×
Ad

ಹೈದರಾಬಾದ್ ಕ್ರಿಕೆಟ್ ಸಂಸ್ಥೆ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಅಝರುದ್ದೀನ್

Update: 2017-01-17 23:20 IST

ಹೈದರಾಬಾದ್, ಜ.17: ಹೈದರಾಬಾದ್ ಕ್ರಿಕೆಟ್ ಸಂಸ್ಥೆ(ಎಚ್‌ಸಿಎ) ಅಧ್ಯಕ್ಷ ಹುದ್ದೆಗೆ ತಾನು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ್ದಕ್ಕೆ ತೀವ್ರ ಅಸಮಾಧಾನಗೊಂಡಿರುವ ಭಾರತದ ಮಾಜಿ ಕ್ರಿಕೆಟಿಗ ಮುಹಮ್ಮದ್ ಅಝರುದ್ದೀನ್ ಎಚ್‌ಸಿಎ ವಿರುದ್ಧ ಕೋರ್ಟ್ ವೆುಟ್ಟಿಲೇರಲು ನಿರ್ಧರಿಸಿದ್ದಾರೆ.

ಮ್ಯಾಚ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿ ನಿಷೇಧಕ್ಕೆ ಗುರಿಯಾಗಿದ್ದ ಅಝರುದ್ದೀನ್ ತನ್ನ ವಿರುದ್ಧ ನಿಷೇಧವನ್ನು ಬಿಸಿಸಿಐ ಹಿಂಪಡೆದಿರುವ ಬಗ್ಗೆ ಯಾವುದೇ ಪುರಾವೆಯನ್ನು ಸಲ್ಲಿಸಿಲ್ಲ. ಎಚ್‌ಸಿಎ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಪ್ರಕ್ರಿಯೆ ಮಂಗಳವಾರ ನಡೆದಿದ್ದು, ಬ್ಯಾಲಟ್ ಬಾಕ್ಸ್ ಪೊಲೀಸ್ ಕಸ್ಟಡಿಯಲ್ಲಿದೆ. ಫಲಿತಾಂಶ ಹೈಕೋರ್ಟ್ ಆದೇಶದ ಬಳಿಕ ಪ್ರಕಟವಾಗಲಿದೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.

 ಭಾರತದಕ ಕ್ರಿಕೆಟ್ ತಂಡದಲ್ಲಿ ದೀರ್ಘ ಸಮಯ ನಾಯಕನಾಗಿ ಕಾರ್ಯನಿರ್ವಹಿಸಿರುವ ಅಝರ್ 2000ರಲ್ಲಿ ಬೆಳಕಿಗೆ ಬಂದಿದ್ದ ಮ್ಯಾಚ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿ ಬಿಸಿಸಿಐ ಆಜೀವ ನಿಷೇಧ ಹೇರಿತ್ತು. ಬಿಸಿಸಿಐ ನಿಷೇಧ ನಿರ್ಧಾರದ ವಿರುದ್ಧ ಆಂಧ್ರ ಪ್ರದೇಶ ಹೈಕೋರ್ಟ್‌ನಲ್ಲಿ ಕಾನೂನು ಹೋರಾಟ ನಡೆಸಿದ್ದು, ನ್ಯಾಯಾಲಯ 2012ರಲ್ಲಿ ಅಝರ್ ಪರ ತೀರ್ಪು ನೀಡಿತ್ತು.

 ಆದಾಗ್ಯೂ, ಬಿಸಿಸಿಐ ಅಝರ್ ವಿರುದ್ಧ ಹೇರಿದ್ದ ಆಜೀವ ನಿಷೇಧವನ್ನು ವಾಪಸ್ ಪಡೆದಿರಲಿಲ್ಲ. ಈಗ ಭಾರತದ ಮಾಜಿ ನಾಯಕರಿಗೆ ನೀಡಲಾಗುತ್ತಿರುವ ಪಿಂಚಣಿ ಅಝರ್‌ಗೆ ಸಿಗುತ್ತಿಲ್ಲ.

2009ರಲ್ಲಿ ಉತ್ತರಪ್ರದೇಶದ ಮೊರದಾಬಾದ್‌ನಿಂದ   ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಝರ್ ಕಾಂಗ್ರೆಸ್ ಪಕ್ಷದ ಸಂಸದನಾಗಿ ಆಯ್ಕೆಯಾಗಿದ್ದರು. ಆದರೆ, 2014ರಲ್ಲಿ ರಾಜಸ್ಥಾನದಿಂದ ಸ್ಪರ್ಧಿಸಿ ಸೋತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News