ಕೊಹ್ಲಿಯಿಂದ ಬ್ಯಾಟಿಂಗ್ ಟಿಪ್ಸ್ ಪಡೆಯಲಿದ್ದಾರೆ ರೂಟ್

Update: 2017-01-18 17:52 GMT

ಹೊಸದಿಲ್ಲಿ, ಜ.18: ಪುಣೆ ಏಕದಿನದಲ್ಲಿ ವಿರಾಟ್ ಕೊಹ್ಲಿ ನೀಡಿರುವ ವೀರೋಚಿತ ಪ್ರದರ್ಶನವನ್ನು ಶ್ಲಾಘಿಸಿದ ಇಂಗ್ಲೆಂಡ್‌ನ ಸ್ಟಾರ್ ಬ್ಯಾಟ್ಸ್‌ಮನ್ ಜೋ ರೂಟ್ ಅವರು ಕೊಹ್ಲಿಯಿಂದ ಬ್ಯಾಟಿಂಗ್ ಸಲಹೆ ಪಡೆಯುವ ಇಂಗಿತ ವ್ಯಕ್ತಪಡಿಸಿದ್ದಾರೆ.

‘‘ಕ್ರಿಕೆಟ್‌ನಲ್ಲಿ ರನ್ ಬೆನ್ನಟ್ಟುವಾಗ ಅವರು(ಕೊಹ್ಲಿ) ಓರ್ವ ಶ್ರೇಷ್ಠ ಆಟಗಾರನಾಗಿದ್ದಾರೆ. ರನ್ ಚೇಸಿಂಗ್ ವೇಳೆ 15ಕ್ಕೂ ಅಧಿಕ ಶತಕ ಗಳಿಸಿರುವುದು ಅವರ ಸಾಧನೆಯ ದ್ಯೋತಕವಾಗಿದೆ. ಕೊಹ್ಲಿಯೊಂದಿಗೆ ಕುಳಿತು ಚರ್ಚಿಸಲು ಬಯಕೆಯಿದೆ. ಆದರೆ, ನನಗೆ ಅಂತಹ ಅವಕಾಶ ಈಗ ಲಭಿಸಿಲ್ಲ’’ ಎಂದು ‘ದಿ ಗಾರ್ಡಿಯನ್’ಗೆ ರೂಟ್ ತಿಳಿಸಿದ್ದಾರೆ.

ಹೊಸ ವರ್ಷವನ್ನು ಭರ್ಜರಿಯಾಗಿ ಆರಂಭಿಸಿರುವ ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ವಿಶ್ವ ಶ್ರೇಷ್ಠ ಬ್ಯಾಟ್ಸ್‌ಮನ್ ವಿಭಾಗದಲ್ಲಿ ಮುಂಚೂಣಿಯಲ್ಲಿದ್ದಾರೆ. ಕಳೆದ ಕೆಲವು ವರ್ಷಗಳ ಹಿಂದೆ ಕ್ರಿಕೆಟ್ ಪಂಡಿತರು ನ್ಯೂಝಿಲೆಂಡ್‌ನ ಕೇನ್ ವಿಲಿಯಮ್ಸನ್, ಆಸ್ಟ್ರೇಲಿಯದ ಸ್ಟೀವನ್ ಸ್ಮಿತ್, ಇಂಗ್ಲೆಂಡ್‌ನ ಜೋ ರೂಟ್ ಹಾಗೂ ಕೊಹ್ಲಿ ಭವಿಷ್ಯದ ಸ್ಟಾರ್ ಬ್ಯಾಟ್ಸ್‌ಮನ್‌ಗಳು ಎಂದು ಗುರುತಿಸಿದ್ದರು.

 ಸಚಿನ್ ತೆಂಡುಲ್ಕರ್, ರಿಕಿ ಪಾಂಟಿಂಗ್, ರಾಹುಲ್ ದ್ರಾವಿಡ್, ಜಾಕ್ ಕಾಲಿಸ್‌ರಂತಹ ದಿಗ್ಗಜ ಆಟಗಾರರು ವಿಶ್ವ ಕ್ರಿಕೆಟ್‌ನಿಂದ ನಿವೃತ್ತಿಯಾದ ಬಳಿಕ ನಾಲ್ವರು ಯುವ ಬ್ಯಾಟ್ಸ್‌ಮನ್‌ಗಳು ಕಳೆದ 2 ವರ್ಷಗಳಲ್ಲಿ ಮಹತ್ವದ ಮೈಲುಗಲ್ಲು ತಲುಪಿದ್ದಾರೆ. 2016ರ ಋತುವಿನಲ್ಲಿ ಕೊಹ್ಲಿ ಹಾಗೂ ಇಂಗ್ಲೆಂಡ್‌ನ ರೂಟ್ ನಡುವೆ ಬ್ಯಾಟಿಂಗ್ ಮೇಲಾಟ ನಡೆದಿತ್ತು.

ಭಾರತದ ನಾಯಕ ಕೊಹ್ಲಿ ಇದೀಗ ಕ್ರಿಕೆಟ್‌ನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದ್ದು, ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್ ಆಗಿ ಪರಿಗಣಿಸಲ್ಪಟ್ಟಿದ್ದಾರೆ. ಭಾರತ-ಇಂಗ್ಲೆಂಡ್ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಕೊಹ್ಲಿಯ ಬ್ಯಾಟಿಂಗ್ ಜೀನಿಯಸ್ ಸಾಬೀತಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News