ಇರಾನಿ ಕಪ್: ಗುಜರಾತ್ ಗೌರವಾರ್ಹ ಮೊತ್ತ

Update: 2017-01-20 17:50 GMT

ಮುಂಬೈ, ಜ.21: ವೇಗದ ಬೌಲರ್‌ಗಳಾದ ಸಿದ್ದಾರ್ಥ್ ಕೌಲ್ ಹಾಗೂ ಪಂಕಜ್ ಸಿಂಗ್ ಅಮೋಘ ಬೌಲಿಂಗ್‌ನ ಹೊರತಾಗಿಯೂ ಚೊಚ್ಚಲ ಅಜೇಯ ಶತಕ ಬಾರಿಸಿದ ಚಿರಾಗ್ ಗಾಂಧಿ ನೆರವಿನಿಂದ ರಣಜಿ ಚಾಂಪಿಯನ್ ಗುಜರಾತ್ ತಂಡ ಶೇಷ ಭಾರತದ ವಿರುದ್ಧದ ಇರಾನಿ ಕಪ್‌ನ ಮೊದಲ ದಿನದಾಟದಲ್ಲಿ ಗೌರವಾರ್ಹ ಮೊತ್ತ ದಾಖಲಿಸಿದೆ.

ಇಲ್ಲಿನ ಬ್ರೆಬೋರ್ನ್ ಸ್ಟೇಡಿಯಂನಲ್ಲಿ ಶುಕ್ರವಾರ ಆರಂಭವಾದ ಇರಾನಿ ಕಪ್‌ನಲ್ಲಿ ಟಾಸ್ ಜಯಿಸಿದ ಗುಜರಾತ್ ತಂಡದ ನಾಯಕ ಪಾರ್ಥಿವ್ ಪಟೇಲ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು.

ಹೆಚ್ಚು ಬೌನ್ಸ್ ಆಗುತ್ತಿದ್ದ ಪಿಚ್‌ನಲ್ಲಿ ಸಿದ್ದಾರ್ಥ್ ಕೌಲ್(4-73) ಹಾಗೂ ಪಂಕಜ್ ಸಿಂಗ್(3-77) ದಾಳಿಗೆ ತತ್ತರಿಸಿದ ಗುಜರಾತ್ ತಂಡ 33ನೆ ಓವರ್‌ನಲ್ಲಿ 82 ರನ್‌ಗೆ 4 ವಿಕೆಟ್‌ಗಳನ್ನು ಕಳೆದುಕೊಂಡಿತು.

ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಕೈಕೊಟ್ಟಾಗ ತಂಡಕ್ಕೆ ಆಸರೆಯಾಗಿ ನಿಂತ ಚಿರಾಗ್ ಗಾಂಧಿ(ಅಜೇಯ 136 ರನ್, 159 ಎಸೆತ, 18 ಬೌಂಡರಿ, 1 ಸಿಕ್ಸರ್) ಮನ್‌ಪ್ರೀತ್ ಜುನೇಜ(47) ಅವರೊಂದಿಗೆ 5ನೆ ವಿಕೆಟ್‌ಗೆ 109 ರನ್ ಜೊತೆಯಾಟ ನಡೆಸಿ ತಂಡಕ್ಕೆ ಆಧಾರವಾದರು.

  9ನೆ ವಿಕೆಟ್‌ಗೆ ಹಾರ್ದಿಕ್ ಪಟೇಲ್(ಅಜೇಯ 9)ಅವರೊಂದಿಗೆ ಮುರಿಯದ ಜೊತೆಯಾಟದಲ್ಲಿ 39 ರನ್ ಸೇರಿಸಿದರು. ಗುಜರಾತ್ ದಿನದಾಟದಂತ್ಯಕ್ಕೆ 8 ವಿಕೆಟ್‌ಗಳ ನಷ್ಟಕ್ಕೆ 300 ರನ್ ಗಳಿಸಲು ನೆರವಾದರು.

ಈ ವರ್ಷದ ರಣಜಿಯಲ್ಲಿ ಸ್ಕೋರ್ ಗಳಿಕೆಯಲ್ಲಿ ಅಗ್ರ-3 ಸ್ಥಾನದಲ್ಲಿರುವ ಸುಮಿತ್ ಗೊಹಿಲ್, ಪ್ರಿಯಾಂಕ್ ಪಾಂಚಾಲ್ ಹಾಗೂ ದ್ರುವ್ ರಾವಲ್(39)ರನ್ನು ಪಂಕಜ್ ಸಿಂಗ್ ಹಾಗೂ ಕೌಲ್ ಬೇಗನೆ ಪೆವಿಲಿಯನ್‌ಗೆ ಕಳಹಿಸಿದರು. ಈ ನಡುವೆ ಪಾಂಚಾಲ್-ರಾವಲ್ ಜೋಡಿ 2ನೆ ವಿಕೆಟ್‌ಗೆ 55 ರನ್ ಜೊತೆಯಾಟ ನಡೆಸಿತು.

ಸಂಕ್ಷಿಪ್ತ ಸ್ಕೋರ್

ಗುಜರಾತ್ ಮೊದಲ ಇನಿಂಗ್ಸ್: 300/8

(ಚಿರಾಗ್ ಗಾಂಧಿ ಅಜೇಯ 136, ಜನೇಜ 47, ರಾವಲ್ 39, ಪಾಂಚಾಲ್ 30, ಕೌಲ್ 4-73, ಪಂಕಜ್ ಸಿಂಗ್ 3-77)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News