ಫಿಫಾ ಹಣಕಾಸು ಸಮಿತಿಗೆ ಪ್ರಫುಲ್ ಪಟೇಲ್ ನೇಮಕ
ಹೊಸದಿಲ್ಲಿ, ಜ.19: ಅಖಿಲ ಭಾರತ ಫುಟ್ಬಾಲ್ ಅಸೋಸಿಯೇಶನ್‌ನ(ಎಐಎಫ್‌ಎಫ್) ಅಧ್ಯಕ್ಷ ಪ್ರಫುಲ್ ಪಟೇಲ್ ಫಿಫಾದ ಅತ್ಯಂತ ಪ್ರಮುಖ ಫೈನಾನ್ಸ್ ಕಮಿಟಿಯ ಸದಸ್ಯರಾಗಿ ಗುರುವಾರ ಆಯ್ಕೆಯಾಗಿದ್ದಾರೆ.
ಪಟೇಲ್ ನಾಲ್ಕು ವರ್ಷಗಳ ಅವಧಿಗೆ ಫಿಫಾದ ಹಣಕಾಸು ಸಮಿತಿಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಪಟೇಲ್ ಕಳೆದ ವರ್ಷ ಏಷ್ಯನ್ ಫುಟ್ಬಾಲ್ ಕಾನ್ಫಡರೇಶನ್(ಎಎಫ್‌ಸಿ)ನ ಹಿರಿಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಪಟೇಲ್ ಅಧಿಕಾರದ ಅವಧಿಯಲ್ಲಿ ಭಾರತ ಮೊದಲ ಬಾರಿ ಫಿಫಾ ಅಂಡರ್-17 ವಿಶ್ವಕಪ್ ಆತಿಥ್ಯದ ಹಕ್ಕನ್ನು ಪಡೆದಿತ್ತು. ಜೂನಿಯರ್ ವಿಶ್ವಕಪ್ ಈ ವರ್ಷ ಭಾರತದಲ್ಲಿ ನಡೆಯಲಿದೆ. ಭಾರತ ಕಳೆದ ವರ್ಷ ಸೆಪ್ಟಂಬರ್‌ನಲ್ಲಿ ಎಎಫ್‌ಸಿ-ಅಂಡರ್ 16 ಚಾಂಪಿಯನ್‌ಶಿಪ್‌ಗೆ ಆತಿಥ್ಯವನ್ನು ವಹಿಸಿಕೊಂಡಿತ್ತು.
ಫಿಫಾ ಹಣಕಾಸು ಸಮಿತಿಯು ಹಣಕಾಸು ಆಡಳಿತವನ್ನು ಗಮನಿಸಲಿದೆ. ಹಣಕಾಸು ವಿಷಯಕ್ಕೆ ಸಂಬಂಧಿಸಿ ಫಿಫಾ ಕಾರ್ಯಕಾರಿಣಿ ಸಮಿತಿಗೆ ಸಲಹೆ ನೀಡಲಿದೆ. ಫಿಫಾ ಪ್ರಧಾನ ಕಾರ್ಯದರ್ಶಿ ಸಿದ್ದಪಡಿಸುವ ಫಿಫಾ ಬಜೆಟ್ ಹಾಗೂ ಆರ್ಥಿಕ ಲೆಕ್ಕ-ಪತ್ರವನ್ನು ಪರಾಮರ್ಶಿಸಲಿದೆ. ಆ ಬಳಿಕ ಅಂಗೀಕಾರಕ್ಕೆ ಫಿಫಾ ಕಾರ್ಯಕಾರಿ ಸಮಿತಿಗೆ ವರದಿ ಸಲ್ಲಿಸಲಿದೆ.