ಆಸ್ಟ್ರೇಲಿಯನ್ ಓಪನ್: ಹಾಲಿ ಚಾಂಪಿಯನ್ ಜೊಕೊವಿಕ್‌ಗೆ ಶಾಕ್
ಮೆಲ್ಬೋರ್ನ್,ಜ.19: : ಹಾಲಿ ಚಾಂಪಿಯನ್ ನೊವಾಕ್ ಜೊಕೊವಿಕ್ ಆಸ್ಟ್ರೇಲಿಯನ್ ಓಪನ್‌ನ ಎರಡನೆ ಸುತ್ತಿನಲ್ಲಿ ಸೋತು ನಿರ್ಗಮಿಸಿದ್ದಾರೆ.
ಆರು ಬಾರಿ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಜೊಕೊವಿಕ್ ಗುರುವಾರ ಇಲ್ಲಿ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಉಜ್ಬೇಕಿಸ್ತಾನದ ಡೆನಿಸ್ ಇಸ್ಟೊಮಿನ್ ವಿರುದ್ಧ 7-6(10/8), 5-7, 2-6, 7-6(7/5) ಸೆಟ್‌ಗಳ ಅಂತರದಿಂದ ಆಘಾತಕಾರಿ ಸೋಲನುಭವಿಸಿದರು.
ವಿಶ್ವದ ನಂ.2ನೆ ಆಟಗಾರ ಜೊಕೊವಿಕ್ ನಾಲ್ಕು ಗಂಟೆ, 48 ನಿಮಿಷಗಳ ಹೋರಾಟದಲ್ಲಿ 117ನೆ ರ್ಯಾಂಕಿನ ಡೆನಿಸ್ ವಿರುದ್ಧ ಶರಣಾಗಿದ್ದಾರೆ. ಜೊಕೊವಿಕ್ 2008ರ ವಿಂಬಲ್ಡನ್ ಟೂರ್ನಿಯ ಬಳಿಕ ಎರಡನೆ ಬಾರಿ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಎರಡನೆ ಸುತ್ತಿನಲ್ಲಿ ಸೋತು ನಿರ್ಗಮಿಸಿದ್ದಾರೆ. 2008ರಲ್ಲಿ ಮರಾಟ್ ಸಫಿನ್ ವಿರುದ್ಧ ಜೊಕೊವಿಕ್ ಸೋತಿದ್ದರು.
ಜೊಕೊವಿಕ್ 7 ವರ್ಷಗಳಲ್ಲಿ ಎರಡನೆ ಬಾರಿ ಟಾಪ್-100ಗಿಂತ ಹೊರಗಿರುವ ಆಟಗಾರನ ವಿರುದ್ಧ ಸೋತಿದ್ದಾರೆ. ಕಳೆದ ವರ್ಷದ ರಿಯೋ ಒಲಿಂಪಿಕ್ಸ್‌ನಲ್ಲಿ 145ನೆ ರ್ಯಾಂಕಿನ ಜುಯಾನ್ ಮಾರ್ಟಿನ್ ಡೆಲ್ ಪೊಟ್ರೊ ವಿರುದ್ಧ ಸೋತಿದ್ದರು.
ಸರ್ಬಿಯದ ಜೊಕೊವಿಕ್ ಈ ಬಾರಿ ಏಳನೆ ಬಾರಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಜಯಿಸಿ ದಾಖಲೆ ನಿರ್ಮಿಸುವ ವಿಶ್ವಾಸದಲ್ಲಿದ್ದರು. ಈ ಮೂಲಕ 1960ರಲ್ಲಿ ಆರು ಪ್ರಶಸ್ತಿಗಳ ಜಯಿಸಿದ್ದ ಸಾಧನೆ ಮಾಡಿದ್ದ ಆಸ್ಟ್ರೇಲಿಯದ ರಾಯ್ ಎಮರ್ಸನ್ ದಾಖಲೆ ಮುರಿಯುವ ವಿಶ್ವಾಸದಲ್ಲಿದ್ದರು. ಆದರೆ, ಈ ಕನಸು ಈಡೇರಲಿಲ್ಲ.
12 ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್‌ಗೆ ಶಾಕ್ ನೀಡಿರುವ ಇಸ್ಟೊಮಿನ್ ಮೂರನೆ ಸುತ್ತಿನಲ್ಲಿ ಸ್ಪೇನ್‌ನ ಪಾಬ್ಲೊ ಕ್ಯಾರ್ರೆನೊರನ್ನು ಎದುರಿಸಲಿದ್ದಾರೆ.