ಗುಜರಾತ್ ಮಡಿಲಿಗೆ ಚೊಚ್ಚಲ ರಣಜಿ ಟ್ರೋಫಿ
ಇಂದೋರ್, ಜ.14: ನಾಯಕ ಪಾರ್ಥಿವ್ ಪಟೇಲ್ ಬಾರಿಸಿದ ಆಕರ್ಷಕ ಶತಕದ(143) ನೆರವಿನಿಂದ ಹಾಲಿ ಚಾಂಪಿಯನ್ ಮುಂಬೈ ತಂಡವನ್ನು 5 ವಿಕೆಟ್‌ಗಳ ಅಂತರದಿಂದ ಮಣಿಸಿದ ಗುಜರಾತ್ ತಂಡ ಇದೇ ಮೊದಲ ಬಾರಿ ರಣಜಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.
ರಣಜಿ ಟ್ರೋಫಿ ಜಯಿಸುವುದರೊಂದಿಗೆ ಗುಜರಾತ್ ದೇಶೀಯ ಕ್ರಿಕೆಟ್‌ನ ಎಲ್ಲ ಮೂರು ಪ್ರಮುಖ ಪ್ರಶಸ್ತಿ ಜಯಿಸಿದ ಮೊದಲ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಗುಜರಾತ್ ತಂಡ ವಿಜಯ್ ಹಝಾರೆ ಟ್ರೋಫಿ(ಹಾಲಿ ಚಾಂಪಿಯನ್) ಹಾಗೂ ಸೈಯದ್ ಮುಶ್ತಾಕ್ ಅಲಿ ಟ್ರೋಫಿ(2 ಬಾರಿ) ಗೆದ್ದುಕೊಂಡಿದೆ.
46ನೆ ಬಾರಿ ರಣಜಿ ಟ್ರೋಫಿ ಫೈನಲ್‌ಗೆ ತಲುಪಿದ್ದ ಮುಂಬೈ ತಂಡ 42ನೆ ಬಾರಿ ಪ್ರಶಸ್ತಿ ಗೆಲ್ಲುವ ಕನಸು ಕೈಗೂಡಲಿಲ್ಲ. 83 ವರ್ಷಗಳ ಇತಿಹಾಸವಿರುವ ರಣಜಿ ಟ್ರೋಫಿಯಲ್ಲಿ ಗುಜರಾತ್ ಎರಡನೆ ಬಾರಿ ಫೈನಲ್‌ಗೆ ತಲುಪಿದ್ದು, 2ನೆ ಪ್ರಯತ್ನದಲ್ಲೇ ಪ್ರಶಸ್ತಿ ಗೆದ್ದುಕೊಂಡಿತು. ಮುಂಬೈ 5ನೆ ಬಾರಿ ರಣಜಿಯಲ್ಲಿ ರನ್ನರ್ ಅಪ್‌ಗೆ ತೃಪ್ತಿಪಟ್ಟುಕೊಂಡಿತು.
ಶನಿವಾರ ಇಲ್ಲಿನ ಹೋಳ್ಕರ್ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದ ಐದನೆ ಹಾಗೂ ಅಂತಿಮ ದಿನದಾಟದಲ್ಲಿ ಗೆಲ್ಲಲು 312 ರನ್ ಗುರಿ ಪಡೆದಿದ್ದ ಗುಜರಾತ್ 89.5 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 313 ರನ್ ಗಳಿಸಿ ಜಯಭೇರಿ ಬಾರಿಸಿತು.
ನಾಯಕ ಪಾರ್ಥಿವ್ ಪಟೇಲ್(143 ರನ್, 196 ಎಸೆತ, 24 ಬೌಂಡರಿ) ಹಾಗೂ ಮನ್‌ಪ್ರೀತ್ ಜುನೇಜ(54 ರನ್, 115 ಎಸೆತ, 8ಬೌಂಡರಿ) 4ನೆ ವಿಕೆಟ್‌ಗೆ 116 ರನ್ ಜೊತೆಯಾಟ ನಡೆಸಿ ಗುಜರಾತ್ ಗೆಲುವಿಗೆ ಪ್ರಮುಖ ಕಾಣಿಕೆ ನೀಡಿದರು.
47 ರನ್‌ನಿಂದ ಅಂತಿಮ ದಿನದಾಟ ಆರಂಭಿಸಿದ ಗುಜರಾತ್ ನಿನ್ನೆಯ ಮೊತ್ತಕ್ಕೆ ಒಂದು ರನ್ ಸೇರಿಸುವ ಮೊದಲೇ ಆರಂಭಿಕ ಆಟಗಾರ ಪಾಂಚಾಲ್(34) ವಿಕೆಟ್‌ನ್ನು ಕಳೆದುಕೊಂಡಿತು. ಇನ್ನೋರ್ವ ಆರಂಭಿಕ ಆಟಗಾರ ಗೊಹಿಲ್(21) ಹೆಚ್ಚು ಹೊತ್ತು ನಿಲ್ಲಲಿಲ್ಲ.
ಗುಜರಾತ್ 89 ರನ್‌ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆಗ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಆಸರೆಯಾದ ಪಾರ್ಥಿವ್ ಪಟೇಲ್ ಹಾಗೂ ಜುನೇಜ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 25ನೆ ಶತಕವನ್ನು ಬಾರಿಸಿದ ಪಟೇಲ್ ಔಟಾಗುವಾಗ ಗುಜರಾತ್ ಗೆಲುವಿಗೆ 13 ರನ್ ಅಗತ್ಯವಿತ್ತು. ಭಟ್(27) ಹಾಗೂ ಗಾಂಧಿ(11) 89.5 ಓವರ್‌ಗಳಲ್ಲಿ ತಂಡಕ್ಕೆ ಗೆಲುವು ತಂದುಕೊಟ್ಟರು.