ಮುಶ್ಫಿಕುರ್ರಹೀಂ ಹೆಲ್ಮೆಟ್‌ಗೆ ಅಪ್ಪಳಿಸಿದ ಬೌನ್ಸರ್
ವೆಲ್ಲಿಂಗ್ಟನ್, ಜ.16: ನ್ಯೂಝಿಲೆಂಡ್ ವಿರುದ್ಧ ಇಲ್ಲಿ ಸೋಮವಾರ ಕೊನೆಗೊಂಡ ಪ್ರಥಮ ಟೆಸ್ಟ್‌ನ ಐದನೆ ದಿನದಾಟದಲ್ಲಿ ಬಾಂಗ್ಲಾದೇಶದ ನಾಯಕ ಮುಶ್ಫಿಕುರ್ರಹೀಂಗೆ ಬ್ಯಾಟಿಂಗ್ ಮಾಡುತ್ತಿದ್ದಾಗ ರಭಸದಿಂದ ಬಂದ ಚೆಂಡೊಂದು ಹೆಲ್ಮೆಟ್‌ಗೆ ಅಪ್ಪಳಿಸಿದ ಪರಿಣಾಮ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ. ಬಾಂಗ್ಲಾ ನಾಯಕ ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ಖಚಿತಪಡಿಸಿದ್ದಾರೆ.
ಬಾಂಗ್ಲಾದೇಶದ ಎರಡನೆ ಇನಿಂಗ್ಸ್‌ನ 43ನೆ ಓವರ್‌ನಲ್ಲಿ ಈ ಘಟನೆ ನಡೆದಿದೆ. ಕಿವೀಸ್‌ನ ವೇಗದ ಬೌಲರ್ ಟಿಮ್ ಸೌಥಿ ಎಸೆದಿದ್ದ ಬೌನ್ಸರ್‌ವೊಂದು ರಹೀಂ ಎಡ ಕಿವಿಯ ಸ್ವಲ್ಪ ಕೆಳಗೆ ಅಪ್ಪಳಿಸಿದೆ. ಬೌನ್ಸರ್‌ನ್ನು ತಪ್ಪಿಸಲು ಯತ್ನಿಸಿದ ಮುಶ್ಫೀಕರ್ರಹೀಂಗೆ ಚೆಂಡು ತಾಗಿದೆ.
ಮುಶ್ಫಿಕರ್ರಹೀಂ ಕುತ್ತಿಗೆಗೆ ನಡೆಸಲಾದ ಪ್ರಾಥಮಿಕ ಎಕ್ಸ್-ರೇ ಹಾಗೂ ಸ್ಕಾನಿಂಗ್‌ನಲ್ಲಿ ತಕ್ಷಣದ ಅಪಾಯದಿಂದ ಪಾರಾಗಿದ್ದಾರೆ.
ಮುಶ್ಫೀಕರ್ರಹೀಂ ಮತ್ತೆ ಫೀಲ್ಡಿಂಗ್ ನಡೆಸಲು ಮೈದಾನಕ್ಕೆ ಇಳಿಯಲಿಲ್ಲ. ಪಂದ್ಯ ಬಳಿಕ ನಡೆದ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಹಾಜರಿದ್ದ ಅವರು, ‘‘ನನ್ನ ಕುತ್ತಿಗೆಯಲ್ಲಿ ಸ್ವಲ್ಪ ನೋವಿದೆ. ಈಗ ಚೇತರಿಸಿಕೊಳ್ಳುತ್ತಿದ್ದೇನೆ’’ ಎಂದು ಹೇಳಿದ್ದಾರೆ.
ಚೆಂಡು ಹೆಲ್ಮೆಟ್‌ಗೆ ಬಂದು ಅಪ್ಪಳಿಸಿದ ತಕ್ಷಣ ಪಿಚ್‌ನಲ್ಲಿ ಕುಳಿತುಕೊಂಡ ರಹೀಂ ಸ್ವಲ್ಪ ಹೊತ್ತು ಸುಧಾರಿಸಿಕೊಂಡರು. ಉಭಯ ತಂಡಗಳ ವೈದ್ಯಕೀಯ ಸಿಬ್ಬಂದಿ ಅವರ ನೆರವಿಗೆ ಧಾವಿಸಿ ಬಂದು ಪ್ರಥಮ ಚಿಕಿತ್ಸೆ ನೀಡಿದರು. ಮೈದಾನದ ಸಮೀಪವೇ ಇದ್ದ ಆ್ಯಂಬುಲೆನ್ಸ್‌ನ್ನು ಕರೆಸಿ ಮೈದಾನದಿಂದ ಹೊರಗೆ ಕೊಂಡೊಯ್ಯಲಾಯಿತು. ಸ್ಟೇಡಿಯಂನಿಂದ ಸುಮಾರು 300 ಮೀ. ದೂರದಲ್ಲಿರುವ ವೆಲ್ಲಿಂಗ್ಟನ್ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ನೀಡಲಾಯಿತು.
ರಹೀಮ್ ಪ್ರಥಮ ಚಿಕಿತ್ಸೆ ಪಡೆಯುವಾಗ ಅವರೊಂದಿಗಿದ್ದ ಆರಂಭಿಕ ಆಟಗಾರ ತಮೀಮ್ ಇಕ್ಬಾಲ್ ,‘‘ ರಹೀಮ್ ಚೆನ್ನಾಗಿದ್ದಾರೆ. ಅವರು ನನ್ನೊಂದಿಗೆ ಮಾತನಾಡಿದ್ದಾರೆ. ಅವರಿಗೆ ಜಾಗ್ರತೆವಹಿಸಲು ಸೂಚಿಸಲಾಗಿದೆ’’ೆ ಎಂದು ಹೇಳಿದರು.
ರಹೀಮ್‌ಗೆ ಮೊದಲ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವಾಗ ಕೈಗೆ ಗಾಯವಾಗಿತ್ತು. ಈ ಕಾರಣದಿಂದ ಅವರು 3 ಹಾಗೂ 4ನೆ ದಿನದಾಟದಲ್ಲಿ ಫೀಲ್ಡಿಂಗ್ ಮಾಡಿರಲಿಲ್ಲ. ಸೋಮವಾರ 53 ಎಸೆತಗಳನ್ನು ಎದುರಿಸಿ1 ಬೌಂಡರಿ ಇರುವ 13 ರನ್ ಗಳಿಸಿದ್ದ ಅವರು ನ್ಯೂಝಿಲೆಂಡ್ ಬೌಲರ್‌ಗಳ ಬೌನ್ಸರ್ ಎದುರಿಸಲು ಕಷ್ಟಪಡುವಂತೆ ಕಂಡು ಬಂದರು. ರಹೀಂ ಮೊದಲ ಇನಿಂಗ್ಸ್‌ನಲ್ಲಿ 159 ರನ್ ಗಳಿಸಿದ್ದರು.