×
Ad

ಟೆನಿಸ್ ಆಟಗಾರ್ತಿ ವೀನಸ್‌ಗೆ ‘ಗೊರಿಲ್ಲಾ’ ಎಂದ ವೀಕ್ಷಕವಿವರಣೆಗಾರನಿಗೆ ಗೇಟ್‌ಪಾಸ್

Update: 2017-01-20 20:02 IST

ಮೆಲ್ಬೋರ್ನ್, ಜ.20: ಹಿರಿಯ ಟೆನಿಸ್ ಆಟಗಾರ್ತಿ ವೀನಸ್ ವಿಲಿಯಮ್ಸ್‌ರನ್ನು ‘ಗೊರಿಲ್ಲಾ’ಗೆ ಹೋಲಿಸಿ ಅಚಾತುರ್ಯ ತೋರಿದ ಟೆನಿಸ್ ವೀಕ್ಷಕವಿವರಣೆಗಾರನನ್ನು ಅಮೆರಿಕದ ಇಎಸ್‌ಪಿಎನ್ ಸಮಿತಿಯಿಂದ ಹೊರ ಹಾಕಲಾಗಿದೆ.

ಮೆಲ್ಬೋರ್ನ್‌ನಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್‌ನಲ್ಲಿ ವೀನಸ್ ಆಡುತ್ತಿದ್ದಾಗ ವೀಕ್ಷಕವಿವರಣೆಗಾರರಾದ ಡೌಗ್ ಆಡ್ಲೆರ್ ಗೋರಿಲ್ಲಾ ಶಬ್ದವನ್ನು ಬಳಸಿ ನಾಲಿಗೆ ಕಚ್ಚಿಕೊಂಡರು.

ಬುಧವಾರ ಇಲ್ಲಿ ನಡೆದಿದ್ದ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಏಳು ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ವೀನಸ್ ಸ್ಟೆಫಾನಿ ವೊಗೆಲೆ ವಿರುದ್ಧ ಪಂದ್ಯದ ನೇರ ಪ್ರಸಾರದ ವೇಳೆ ಡೌಗ್ ಆಡ್ಲೆರ್ ಶಬ್ದದ ಆಯ್ಕೆಯ ವೇಳೆ ತುಂಬಾ ಎಚ್ಚರಿಕೆಯಿಂದಿರಬೇಕಾಗಿತ್ತು. ಅವರು ತಮ್ಮ ತಪ್ಪಿಗೆ ಕ್ಷಮೆ ಕೋರಿದ್ದಾರೆ. ಆದಾಗ್ಯೂ ಅವರನ್ನು ಟೂರ್ನಿಯ ಉಳಿದ ಪಂದ್ಯಗಳಲ್ಲಿ ಕಾರ್ಯನಿರ್ವಹಿಸದಂತೆ ನಿರ್ಬಂಧ ಹೇರಿದ್ದೇವೆ ಎಂದು ಇಎಸ್‌ಪಿಎನ್ ಪ್ರಕಟನೆಯೊಂದರಲ್ಲಿ ತಿಳಿಸಿದೆ.

13ನೆ ಶ್ರೇಯಾಂಕಿತೆ ಆಫ್ರಿಕದ ಅಮೆರಿಕನ್ ವಿಲಿಯಮ್ಸ್ ಅವರು ಆಡ್ಲೆರ್ ನೀಡಿರುವ ವಿವಾದಾತ್ಮಕ ಹೇಳಿಕೆ ಬಗ್ಗೆ ತಲೆಕೆಡಿಸಿಕೊಳ್ಳದೇ ತನ್ನ ಪಂದ್ಯದತ್ತ ಗಮನ ಹರಿಸಿದ್ದಾರೆ. ಶುಕ್ರವಾರ ನಡೆದ 3ನೆ ಸುತ್ತಿನ ಪಂದ್ಯದಲ್ಲಿ ಡುಯಾಂಗ್ ಯಿಂಗ್ ವಿರುದ್ಧ 6-1, 6-0 ಅಂತರದಿಂದ ಗೆಲುವು ಸಾಧಿಸಿ ನಾಲ್ಕನೆ ಸುತ್ತಿಗೆ ತಲುಪಿದ್ದಾರೆ.

ಮಹಿಳೆಯರ ಸಿಂಗಲ್ಸ್‌ನ ಎರಡನೆ ಸುತ್ತಿನ ಪಂದ್ಯದಲ್ಲಿ 59ರ ಪ್ರಾಯದ ಆಡ್ಲೆರ್ ವೀಕ್ಷಕವಿವರಣೆಯ ವೇಳೆ ‘‘ಸ್ಟೆಫಾನಿ ಮೊದಲ ಸರ್ವ್‌ನ್ನು ತಪ್ಪಿಸಿಕೊಂಡಿದ್ದಾರೆ. ವೀನಸ್ ಅವರ ಮೇಲೆ ಪ್ರಾಬಲ್ಯ ಸಾಧಿಸುತ್ತಿದ್ದಾರೆ. ಟೆನಿಸ್ ಕೋರ್ಟ್‌ನಲ್ಲಿ ವೀನಸ್ ಚಲನೆಯ ಮೇಲೆ ಗೊರಿಲ್ಲಾ ಪ್ರಭಾವವಿದೆ’’ ಎಂದು ಹೇಳಿದ್ದರು.

ವೀನಸ್‌ರನ್ನು ಗೊರಿಲ್ಲಾಗೆ ಹೋಲಿಕೆ ಮಾಡಿರುವ ಆಡ್ಲೆರ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶವ್ಯಕ್ತವಾಯಿತು. ತನ್ನ ಹೇಳಿಕೆಗೆ ಕ್ಷಮೆ ಕೋರಿದ ಆಡ್ಲೆರ್, ತಾನು ಸ್ವಾತಂತ್ರ ಹೋರಾಟಗಾರರು ಅಥವಾ ಬಂಡಾಯ ಬಣಗಳನ್ನು ವರ್ಣಿಸುವ ವೇಳೆ ಗೊರಿಲ್ಲಾ ಪದವನ್ನು ಬಳಸಿದ್ದೇನೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News