶನಲ್ ಡಬ್ಲುಟಿಎ ಫೈನಲ್‌ನಲ್ಲಿ ಜಯ ಸಾಧಿಸಿ ಪ್ರಶಸ್ತಿ ಗೆದ್ದುಕೊಂಡರು.

 ಶುಕ್ರವಾರ ಇಲ್ಲಿ ಒಂದು ಗಂಟೆ, 20 ನಿಮಿಷಗಳ ಕಾಲ ನಡೆದ ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ಕೊಂಟಾ ಅವರು ಪೊಲೆಂಡ್‌ನ ದ್ವಿತೀಯ ಶ್ರೇಯಾಂಕಿತೆ ಅಗ್ನೆಸ್ಕಾ ರಾಂಡ್ವಾಂಸ್ಕಾರನ್ನು 6-4, 6-2 ಸೆಟ್‌ಗಳ ಅಂತರದಿಂದ ಮಣಿಸಿದರು.

 25ರ ಹರೆಯದ ಕೊಂಟಾ ವೃತ್ತಿಜೀವನದಲ್ಲಿ ಎರಡನೆ ಬಾರಿ ಡಬ್ಲುಟಿಎ ಟೂರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. 1983ರ ಬಳಿಕ ಸಿಡ್ನಿಯಲ್ಲಿ ಪ್ರಶಸ್ತಿ ಜಯಿಸಿದ ಬ್ರಿಟನ್‌ನ ಮೊದಲ ಆಟಗಾರ್ತಿ ಎನಿಸಿಕೊಂಡರು. ‘‘ನಾನು ಸಿಡ್ನಿಯಲ್ಲಿ ಜನಿಸಿರುವ ಕಾರಣ ಈ ಪ್ರಶಸ್ತಿ ನನ್ನ ತುಂಬಾ ವಿಶೇಷವಾಗಿದೆ. ಟೂರ್ನಿಯುದ್ದಕ್ಕೂ ನೀಡಿರುವ ಪ್ರದರ್ಶನ ನನಗೆ ಸಂತೋಷ ನೀಡಿದೆ. ನಾನು ಆಡಿರುವ ಪಂದ್ಯ ನನಗೆ ಸಂತೋಷ ನೀಡಿದೆ’’ ಎಂದು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೊಂಟಾ ಸುದ್ದಿಗಾರರಿಗೆ ತಿಳಿಸಿದರು.

ಮುಲ್ಲರ್ ಫೈನಲ್‌ಗೆ: ಇದೇ ವೇಳೆ ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಗಿಲ್ಲೆಸ್ ಮುಲ್ಲರ್ ಜಯ ಸಾಧಿಸಿದ್ದಾರೆ. ವಿಕ್ಟರ್ ಟ್ರೊಸ್ಕಿ ಅವರನ್ನು 6-3,7-6(8/6) ಸೆಟ್‌ಗಳ ಅಂತರದಿಂದ ಮಣಿಸಿದ ಮುಲ್ಲರ್ 2 ವರ್ಷಗಳ ಬಳಿಕ ಸಿಡ್ನಿಯಲ್ಲಿ ಫೈನಲ್‌ಗೆ ತಲುಪಿದರು. ಫೈನಲ್‌ನಲ್ಲಿ ಬ್ರಿಟನ್‌ನ ಡೇನಿಯಲ್ ಎವನ್ಸ್‌ರನ್ನು ಎದುರಿಸಲಿದ್ದಾರೆ.

ವಿಕ್ಟರ್‌ರನ್ನು ಮಣಿಸಿದ ಗಿಲ್ಲೆಸ್ ಎರಡು ವರ್ಷಗಳ ಅಜೇಯ ಗೆಲುವಿನ ಓಟಕ್ಕೆ ಕಡಿವಾಣ ಹಾಕಿದರು.

ಸಾನಿಯಾ-ಸ್ಟ್ರೈಕೋವಾ ರನ್ನರ್-ಅಪ್

ಸಿಡ್ನಿ, ಜ.13: ಸಾನಿಯಾ ಮಿರ್ಝಾ ಅವರು ಝೆಕ್ ಗಣರಾಜ್ಯದ ಬಾರ್ಬೊರ ಸ್ಟೈಕೋವಾರೊಂದಿಗೆ ಸಿಡ್ನಿ ಇಂಟರ್‌ನ್ಯಾಶನಲ್ ಟೆನಿಸ್ ಟೂರ್ನಿಯ ಡಬಲ್ಸ್ ವಿಭಾಗದ ಫೈನಲ್‌ನಲ್ಲಿ ಸೋಲುವ ಮೂಲಕ ರನ್ನರ್-ಅಪ್‌ಗೆ ತೃಪ್ತಿಪಟ್ಟುಕೊಂಡಿದ್ದಾರೆ.

ಶುಕ್ರವಾರ ಇಲ್ಲಿ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ಜೋಡಿ ಸಾನಿಯಾ ಹಾಗೂ ಸ್ಟ್ರೈಕೋವಾ ಒಂದು ಗಂಟೆ, 12 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಶ್ರೇಯಾಂಕರಹಿತ ಹಂಗೇರಿಯದ ಟೈಮಿಯ ಬಾಬೊಸ್ ಹಾಗೂ ರಶ್ಯದ ಅನಸ್ಟಾಸಿಯಾ ಪಾವ್ಲಚೆಂಕೊವಾ ವಿರುದ್ಧ 4-6, 4-6 ಸೆಟ್‌ಗಳ ಅಂತರದಿಂದ ಸೋತಿದೆ.

 ಸಾನಿಯಾ ಹಾಗೂ ಸ್ಟ್ರೈಕೋವಾ ಜ.16 ರಿಂದ ಆರಂಭವಾಗಲಿರುವ ಆಸ್ಟ್ರೇಲಿಯನ್ ಓಪನ್‌ಗಿಂತ ಮೊದಲು ಪ್ರಸ್ತುತ ಟೂರ್ನಿಯಲ್ಲಿ ಮೊದಲ ಬಾರಿ ಆಡಿದ್ದಾರೆ.

ಸಾನಿಯಾ ಕಳೆದ ತಿಂಗಳು ಅಮೆರಿಕದ ಬೆಥಾನಿ ಮ್ಯಾಟೆಕ್ ಸ್ಯಾಂಡ್ಸ್ ಜೊತೆಗೂಡಿ ಬ್ರಿಸ್ಬೇನ್ ಇಂಟರ್‌ನ್ಯಾಶನಲ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದರು.

ಫೈನಲ್ ಪಂದ್ಯದ ಮೊದಲ ಸೆಟ್‌ನಲ್ಲಿ ತೀವ್ರ ಪೈಪೋಟಿ ಕಂಡುಬಂದಿದ್ದು, ವಿಜೇತರು ಹಾಗೂ ಸೋತವರ ಮಧ್ಯೆ ಕೇವಲ ಒಂದು ಅಂಕ ಅಂತರವಿತ್ತು. ಎರಡನೆ ಸೆಟ್‌ನಲ್ಲ್ಲಿ ಸಾನಿಯಾ-ಸ್ಟ್ರೈಕೋವಾ ಜೋಡಿ ಕೇವಲ 27 ಅಂಕವನ್ನು ಗಳಿಸಿದರೆ, ಎದುರಾಳಿ ತಂಡದವರು 30 ಅಂಕ ಗಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News