ಸೌರವ್ ಗಂಗುಲಿ ಬಿಸಿಸಿಐ ನೂತನ ಅಧ್ಯಕ್ಷ?

Update: 2017-01-21 11:46 GMT

 ಹೊಸದಿಲ್ಲಿ, ಜ.21: ಸುಪ್ರೀಂಕೋರ್ಟ್ ಜ.2.2017ರಂದು ಮಹತ್ವದ ತೀರ್ಪು ನೀಡಿದ ಬಳಿಕ ಹೆಚ್ಚಿನ ಕ್ರಿಕೆಟ್ ಅಭಿಮಾನಿಗಳು ಭಾರತದ ಮಾಜಿ ನಾಯಕ ಸೌರವ್ ಗಂಗುಲಿ ಬಿಸಿಸಿಐ ಅಧ್ಯಕ್ಷರಾಗಲಿದ್ದಾರೆ ಎಂಬ ಭಾರೀ ನಿರೀಕ್ಷೆಯಲ್ಲಿದ್ದಾರೆ.

ಜನಪ್ರಿಯ ಮಾಹಿತಿ ಕೋಶ ವಿಕಿಪೀಡಿಯ ಬಿಸಿಸಿಐ ಬಗೆಗಿನ ಮಾಹಿತಿ ಪುಟದಲ್ಲಿ ಸೌರವ್ ಗಂಗುಲಿಯನ್ನು ಬಿಸಿಸಿಐ ಅಧ್ಯಕ್ಷರು ಎಂದು ನಮೂದಿಸಿ ಎಡವಟ್ಟು ಮಾಡಿದೆ.

ಬಿಸಿಸಿಐ ಅಧ್ಯಕ್ಷರಾಗಿದ್ದ ಅನುರಾಗ್ ಠಾಕೂರ್‌ರನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದ್ದು, ಠಾಕೂರ್‌ರಿಂದ ತೆರವಾಗಿರುವ ಅಧ್ಯಕ್ಷ ಸ್ಥಾನ ತುಂಬಲು ಇನ್ನಷ್ಟೇ ಚುನಾವಣೆ ನಡೆಯಬೇಕಾಗಿದೆ. ಅದಕ್ಕೂ ಮೊದಲೇ ವಿಕಿಪೀಡಿಯಾ ಸೌರವ್ ಗಂಗುಲಿಯನ್ನು ಬಿಸಿಸಿಐ ಅಧ್ಯಕ್ಷರು ಎಂದು ಘೋಷಿಸಿಬಿಟ್ಟಿದೆ. ವಿಕಿಪೀಡಿಯಾ ಜ.19ರಂದು ಬಿಸಿಸಿಐ ಅಧ್ಯಕ್ಷರ ಹೆಸರನ್ನು ಬದಲಿಸಿದೆ.

ವಿಕಿಪೀಡಿಯಾದಲ್ಲಿ ಬಿಸಿಸಿಐ ಅಧ್ಯಕ್ಷರ ಹೆಸರಲ್ಲಿ ಮಾತ್ರ ತಪ್ಪಾಗಿದ್ದಲ್ಲ, ಸುಪ್ರೀಂಕೋರ್ಟ್‌ನಿಂದ ವಜಾಗೊಳಿಸಲ್ಪಟ್ಟ ಬಿಸಿಸಿಐ ಕಾರ್ಯದರ್ಶಿ ಅಜಯ್ ಶಿರ್ಕೆ ಅವರನ್ನು ಅದೇ ಹುದ್ದೆಯಲ್ಲಿ ಮುಂದುವರಿಸಲಾಗಿದೆ. ಬಿಸಿಸಿಐ ಮುಖ್ಯ ಕಚೇರಿಯನ್ನು ಮುಂಬೈ ಬದಲಿಗೆ ಕೋಲ್ಕತಾ ಎಂದು ಬರೆಯಲಾಗಿದೆ.

ಸೌರವ್ ಗಂಗುಲಿ ಬಿಸಿಸಿಐ ನೂತನ ಅಧ್ಯಕ್ಷ ಸ್ಥಾನ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಪ್ರಸ್ತುತ ಬಂಗಾಳ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಗಂಗುಲಿ ಕ್ರಿಕೆಟ್ ಆಡಳಿತಾಧಿಕಾರಿಯಾಗಿ ಅನುಭವ ಪಡೆದಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News