ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಜಯಿಸಿದ್ದ ಕುಸ್ತಿಪಟು ಸ್ಟಾಡ್ನಿಕ್‌ಗೆ ಮಣ್ಣು ಮುಕ್ಕಿಸಿದ ಬಾಬಾ ರಾಮ್‌ದೇವ್!

Update: 2017-01-18 17:46 GMT

ಹೊಸದಿಲ್ಲಿ, ಜ.18: ಯೋಗ ಗುರು ಬಾಬಾ ರಾಮ್‌ದೇವ್ ಅವರು 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಭಾರತದ ಸುಶೀಲ್‌ಕುಮಾರ್‌ರನ್ನು ಮಣಿಸಿ ಬೆಳ್ಳಿ ಪದಕ ಜಯಿಸಿದ್ದ ಆ್ಯಂಡ್ರೆ ಸ್ಟಾಡ್ನಿಕ್‌ರನ್ನು 12-0 ಅಂತರದಿಂದ ಮಣಿಸಿ ಮಣ್ಣು ಮುಕ್ಕಿಸಿದ್ದಾರೆ.

ಬುಧವಾರ ಇಲ್ಲಿ ನಡೆದ ಸೌಹಾರ್ದ ಪಂದ್ಯದಲ್ಲಿ ರಾಮ್‌ದೇವ್ ಅವರು ಸ್ಟಾಡ್ನಿಕ್‌ರಿಗೆ ತನ್ನೊಂದಿಗೆ ಕುಸ್ತಿ ಮಾಡುವಂತೆ ಸವಾಲು ಒಡ್ಡಿದ್ದು, ಆ ಸವಾಲಿನಲ್ಲಿ ಜಯಶಾಲಿಯಾದರು.

 ಕುಸ್ತಿ ಆರಂಭಕ್ಕೆಮೊದಲು ‘ಸೂರ್ಯ ನಮಸ್ಕಾರ’ ಮಾಡಿದ ಬಾಬಾ ನಾಲ್ಕು ಅಂಕ ಗಳಿಸುವ ಮೂಲಕ ತನ್ನ ಅಂಕದ ಖಾತೆ ತೆರೆದಿದ್ದರು. ಅತ್ಯಂತ ವೇಗವಾಗಿ 7-0 ಮುನ್ನಡೆ ಸಾಧಿಸಿದ್ದರು. ಮುಂಬೈ ಮರಾಠಿ ಹಾಗೂ ಎನ್‌ಸಿಆರ್ ಪಂಜಾಬ್ ರಾಯಲ್ಸ್ ನಡುವಿನ ಪ್ರೊ ಕುಸ್ತಿ ಲೀಗ್‌ನ ಸೆಮಿಫೈನಲ್ ಪಂದ್ಯಕ್ಕಿಂತ ಮೊದಲು ಬುಧವಾರ ರಾತ್ರಿ ಈ ಪಂದ್ಯ ನಡೆಯಿತು.

‘‘ನಾನು ರಾಷ್ಟ್ರಮಟ್ಟದ ಕುಸ್ತಿಪಟು ಸುಶೀಲ್‌ಕುಮಾರ್‌ರೊಂದಿಗೆ ಕುಸ್ತಿಪಂದ್ಯ ಆಡಿದ್ದೇನೆ. ಆದರೆ, ಅಂತಾರಾಷ್ಟ್ರೀಯ ಖ್ಯಾತಿಯ ಕುಸ್ತಿಪಟುಗಳೊಂದಿಗೆ ಸೆಣಸಾಡುವುದು ಅತ್ಯಂತ ರೋಚಕವಾದ ಕ್ಷಣ. ಈ ಪಂದ್ಯದಲ್ಲಿ ಯೋಗದ ನಿಜವಾದ ಶಕ್ತಿಯ ಪ್ರದರ್ಶನವಾಗಿದೆ’’ ಎಂದು ರಾಮ್‌ದೇವ್ ಹೇಳಿದ್ದಾರೆ.

ಆ್ಯಂಡ್ರೆ ಅವರು 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಭಾರತದ ಸ್ಟಾರ್ ಕುಸ್ತಿಪಟು ಸುಶೀಲ್‌ಕುಮಾರ್‌ರನ್ನು ಮಣಿಸಿದ್ದರು. ವಿಶ್ವ ಮಟ್ಟದಲ್ಲಿ ಪದಕ ಜಯಿಸಿದ್ದ ಸ್ಟಾಡ್ನಿಕ್ ಅವರು ಬಾಬಾ ರಾಮ್‌ದೇವ್ ನೀಡಿರುವ ಸವಾಲಿಗೆ ಅಚ್ಚರಿ ವ್ಯಕ್ತಪಡಿಸಿದ್ದರು. ಬಾಬಾ ರಾಮ್‌ದೇವ್‌ರ ತಯಾರಿಯ ಬಗ್ಗೆ ತಿಳಿದುಕೊಂಡಿದ್ದ ಸ್ಟಾಡ್ನಿಕ್ ಅವರು ರಾಮ್‌ದೇವ್ ಉತ್ತಮ ಕುಸ್ತಿಪಟುವಾಗಿದ್ದಾರೆ ಎಂದು ಹೇಳಿದ್ದಾರೆ.

ರಾಮ್‌ದೇವ್ ಸೌಹಾರ್ದ ಕುಸ್ತಿಯಲ್ಲಿ ಸ್ಪರ್ಧಿಸುವ ಆಸಕ್ತಿ ತೋರಿರುವುದು ಇದೇ ಮೊದಲಲ್ಲ. ಕಳೆದ ವರ್ಷದ ಹರಿದ್ವಾರದಲ್ಲಿ ತಮ್ಮ ಆಶ್ರಮದ 20ನೆ ವಾರ್ಷಿಕೋತ್ಸವದಲ್ಲಿ ಭಾರತದ ಸುಶೀಲ್‌ಕುಮಾರ್ ಅವರೊಂದಿಗೆ ರಾಮ್‌ದೇವ್ ಕುಸ್ತಿ ಪಂದ್ಯ ಆಡಿ ಸುದ್ದಿಯಾಗಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News