×
Ad

ಕಟಕ್ ಏಕದಿನಕ್ಕೆ ಇಬ್ಬನಿ ಕಾಟ

Update: 2017-01-17 23:14 IST

ಕಟಕ್, ಜ.17: ಪುಣೆಯಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಜಯ ಸಾಧಿಸಿ ಆತ್ಮವಿಶ್ವಾಸವನ್ನು ಪಡೆದಿರುವ ಭಾರತ ಜ.19 ರಂದು ಇಂಗ್ಲೆಂಡ್‌ನ ವಿರುದ್ಧ ಎರಡನೆ ಏಕದಿನ ಪಂದ್ಯವನ್ನು ಆಡಲಿದೆ. ಆದರೆ, ಗುರುವಾರ ಇಲ್ಲಿ ನಡೆಯಲಿರುವ ಪಂದ್ಯದಲ್ಲಿ ಭಾರತಕ್ಕೆ ಇಬ್ಬನಿ ಕಾಟ ಚಿಂತೆಯಾಗಿ ಕಾಡುತ್ತಿದೆ.

   ‘‘ಕಟಕ್‌ನ ಬಾರಾಬತಿ ಸ್ಟೇಡಿಯಂನಲ್ಲಿ ಸಂಜೆ 5:30ಕ್ಕೆ ಇಬ್ಬನಿ ಬೀಳಲಾರಂಭಿಸುತ್ತದೆ. ಪಂದ್ಯದ ದಿನವೂ ಇಬ್ಬನಿ ಸುರಿದರೆ ಟಾಸ್ ಅತ್ಯಂತ ಮುಖ್ಯ ಪಾತ್ರವಹಿಸುತ್ತದೆ. ಎರಡನೆ ಬ್ಯಾಟಿಂಗ್ ಮಾಡುವ ತಂಡಕ್ಕೆ ಇದರಿಂದ ಲಾಭವಿದೆ. ಇಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಇಬ್ಬನಿ ಸುರಿಯುತ್ತಿದೆ. ಕೆಮಿಕಲ್ ಸಿಂಪಡಿಸುವಿಕೆ, ಎರಡು ಸೂಪರ್-ಸೋಪರ್ಸ್‌ ಯಂತ್ರಗಳ ಮೂಲಕ ಇಬ್ಬನಿ ಹೋಗಲಾಡಿಸಲು ಗರಿಷ್ಠ ಪ್ರಯತ್ನ ನಡೆಸುತ್ತಿದ್ದೇವೆ. ಮೈದಾನದ ಹೊರಗಿರುವ ಹುಲ್ಲನ್ನು 8ರಿಂದ ಆರು ಮಿಲಿಮೀಟರ್‌ಗೆ ಸಣ್ಣಗೆ ಮಾಡಲಾಗುತ್ತಿದೆ’’ ಎಂದು ಒಡಿಶಾ ಕ್ರಿಕೆಟ್ ಸಂಸ್ಥೆಯ ಮುಖ್ಯ ಕ್ಯುರೇಟರ್ ಪಂಕಜ್ ಪಟ್ನಾಯಕ್ ಹೇಳಿದ್ದಾರೆ.

ಕಟಕ್‌ನಲ್ಲಿ 2014ರ ನ.2 ರಂದು ಕೊನೆಯ ಬಾರಿ ಏಕದಿನ ಪಂದ್ಯ ನಡೆದಿತ್ತು. ಆಗ 5 ವಿಕೆಟ್‌ಗಳ ನಷ್ಟಕ್ಕೆ 363 ರನ್ ಗಳಿಸಿದ್ದ ಭಾರತ ತಂಡ ಶ್ರೀಲಂಕಾವನ್ನು 169 ರನ್‌ಗಳ ಅಂತರದಿಂದ ಮಣಿಸಿತ್ತು.

ಪುಣೆಯಲ್ಲಿ ನಡೆದ ಮೊದಲ ಪಂದ್ಯದಲ್ಲಿ 11 ಎಸೆತಗಳು ಬಾಕಿ ಇರುವಾಗಲೇ 351 ರನ್ ಗರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ್ದ ವಿರಾಟ್ ಕೊಹ್ಲಿ ಪಡೆ ತನ್ನ ಉದ್ದೇಶವನ್ನು ಈಗಾಗಲೇ ಸ್ಪಷ್ಟಪಡಿಸಿದೆ. ಕಟಕ್‌ನಲ್ಲಿ ಮತ್ತೊಂದು ರನ್ ಹೊಳೆ ಹರಿದರೂ ಅಚ್ಚರಿಯಾಗದು.

‘‘ಎಷ್ಟು ರನ್ ಗಳಿಸಬಹುದೆಂದು ಈಗಲೇ ಹೇಳಲು ಕಷ್ಟವಾಗುತ್ತದೆ. ಆದರೆ, ಈ ಪಿಚ್‌ನಲ್ಲಿ ಎಂದಿನಂತೆಯೇ ರನ್ ಹೊಳೆ ಹರಿಯಲಿದೆ. ಪಿಚ್ ಬ್ಯಾಟ್ಸ್‌ಮನ್‌ಗಳ ಸ್ನೇಹಿಯಾಗಿದೆ’’ ಎಂದು ಕ್ಯುರೇಟರ್ ಹೇಳಿದ್ದಾರೆ.

ಇದೇ ಪಿಚ್‌ನಲ್ಲಿ ಹರ್ಯಾಣ ಹಾಗೂ ಜಮ್ಮು-ಕಾಶ್ಮೀರದ ನಡುವೆ ರಣಜಿ ಟ್ರೋಫಿಯ ಸಿ ಗುಂಪಿನ ಪಂದ್ಯ ನಡೆದಿತ್ತು. ಆ ಪಂದ್ಯ ಡ್ರಾ ಆಗಿತ್ತು. ಮೊದಲ ಇನಿಂಗ್ಸ್‌ನಲ್ಲಿ 502 ರನ್ ಗಳಿಸಿದ್ದ ಹರ್ಯಾಣ ಮೊದಲ ಇನಿಂಗ್ಸ್ ಮುನ್ನಡೆ ಆಧಾರದಲ್ಲಿ 3 ಅಂಕ ಗಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News