×
Ad

ಆಸ್ಟ್ರೇಲಿಯನ್ ಓಪನ್: ಜೊಕೊವಿಕ್, ರಫೆಲ್ ನಡಾಲ್, ಸೆರೆನಾ ಗೆಲುವಿನಾರಂಭ

Update: 2017-01-17 23:18 IST

ಮೆಲ್ಬೋರ್ನ್, ಜ.17: ಆರು ಬಾರಿಯ ಚಾಂಪಿಯನ್ ನೊವಾಕ್ ಜೊಕೊವಿಕ್ ಬಿಗ್ ಹಿಟ್ಟರ್ ಸ್ಪೇನ್‌ನ ಫೆರ್ನಾಂಡೊ ವೆರ್ಡಾಸ್ಕೊರನ್ನು ಮಣಿಸಿ ಆಸ್ಟ್ರೇಲಿಯನ್ ಓಪನ್‌ನಲ್ಲಿ ಗೆಲುವಿನ ಆರಂಭ ಪಡೆದಿದ್ದಾರೆ.

ಇಲ್ಲಿ ಮಂಗಳವಾರ ನಡೆದ ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಸರ್ಬಿಯ ಆಟಗಾರ ಜೊಕೊವಿಕ್ ಅವರು ವೆರ್ಡಾಸ್ಕೊರನ್ನು 6-1, 7-6(7/4), 6-2 ಸೆಟ್‌ಗಳ ಅಂತರದಿಂದ ಮಣಿಸಿದರು. ವೆರ್ಡಾಸ್ಕೊ ಕಳೆದ ವರ್ಷ ನಡೆದ ಆಸ್ಟ್ರೇಲಿಯನ್ ಓಪನ್‌ನಲ್ಲಿ ಮೊದಲ ಸುತ್ತಿನ ಪಂದ್ಯದಲ್ಲೇ ರಫೆಲ್ ನಡಾಲ್‌ರನ್ನು ಮಣಿಸಿ ಟೂರ್ನಿಯಿಂದ ಹೊರಹಾಕಿದ್ದರು.

ವೆರ್ಡಾಸ್ಕೊ ಸುಮಾರು ಏಳು ವರ್ಷಗಳಿಂದ ಸರ್ಬಿಯ ಆಟಗಾರ ಜೊಕೊವಿಕ್‌ರನ್ನು ಮಣಿಸಿಲ್ಲ. 2010ರಲ್ಲಿ ರೋಮ್‌ನಲ್ಲಿ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಜೊಕೊವಿಕ್‌ರನ್ನು ಕೊನೆಯ ಬಾರಿ ಸೋಲಿಸಿದ್ದರು.

12 ಬಾರಿ ಗ್ರಾನ್‌ಸ್ಲಾಮ್ ಚಾಂಪಿಯನ್ ಆಗಿರುವ ಜೊಕೊವಿಕ್ ಅವರು ವೆರ್ಡಾಸ್ಕೊ ವಿರುದ್ಧ ಆಡಿರುವ ಕಳೆದ 13 ಪಂದ್ಯಗಳಲ್ಲಿ ನಾಲ್ಕು ಪಂದ್ಯಗಳನ್ನು ಸೋತಿದ್ದಾರೆ. ಆದರೆ, ಒತ್ತಡದ ಕ್ಷಣದಲ್ಲಿ ಜೊಕೊವಿಕ್ ಸ್ಥಿರ ಪ್ರದರ್ಶನ ನೀಡುತ್ತಾರೆ.

ಸೆರೆನಾ ದ್ವಿತೀಯ ಸುತ್ತಿಗೆ: ಅಮೆರಿಕದ ಸ್ಟಾರ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಆಸ್ಟ್ರೇಲಿಯನ್ ಓಪನ್‌ನಲ್ಲಿ ದ್ವಿತೀಯ ಸುತ್ತಿಗೆ ತಲುಪುವ ಮೂಲಕ ಗ್ರಾನ್‌ಸ್ಲಾಮ್‌ಗೆ ಅಧಿಕೃತವಾಗಿ ವಾಪಸಾಗಿದ್ದಾರೆ.

23 ಗ್ರಾನ್‌ಸ್ಲಾಮ್ ಪ್ರಶಸ್ತಿ ಜಯಿಸಿ ಹೊಸ ದಾಖಲೆ ಬರೆಯುವತ್ತ ಚಿತ್ತವಿರಿಸಿರುವ ಸೆರೆನಾ ಮಹಿಳೆಯರ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ ಸ್ವಿಸ್‌ನ ಅಪಾಯಕಾರಿ ಯುವ ಆಟಗಾರ್ತಿ ಬೆಲಿಂಡ ಬೆನ್ಸಿಕ್‌ರನ್ನು 6-4, 6-3 ಸೆಟ್‌ಗಳ ಅಂತರದಿಂದ ಸೋಲಿಸಿದ್ದಾರೆ.

ಸೆರೆನಾ ಸೆಪ್ಟಂಬರ್‌ನಲ್ಲಿ ಯುಎಸ್ ಓಪನ್‌ನಲ್ಲಿ ಸೆಮಿ ಫೈನಲ್ ಸುತ್ತಿನಲ್ಲಿ ಆಘಾತಕಾರಿಯಾಗಿ ಸೋತ ಬಳಿಕ ಹೆಚ್ಚು ಪಂದ್ಯಗಳನ್ನು ಆಡಿಲ್ಲ. ಬೆನ್ಸಿಕ್ ವಿರುದ್ಧ ಮೊದಲ ಸೆಟ್‌ನಲ್ಲಿ ಪ್ರತಿರೋಧ ಎದುರಿಸಿದ್ದ ಸೆರೆನಾ ಎರಡನೆ ಸೆಟ್‌ನಲ್ಲಿ ಪ್ರಾಬಲ್ಯ ಮೆರೆದರು. ಅಂತಿಮವಾಗಿ ಸೆಂಟರ್‌ಕೋರ್ಟ್‌ನಲ್ಲಿ ಸುಲಭ ಜಯ ಸಾಧಿಸಿದರು.

‘‘ನಾನು ಆಡಿದಂತಹ ಒಂದು ಕಠಿಣ ಮೊದಲ ಸುತ್ತಿನ ಪಂದ್ಯ ಇದಾಗಿದೆ. ಇನ್ನು ಮುಂದೆ ನಾನು ಕಳೆದುಕೊಳ್ಳುವುದು ಏನೂ ಇಲ್ಲ. ಪ್ರತಿ ಪಂದ್ಯ,ಪ್ರತಿ ಟೂರ್ನಮೆಂಟ್‌ನ್ನು ಸಂತೋಷಕ್ಕಾಗಿ ಆಡುವೆ’’ಎಂದು ಸೆರೆನಾ ಹೇಳಿದರು.

ಒಂದು ವೇಳೆ ಸೆರೆನಾ ಏಳನೆ ಬಾರಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಜಯಿಸಿದರೆ ಮುಕ್ತ ಯುಗದಲ್ಲಿ 22 ಗ್ರಾನ್‌ಸ್ಲಾಮ್ ಪ್ರಶಸ್ತಿಗಳನ್ನು ಜಯಿಸಿದ್ದ ಸ್ಟೆಫಿಗ್ರಾಫ್ ದಾಖಲೆಯನ್ನು ಮುರಿಯಲಿದ್ದಾರೆ.

ಸೆರೆನಾ ಮುಂದಿನ ಸುತ್ತಿನಲ್ಲಿ ಲೂಸಿ ಸಫರೋವಾರನ್ನು ಎದುರಿಸಲಿದ್ದಾರೆ. ಝೆಕ್ ಗಣರಾಜ್ಯದ ಸಫರೋವಾ ಮೊದಲ ಸುತ್ತಿನ ಪಂದ್ಯದಲ್ಲಿ ವಿಕ್‌ಮಯೆರ್‌ರನ್ನು 3-6, 7-6(9/7), 6-1 ಸೆಟ್‌ಗಳಿಂದ ಸೋಲಿಸಿದರು.

ಯುಎಸ್ ಓಪನ್‌ನಲ್ಲಿ ಸೆರೆನಾರನ್ನು ಮಣಿಸಿ ವಿಶ್ವದ ನಂ.1 ರ್ಯಾಂಕಿನಿಂದ ಕೆಳಗಿಳಿಸಿರುವ ಐದನೆ ಶ್ರೇಯಾಂಕಿತೆ ಕ್ಯಾರೊಲಿನಾ ಪ್ಲಿಸ್ಕೋವಾ ಮಹಿಳೆಯರ ಸಿಂಗಲ್ಸ್‌ನಲ್ಲಿ ಸ್ಪೇನ್‌ನ ಸಾರಾ ಸಾರಿಬೆಸ್ ಟಾರ್ಮೊರನ್ನು 6-2, 6-0 ಅಂತರದಿಂದ ಮಣಿಸಿದರು.

ಕಳೆದ ವಾರ ಸಿಡ್ನಿ ಇಂಟರ್‌ನ್ಯಾಶನಲ್ ಪ್ರಶಸ್ತಿ ಜಯಿಸಿರುವ ಬ್ರಿಟನ್‌ನ ಜೋ ಕಾಂಟಾ ಅವರು ಬೆಲ್ಜಿಯಂನ ಕ್ರಿಸ್ಟಿನ್ ಫ್ಲಿಪ್‌ಕಿನ್ಸ್‌ರನ್ನು 7-5, 6-2 ಸೆಟ್‌ಗಳಿಂದ ಸೋಲಿಸಿ ಎರಡನೆ ಸುತ್ತು ತಲುಪಿದ್ದಾರೆ.

ವಿಶ್ವದ ನಂ.3ನೆ ಆಟಗಾರ ಮಿಲಾಸ್ ರಾವೊನಿಕ್ ಜರ್ಮನಿಯ ಡಸ್ಟಿನ್ ಬ್ರೌನ್‌ರನ್ನು 6-3, 6-4, 6-2 ಸೆಟ್‌ಗಳ ಅಂತರದಿಂದ ಸೋಲಿಸಿದರು. ಕಳೆದ ವರ್ಷ ಸೆಮಿ ಫೈನಲ್‌ಗೆ ತಲುಪಿದ್ದ ಕೆನಡಾದ ರಾವೊನಿಕ್ ಗೆಲುವಿನೊಂದಿಗೆ ತನ್ನ ಅಭಿಯಾನ ಆರಂಭಿಸಿದರು.

ಮೊದಲ ತಡೆ ದಾಟಿದ ನಡಾಲ್

ಮೆಲ್ಬೋರ್ನ್, ಜ.17: ಸತತ ಮೊದಲ ಸುತ್ತಿನ ಸೋಲಿನಿಂದ ಹೊರ ಬಂದಿರುವ ಸ್ಪೇನ್‌ನ ರಫೆಲ್ ನಡಾಲ್ ಆಸ್ಟ್ರೇಲಿಯನ್‌ ಓಪನ್‌ನಲ್ಲಿ ಮೊದಲ ತಡೆಯನ್ನು ಯಶಸ್ವಿಯಾಗಿ ಕ್ರಮಿಸಿದರು.

ರಾಡ್ ಲಾವೆರ್ ಅರೆನಾದಲ್ಲಿ ಮಂಗಳವಾರ ನಡೆದ ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ 2009ರ ಚಾಂಪಿಯನ್ ನಡಾಲ್ ಫ್ಲಾರಿಯನ್ ಮಯೆರ್‌ರನ್ನು 6-3, 6-4, 6-1 ಸೆಟ್‌ಗಳ ಅಂತರದಿಂದ ಮಣಿಸಿ ಎರಡನೆ ಸುತ್ತಿಗೆ ತೇರ್ಗಡೆಯಾದರು.

2016ರಲ್ಲಿ ಗಾಯದ ಸಮಸ್ಯೆಯಿಂದಾಗಿ ಹೆಚ್ಚಿನ ಟೂರ್ನಿಗಳಿಂದ ಹೊರಗುಳಿದಿದ್ದ ನಡಾಲ್ 9ನೆ ಶ್ರೇಯಾಂಕದೊಂದಿಗೆ ಈ ಟೂರ್ನಿಯಲ್ಲಿ ಆಡುತ್ತಿದ್ದಾರೆ. ಎರಡು ಗಂಟೆಯೊಳಗೆ ನಡೆದ ಪಂದ್ಯದಲ್ಲಿ ಜರ್ಮನಿಯ ಆಟಗಾರನನ್ನು ಮಣಿಸಿದ 14 ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ನಡಾಲ್ ಮುಂದಿನ ಸುತ್ತಿನಲ್ಲಿ ಮಾರ್ಕಸ್ ಬಾಘ್‌ಡಾಟಿಸ್‌ರನ್ನು ಎದುರಿಸಲಿದ್ದಾರೆ.

ಮೊದಲ ಸುತ್ತಿನ ಮ್ಯಾರಥಾನ್ ಪಂದ್ಯದಲ್ಲಿ ಕಾರ್ಲೊವಿಕ್‌ಗೆ ಜಯ

ಮೆಲ್ಬೋರ್ನ್, ಜ.17: ಆಸ್ಟ್ರೇಲಿಯನ್ ಓಪನ್‌ನಲ್ಲಿ ಸುಮಾರು 5 ಗಂಟೆಗೂ ಅಧಿಕ ಕಾಲ ನಡೆದ 84 ಗೇಮ್‌ಗಳ ಮೊದಲ ಸುತ್ತಿನ ಮ್ಯಾರಥಾನ್ ಪಂದ್ಯದಲ್ಲಿ ಕ್ರೊವೇಷಿಯದ ಇವೊ ಕಾರ್ಲೊವಿಕ್ ಜಯಶಾಲಿಯಾದರು.

ಮೆಲ್ಬೋರ್ನ್ ಪಾರ್ಕ್‌ನಲ್ಲಿ ಮಂಗಳವಾರ ನಡೆದ ಮಹಿಳೆಯರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಕ್ರೊವೇಷಿಯದ ಸರ್ವಿಂಗ್ ಸ್ಪೆಷಲಿಸ್ಟ್ ಕಾರ್ಲೊವಿಕ್‌ಅವರು ಹಾರಾಸಿಯೊ ಝೆಬಲ್ಲಾಸ್‌ರನ್ನು 6-7(6/8), 3-6, 7-5, 6-2, 22-20 ಸೆಟ್‌ಗಳ ಅಂತರದಿಂದ ಸೋಲಿಸಿದರು.

84 ಗೇಮ್‌ಗಳ ಮ್ಯಾರಥಾನ್ ಪಂದ್ಯ ಈ ಹಿಂದಿನ ಆಸ್ಟ್ರೇಲಿಯನ್ ಓಪನ್‌ನ 83 ಗೇಮ್‌ಗಳ ದಾಖಲೆ ಮುರಿಯಿತು. 2003ರಲ್ಲಿ ಆ್ಯಂಡಿ ರಾಡೆಇಕ್ ಈ ಸಾಧನೆ ಮಾಡಿದ್ದರು.

5 ಗಂಟೆ, 15 ನಿಮಿಷಗಳ ಕಾಲ ಈ ಪಂದ್ಯ ಟೂರ್ನಿಯ ಇತಿಹಾಸದಲ್ಲಿ ದೀರ್ಘಾವಧಿ ಪಂದ್ಯದ ಪೈಕಿ ಒಂದಾಗಿದೆ. 2012ರ ಪುರುಷರ ಸಿಂಗಲ್ಸ್ ಫೈನಲ್ ಪಂದ್ಯ 5 ಗಂಟೆ, 53 ನಿಮಿಷಗಳ ಕಾಲ ಸಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News