'ಭಯೋತ್ಪಾದಕರ ಪಟ್ಟಿಯಲ್ಲಿ' ಈಜಿಪ್ಟ್ ಫುಟ್ಬಾಲ್ ಆಟಗಾರ
ಕೈರೋ, ಜ.18: ಆಫ್ರಿಕದ ಯಶಸ್ವಿ ಫುಟ್ಬಾಲ್ ಆಟಗಾರರಲ್ಲಿ ಒಬ್ಬರಾಗಿರುವ ಈಜಿಪ್ಟ್‌ನ ಮುಹಮ್ಮದ್ ಅಬೌತ್ರಿಕಾ ಈಜಿಪ್ಟ್‌ನ ನಿಷೇಧಿತ ಸಂಘಟನೆ ಮುಸ್ಲಿಂ ಬ್ರದರ್‌ವುಡ್‌ಗೆ ಆರ್ಥಿಕ ನೆರವು ನೀಡಿ ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದಾರೆ. ಬ್ರದರ್ ಹುಡ್ ಸಂಘಟನೆಯನ್ನು ಈಜಿಪ್ಟ್ ನ ಸಿಸಿ ಸರಕಾರ ಭಯೋತ್ಪಾದಕ ಸಂಘಟನೆಯೆಂದು ಪರಿಗಣಿಸಿದೆ.
ಈಜಿಪ್ಟ್ ಸರಕಾರ ಅಬೌತ್ರಿಕಾ ಅವರನ್ನು ಭಯೋತ್ಪಾದಕರ ಪಟ್ಟಿಗೆ ಸೇರಿಸಿದೆ. ಇದರಿಂದಾಗಿ ಅವರಿಗೆ ಬೇರೆ ದೇಶಗಳಿಗೆ ತೆರಳಲು ಸಮಸ್ಯೆ ಎದುರಿಸಬೇಕಾಗುತ್ತದೆ ಅವರ ಪಾಸ್‌ಪೋರ್ಟ್ ಮತ್ತು ಆಸ್ತಿಯನ್ನು ಸರಕಾರ ಸ್ತಂಭನಗೊಳಿಸಲು ಅವಕಾಶ ಇದೆ.
2015ರಲ್ಲಿ ಜಾರಿಯಾಗಿರುವ ಭಯೋತ್ಪಾದಕ ನಿಗ್ರಹ ಕಾಯ್ದೆಯಂತೆ ಭಯೋತ್ಪಾದಕರ ಪಟ್ಟಿಯಲ್ಲಿ ಸೇರಿಕೊಂಡವರಿಗೆ ಪ್ರಯಾಣಕ್ಕೆ ನಿಷೇಧ, ಪಾಸ್‌ಪೋರ್ಟ್ ಮತ್ತು ಆಸ್ತಿಯ ಸ್ತಂಭನ ಮತ್ತಿತರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಬ್ರದರ್ ಹುಡ್ ಸಂಘಟನೆಯ ನಾಯಕರಾಗಿದ್ದ ಮುಹಮ್ಮದ್ ಮೊರ್ಸಿ ಅವರನ್ನು ಸೇನೆಯು ಅಧ್ಯಕ್ಷ ಹುದ್ದೆಯಿಂದ 2013ರಲ್ಲಿ ಕೆಳಗಿಳಿಸಿದ ಬೆನ್ನಲ್ಲೇ ಮುಸ್ಲಿಂ ಬ್ರದರ್‌ವುಡ್ ಸಂಘಟನೆಯನ್ನು ನಿಷೇಧಿಸಲಾಗಿತ್ತು.
ಮೊರ್ಸಿ ಸಂಘಟನೆ ಮುಸ್ಲಿಂ ಬ್ರದರ್‌ಹುಡ್‌ನಲ್ಲಿರುವ 1,500ಕ್ಕೂ ಅಧಿಕ ಸದಸ್ಯರಲ್ಲಿ ಅಬೌತ್ರಿಕಾ ಒಬ್ಬರು ಎಂದು ನ್ಯಾಯಾಲಯದ ಮೂಲಗಳು ತಿಳಿಸಿವೆ.
ಅಬೌತ್ರಿಕಾ ಅವರು ಈಜಿಪ್ಟ್ ತಂಡಕ್ಕೆ ಆಫ್ರಿಕನ್ ಕಪ್ ಟೂರ್ನಮೆಂಟ್‌ನಲ್ಲಿ ಸತತ ಗೆಲುವು ದಾಖಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಲ್ ಅಹ್ಲ್ ತಂಡ ಆಫ್ರಿಕನ್ ಚಾಂಪಿಯನ್ಸ್ ಲೀಗ್ ಗೆಲುವಿಗೆ ಕೊಡುಗೆ ನೀಡಿದ್ದರು.
ಮೇ 2015ರಲ್ಲಿ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತನ್ನ ಸಂಸ್ಥೆ ಅಥವಾ ಪಾಲುದಾರರು ಇಸ್ಲಾಮಿಕ್ ಚಳವಳಿಗೆ ನೆರವು ನೀಡಿರುವುದನ್ನು ಅಬೌತ್ರಿಕಾ ನಿರಾಕರಿಸಿದ್ದರು.
38ರ ಹರೆಯದ ಅಬೌತ್ರಿಕಾ 2013ರಲ್ಲಿ ಫುಟ್ಬಾಲ್‌ನಿಂದ ನಿವೃತ್ತರಾಗಿದ್ದರು. ಪ್ರಸ್ತುತ ಕತರ್‌ನಲ್ಲಿ ಸ್ಪೋಟ್ಸ್ ಚಾನಲ್‌ನಲ್ಲಿ ವೀಕ್ಷಕ ವಿವರಣೆಗಾರನಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಈಜಿಪ್ಟ್‌ನ ಮಾಜಿ ಆಟಗಾರ ಅಬೌತ್ರಿಕಾ ಈಜಿಪ್ಟ್ ತಂಡದ ಪರ 104 ಪಂದ್ಯಗಳನ್ನು ಆಡಿದ್ದಾರೆ. 40 ಗೋಲುಗಳನ್ನು ಜಮೆ ಮಾಡಿದ್ದಾರೆ. ವಿವಿಧ ಕ್ಲಬ್ ತಂಡಗಳಲ್ಲಿ 404 ಪಂದ್ಯಗಳಲ್ಲಿ 199 ಗೋಲುಗಳನ್ನು ದಾಖಲಿಸಿದ್ದಾರೆ.
ಅಬೌತ್ರಿಕಾ ಅವರನ್ನು ಭಯೋತ್ಪಾದಕ ಪಟ್ಟಿಗೆ ಸೇರಿಸಿರುವುದಕ್ಕೆ ಜನರಿಂದ ತೀವ್ರ ಅಸಮಾಧಾನ, ಆಕ್ರೋಶ ವ್ಯಕ್ತವಾಗಿದೆ.