ಆಸ್ಟ್ರೇಲಿಯನ್ ಓಪನ್: ಫೆಡರರ್,ವಾವ್ರಿಂಕ, ಕೆರ್ಬರ್ ಶುಭಾರಂಭ
ಮೆಲ್ಬೋರ್ನ್, ಜ.16: ಮಾಜಿ ಚಾಂಪಿಯನ್‌ಗಳಾದ ರೋಜರ್ ಫೆಡರರ್, ಸ್ಟಾನಿಸ್ಲಾಸ್ ವಾವ್ರಿಂಕ ಹಾಗೂ ವಿಶ್ವದ ನಂ.1 ಆಟಗಾರ್ತಿ ಏಂಜಲಿಕ್ ಕೆರ್ಬರ್ ವರ್ಷದ ಮೊದಲ ಗ್ರಾನ್‌ಸ್ಲಾಮ್ ಟೂರ್ನಿಯ ಆಸ್ಟ್ರೇಲಿಯನ್ ಓಪನ್‌ನಲ್ಲಿ ಶುಭಾರಂಭ ಮಾಡಿದ್ದಾರೆ.
ಸೋಮವಾರ ಇಲ್ಲಿ ಆರಂಭವಾದ ಟೂರ್ನಿಯ ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಸ್ವಿಸ್ ಆಟಗಾರ ಫೆಡರರ್ ಆಸ್ಟ್ರೀಯದ ಜರ್ಗೆನ್ ಮೆಲ್ಝರ್‌ರನ್ನು 7-5, 3-6, 6-2, 6-2 ಸೆಟ್‌ಗಳ ಅಂತರದಿಂದ ಸೋಲಿಸಿದರು.
ಮೆಲ್ಝರ್ ವಿರುದ್ಧ 2 ಗಂಟೆ ಕಾಲ ನಡೆದ ಪಂದ್ಯವನ್ನು ಗೆದ್ದುಕೊಂಡಿರುವ ಫೆಡರರ್ 2ನೆ ಸುತ್ತಿನಲ್ಲಿ ಅಮೆರಿಕದ 20ರ ಪ್ರಾಯದ ಸ್ಟೀವನ್ ಜಾನ್ಸನ್‌ರನ್ನು ಎದುರಿಸಲಿದ್ದಾರೆ.
‘‘ಪ್ರತಿಯೊಂದು ಪಂದ್ಯಗಳು ಉತ್ತಮವಾಗಿರುತ್ತದೆ. ಕಳೆದ ವರ್ಷ ಕಠಿಣ ಸವಾಲು ಎದುರಿಸಿದ್ದೆ. ಇದೀಗ ಮತ್ತೊಮ್ಮೆ ಟೆನಿಸ್ ಆಡುವುದಕ್ಕೆ ಸಂತೋಷವಾಗುತ್ತಿದೆ’’ ಎಂದು 17 ಬಾರಿ ಗ್ರಾನ್‌ಸ್ಲಾಮ್ ಚಾಂಪಿಯನ್ ಫೆಡರರ್ ಹೇಳಿದ್ದಾರೆ.
ವಾವ್ರಿಂಕ ಸ್ಲೋವಾಕಿಯದ ಮಾರ್ಟಿನ್ ಕ್ಲಿಝನ್‌ರನ್ನು ಐದು ಸೆಟ್‌ಗಳ ಅಂತರದಿಂದ ರೋಚಕವಾಗಿ ಮಣಿಸಿದರು.
ಮೂರು ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ವಾವ್ರಿಂಕ ಅವರು 35ನೆ ರ್ಯಾಂಕಿನ ಮಾರ್ಟಿನ್‌ರನ್ನು 3 ಗಂಟೆ, 24 ನಿಮಿಷಗಳ ಹೋರಾಟದಲ್ಲಿ 4-6, 6-4, 7-5, 4-6, 6-4 ಸೆಟ್‌ಗಳ ಅಂತರದಿಂದ ಸೋಲಿಸಿದ್ದಾರೆ.
‘‘ಇದೊಂದು ದೊಡ್ಡ ಹೋರಾಟವಾಗಿತ್ತು. ಮಾರ್ಟಿನ್ ಪ್ರಬಲ ಹೋರಾಟ ನೀಡಿದರು. ನಾನು ಪಂದ್ಯದಲ್ಲಿ ಜಯಶಾಲಿಯಾಗಿದ್ದಕ್ಕೆ ಸಂತೋಷವಾಗುತ್ತಿದೆ. ಈ ಗೆಲುವಿಗಾಗಿ ಸಾಕಷ್ಟು ಹೋರಾಡಿದೆ. ಮೊದಲ ಸುತ್ತಿನಲ್ಲಿ ಜಯ ಸಾಧಿಸುವುದು ನನಗೆ ಅತ್ಯಂತ ಮುಖ್ಯವಾಗಿತ್ತು’’ಎಂದು 2014ರ ಆಸ್ಟ್ರೇಲಿಯನ್ ಓಪನ್‌ನಲ್ಲಿ ರಫೆಲ್ ನಡಾಲ್‌ರನ್ನು ಮಣಿಸಿ ಚಾಂಪಿಯನ್ ಆಗಿದ್ದ ವಾವ್ರಿಂಕ ಹೇಳಿದ್ದಾರೆ.
12ನೆ ಬಾರಿ ಆಸ್ಟ್ರೇಲಿಯನ್ ಓಪನ್ ಅಭಿಮಾನದಲ್ಲಿ ಪಾಲ್ಗೊಂಡಿರುವ ವಾವ್ರಿಂಕ ಮೊದಲ ಸುತ್ತಿನಲ್ಲಿ ಅಜೇಯ ದಾಖಲೆ ಕಾಯ್ದುಕೊಂಡಿದ್ದಾರೆ.
ಜಪಾನ್‌ನ ನಿಶಿಕೊರಿ ರಶ್ಯದ ಆ್ಯಂಡ್ರಿಯ ಕುಝ್ನೆಸೋವಾರನ್ನು 5-7, 6-1, 6-4, 6-7(6/8), 6-2 ಸೆಟ್‌ಗಳ ಅಂತರದಿಂದ ಮಣಿಸಿದರು. 27ರ ಪ್ರಾಯದ ನಿಶಿಕೊರಿ ಮುಂದಿನ ಸುತ್ತಿನಲ್ಲಿ ಫ್ರಾನ್ಸ್‌ನ ಜೆರೆಮಿ ಚಾರ್ಡಿ ಅವರನ್ನು ಎದುರಿಸಲಿದ್ದಾರೆ. ಆಸ್ಟ್ರೇಲಿಯದ ನಿಕ್ ಕಿರ್ಗಿಯೊಸ್ ಪೋರ್ಚುಗಲ್‌ನ ಗಸ್ಟಾವೊ ಎಲಿಯಸ್‌ರನ್ನು ಕೇವಲ 84 ನಿಮಿಷಗಳ ಆಟದಲ್ಲಿ 6-1, 6-2, 6-2 ಸೆಟ್‌ಗಳಿಂದ ಮಣಿಸಿದರು. ಕಿರ್ಗಿಯೊಸ್ ಮುಂದಿನ ಸುತ್ತಿನಲ್ಲಿ ಇಟಲಿಯ ಆ್ಯಂಡ್ರಿಯಸ್ ಸೆಪ್ಪಿಯವರನ್ನು ಎದುರಿಸುವರು.
ಬೆಲ್ಜಿಯಂನ ಥಿಯಗೊ ಮಾಂಟೆರೊರನ್ನು 6-1, 6-3, 6-7(5/7), 6-2 ಸೆಟ್‌ಗಳ ಅಂತರದಿಂದ ಸೋಲಿಸಿದ ಫ್ರಾನ್ಸ್‌ನ ಜೋ-ವಿಲ್ಫ್ರೆಡ್ ಸೋಂಗ ಟೂರ್ನಿಯಲ್ಲಿ ಶುಭಾರಂಭ ಮಾಡಿದರು.
ದ್ವಿತೀಯ ಸುತ್ತಿಗೆ ಕೆರ್ಬರ್: ಅಗ್ರ ಶ್ರೇಯಾಂಕಿತೆ ಏಂಜೆಲಿಕ್ ಕೆರ್ಬರ್ ಆಸ್ಟ್ರೇಲಿಯನ್ ಓಪನ್‌ನ ಮಹಿಳೆಯರ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ ಉಕ್ರೇನ್‌ನ ಲೆಸಿಯಾ ಸುರೆಂಕೊರನ್ನು ಮೂರುಸೆಟ್‌ಗಳ ಅಂತರದಿಂದ ಮಣಿಸಿ ದ್ವಿತೀಯ ಸುತ್ತಿಗೆ ತೇರ್ಗಡೆಯಾದರು.
ಸೋಮವಾರ ನಡೆದ ಪಂದ್ಯದಲ್ಲಿ ಜರ್ಮನಿಯ ಆಟಗಾರ್ತಿ ಕೆರ್ಬರ್ ಅವರು ಲೆಸಿಯಾರನ್ನು 6-2, 5-7, 6-2 ಸೆಟ್‌ಗಳ ಅಂತರದಿಂದ ಸೋಲಿಸಿದರು. ಕಳೆದ ವರ್ಷದ ಫೈನಲ್‌ನಲ್ಲಿ ಸೆರೆನಾ ವಿಲಿಯಮ್ಸ್‌ರನ್ನು ಸೋಲಿಸಿ ಆಘಾತ ನೀಡಿದ್ದ ಕೆರ್ಬರ್ ಆ ಬಳಿಕ ಯುಎಸ್ ಓಪನ್‌ನ್ನು ಜಯಿಸಿದ್ದರು. ವಿಶ್ವ ರ್ಯಾಂಕಿಂಗ್‌ನಲ್ಲಿ ಸೆರೆನಾ ವಿಲಿಯಮ್ಸ್‌ರನ್ನು ಹಿಂದಿಕ್ಕಿ ನಂ.1 ಸ್ಥಾನ ಪಡೆದಿದ್ದರು.
ಇದೀಗ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಆಗಿ ಮಾತ್ರವಲ್ಲ ಮೊದಲ ಬಾರಿ ಅಗ್ರ ಶ್ರೇಯಾಂಕದೊಂದಿಗೆ ಟೆನಿಸ್ ಕಣಕ್ಕೆ ಧುಮುಕಿದ್ದಾರೆ. ಭಾರೀ ನಿರೀಕ್ಷೆಯ ಭಾರವನ್ನು ಹೊತ್ತಿದ್ದಾರೆ.
‘‘ಮೊದಲ ಸುತ್ತಿನ ಪಂದ್ಯ ಯಾವಾಗಲೂ ಕಷ್ಟಕರವಾಗಿರುತ್ತದೆ. ನಾನು ಆಟವನ್ನು ಆನಂದಿಸುವೆ. ಇದೀಗ ದ್ವಿತೀಯ ಸುತ್ತಿಗೆ ತಲುಪಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ. ಮೆಲ್ಬೋರ್ನ್‌ಗೆ ವಾಪಸಾಗಿದ್ದಕ್ಕೆ ಖುಷಿಯಾಗುತ್ತಿದೆ. 2016ರಲ್ಲಿ ಇಲ್ಲಿಯೇ ನನ್ನ ಯಶಸ್ಸು ಆರಂಭವಾಗಿತ್ತು’’ ಎಂದು ಕೆರ್ಬರ್ ಹೇಳಿದ್ದಾರೆ.
2013ರಲ್ಲಿ ವಿಕ್ಟೋರಿಯ ಅಝರೆಂಕಾ ಸತತ ಎರಡನೆ ಬಾರಿ ಆಸ್ಟ್ರೇಲಿಯನ್ ಓಪನ್ ಕಿರೀಟ ಧರಿಸಿದ್ದರು. ಅಝರೆಂಕಾ ದಾಖಲೆ ಸರಿಗಟ್ಟಲು ಎದುರು ನೋಡುತ್ತಿರುವ ಕೆರ್ಬರ್ ಮುಂದಿನ ಸುತ್ತಿನಲ್ಲಿ ತಮ್ಮದೇ ದೇಶದ ಕ್ಯಾರಿನಾ ವಿಟ್‌ಥೋಫ್ಟ್‌ರನ್ನು ಎದುರಿಸಲಿದ್ದಾರೆ. ಕ್ಯಾರಿನಾ ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲಿ ಜಪಾನ್‌ನ ಕ್ವಾಲಿಫೈಯರ್ ಎರಿ ಹೊಝುಮಿ ಅವರನ್ನು 7-5,7-6(8/6) ಸೆಟ್‌ಗಳಿಂದ ಮಣಿಸಿದ್ದರು.