ಮೂರನೆ ಏಕದಿನ: ಇಂಗ್ಲೆಂಡ್‌ಗೆ ರೋಚಕ ಜಯ, ಭಾರತಕ್ಕೆಸರಣಿ

Update: 2017-01-22 18:13 GMT

   ಕೋಲ್ಕತಾ, ಜ.22: ಕೇದಾರ್ ಜಾಧವ್(90, 75 ಎಸೆತ, 12 ಬೌಂಡರಿ, 1 ಸಿಕ್ಸರ್) ಹಾಗೂ ಹಾರ್ದಿಕ್ ಪಾಂಡ್ಯ (56)ಹೋರಾಟಕಾರಿ ಬ್ಯಾಟಿಂಗ್‌ನ ಹೊರತಾಗಿಯೂ ಆತಿಥೇಯ ಭಾರತ ತಂಡ ಇಂಗ್ಲೆಂಡ್ ವಿರುದ್ಧದ ಮೂರನೆ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ 5 ರನ್‌ಗಳ ಅಂತರದಿಂದ ಸೋತಿದೆ.

ಈ ಗೆಲುವಿನೊಂದಿಗೆ ಆಂಗ್ಲರು 3 ಪಂದ್ಯಗಳ ಏಕದಿನ ಸರಣಿಯಲ್ಲಿ ಕ್ಲೀನ್‌ಸ್ವೀಪ್ ಮುಖಭಂಗದಿಂದ ಪಾರಾದರು. ಪ್ರಸ್ತುತ ಭಾರತ ಪ್ರವಾಸದಲ್ಲಿ ಮೊದಲ ಗೆಲುವು ಸಾಧಿಸಿರುವ ಆಂಗ್ಲರು ಟ್ವೆಂಟಿ-20 ಸರಣಿಗೆ ಮೊದಲು ವಿಶ್ವಾಸ ಹೆಚ್ಚಿಸಿಕೊಂಡರು.

ಗೆಲ್ಲಲು 322 ರನ್ ಗುರಿ ಪಡೆದಿದ್ದ ಭಾರತ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 316 ರನ್ ಗಳಿಸಿ ವೀರೋಚಿತ ಪ್ರದರ್ಶನ ನೀಡಿತು. ಈಗಾಗಲೇ 2 ಪಂದ್ಯ ಗಳನ್ನು ಜಯಿಸಿರುವ ಭಾರತ 2-1 ಅಂತರದಿಂದ ಸರಣಿ ಗೆದ್ದುಕೊಂಡಿದೆ. ಕೇದಾರ್ ಜಾಧವ್ ಸರಣಿಶ್ರೇಷ್ಠ, ಆಲ್‌ರೌಂಡ್ ಪ್ರದರ್ಶನ ನೀಡಿದ ಬೆನ್‌ ಸ್ಟೋಕ್ಸ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

   ಅತ್ಯಂತ ಕುತೂಹಲಭರಿತ ಪಂದ್ಯದಲ್ಲಿ ಭಾರತಕ್ಕೆ ಕೊನೆಯ ಓವರ್‌ನಲ್ಲಿ 16 ರನ್ ಅಗತ್ಯವಿತ್ತು. ವೋಕ್ಸ್ ಎಸೆದಿದ್ದ ಅಂತಿಮ ಓವರ್‌ನ ಮೊದಲೆರಡು ಎಸೆತಗಳಲ್ಲಿ ಸಿಕ್ಸರ್, ಬೌಂಡರಿ ಬಾರಿಸಿದ ಜಾಧವ್ ಭಾರತವನ್ನು ಗೆಲುವಿನತ್ತ ಮುನ್ನಡೆಸಿದ್ದರು. ಆದರೆ, ಭಾರತಕ್ಕೆ 2 ಎಸೆತಗಳಲ್ಲಿ 6 ರನ್ ಅಗತ್ಯವಿದ್ದಾಗ ವೋಕ್ಸ್ ಅವರು ಜಾಧವ್ ವಿಕೆಟ್ ಉಡಾಯಿಸಿ ರೋಚಕ ಗೆಲುವು ತಂದುಕೊಟ್ಟರು.

 ಕೊಹ್ಲಿ ಪಡೆ 6ನೆ ಓವರ್‌ಗೆ 37 ರನ್‌ಗೆ 2 ವಿಕೆಟ್ ಕಳೆದುಕೊಂಡು ಕಳಪೆ ಆರಂಭ ಪಡೆದಿತ್ತು. ಇನಿಂಗ್ಸ್ ಆರಂಭಿಸಿದ ಅಜಿಂಕ್ಯ ರಹಾನೆ(1) ಹಾಗೂ ರಾಹುಲ್(11) ಅಲ್ಪ ಮೊತ್ತಕ್ಕೆ ಔಟಾದರು.

3ನೆ ವಿಕೆಟ್‌ಗೆ 65 ರನ್ ಜೊತೆಯಾಟ ನಡೆಸಿದ ನಾಯಕ ವಿರಾಟ್ ಕೊಹ್ಲಿ(55 ರನ್, 63 ಎಸೆತ, 8 ಬೌಂಡರಿ) ಹಾಗೂ ಯುವರಾಜ್ ಸಿಂಗ್(45 ರನ್, 57 ಎ, 5 ಬೌಂ.,1 ಸಿ.) ತಂಡವನ್ನು ಆಧರಿಸಿದರು. ಕೊಹ್ಲಿ ನಿರ್ಗಮನದ ಬಳಿಕ ಧೋನಿ ಹಾಗೂ ಯುವರಾಜ್ 4ನೆ ವಿಕೆಟ್‌ಗೆ 31 ರನ್ ಸೇರಿಸಿದರು. ಆದರೆ ಯುವಿ 45 ರನ್‌ಗೆ ಔಟಾದರು. ಆಗ ಕ್ರೀಸ್‌ಗಿಳಿದ ಕೇದಾರ್ ಜಾಧವ್ ಮಾಜಿ ನಾಯಕ ಧೋನಿಯೊಂದಿಗೆ 5ನೆ ವಿಕೆಟ್‌ಗೆ 40 ರನ್ ಸೇರಿಸಿ ತಂಡವನ್ನು ಹಳಿಗೆ ತಂದರು.

ಧೋನಿ(25) ಬಾಲ್‌ಗೆ ವಿಕೆಟ್ ಒಪ್ಪಿಸಿದಾಗ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ(56)ಜೊತೆ ಕೈಜೋಡಿಸಿದ ಜಾಧವ್ 6ನೆ ವಿಕೆಟ್‌ಗೆ 104 ರನ್ ಜೊತೆಯಾಟ ನಡೆಸಿ ಪಂದ್ಯ ಭಾರತದ ಪರ ವಾಲುವಂತೆ ಮಾಡಿದರು.

ಆದರೆ, ಈ ಜೋಡಿಯನ್ನು ಸ್ಟೋಕ್ಸ್ ಬೇರ್ಪಡಿಸಿದರು. ಪಾಂಡ್ಯ ನಿರ್ಗಮನದ ಬೆನ್ನಿಗೆ ಜಡೇಜ ಹಾಗೂ ಅಶ್ವಿನ್ ಪೆವಿಲಿಯನ್‌ಗೆ ಪರೇಡ್ ನಡೆಸಿದರು. ಮತ್ತೊಂದೆಡೆ ಜಾಧವ್ ಜೊತೆಗಾರರಿಲ್ಲದೆ ಒಬ್ಬಂಟಿಯಾದರು. ಇಂಗ್ಲೆಂಡ್‌ನ ಪರ ಸ್ಟೋಕ್ಸ್(3-63) ಯಶಸ್ವಿ ಬೌಲರ್ ಎನಿಸಿಕೊಂಡರು.

ಇಂಗ್ಲೆಂಡ್ 321/8: ಇದಕ್ಕೆ ಮೊದಲು ಭಾರತದಿಂದ ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಇಂಗ್ಲೆಂಡ್ ತಂಡ ಆರಂಭಿಕ ಆಟಗಾರ ಜೇಸನ್ ರಾಯ್(65), ಬೈರ್‌ಸ್ಟೋವ್(56) ಹಾಗೂ ಬೆನ್‌ಸ್ಟೋಕ್ಸ್(ಅಜೇಯ 57)ಬಾರಿಸಿದ ಅರ್ಧಶತಕದ ಬೆಂಬಲದಿಂದ ಭಾರತದ ವಿರುದ್ಧದ 8 ವಿಕೆಟ್‌ಗಳ ನಷ್ಟಕ್ಕೆ 321 ರನ್ ಕಲೆ ಹಾಕಿತು.

ಈಡನ್‌ಗಾರ್ಡನ್ಸ್ ಸ್ಟೇಡಿಯಂನಲ್ಲಿ ಬಿಲ್ಲಿಂಗ್ಸ್(35)ರೊಂದಿಗೆ ಇನಿಂಗ್ಸ್ ಆರಂಭಿಸಿದ ರಾಯ್ ಮೊದಲ ವಿಕೆಟ್‌ಗೆ 98 ರನ್ ಜೊತೆಯಾಟ ನಡೆಸಿ ಇಂಗ್ಲೆಂಡ್‌ಗೆ ಉತ್ತಮ ಅಡಿಪಾಯ ಹಾಕಿಕೊಟ್ಟಿದ್ದರು. ರಾಯ್ ಸರಣಿಯಲ್ಲಿ ಸತತ ಮೂರನೆ ಅರ್ಧಶತಕ ಬಾರಿಸಿದರು.

 ಈ ಇಬ್ಬರು ಔಟಾದ ಬಳಿಕ 3ನೆ ವಿಕೆಟ್‌ಗೆ 84 ರನ್ ಜೊತೆಯಾಟ ನಡೆಸಿದ ಕಳೆದ ಪಂದ್ಯದ ಶತಕವೀರ, ನಾಯಕ ಇಯಾನ್ ಮೊರ್ಗನ್(43) ಹಾಗೂ ಬೈರ್‌ಸ್ಟೋವ್ ತಂಡವನ್ನು ಅಗ್ರ ಕ್ರಮಾಂಕದಲ್ಲಿ ಆಧರಿಸಿದರು. 7ನೆ ವಿಕೆಟ್‌ಗೆ ಕೇವಲ 6.4 ಓವರ್‌ಗಳಲ್ಲಿ 73 ರನ್ ಸೇರಿಸಿದ ಸ್ಟೋಕ್ಸ್(ಅಜೇಯ 57, 39 ಎಸೆತ, 4 ಬೌಂಡರಿ, 2 ಸಿಕ್ಸರ್) ಹಾಗೂ ವೋಕ್ಸ್(34) ಇಂಗ್ಲೆಂಡ್ ತಂಡ ಸರಣಿಯಲ್ಲಿ ಸತತ 3ನೆ ಬಾರಿ 300ಕ್ಕೂ ಅಧಿಕ ರನ್ ಗಳಿಸಲು ನೆರವಾದರು. ಇಂಗ್ಲೆಂಡ್ ಅಂತಿಮ ಏಳು ಓವರ್‌ಗಳಲ್ಲಿ 68 ರನ್ ಸೂರೆಗೈದಿತು.

ಮೂರನೆ ಏಕದಿನದಲ್ಲಿ ಕ್ಷಿಪ್ರವಾಗಿ 2ನೆ ಅರ್ಧಶತಕ ಬಾರಿಸಿದ ಸ್ಟೋಕ್ಸ್‌ಗೆ ವೋಕ್ಸ್(19 ಎಸೆತ, 34 ರನ್) ಉತ್ತಮ ಸಾಥ್ ನೀಡಿದರು.

ಭಾರತದ ಪರ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ(3-49) ಹಾಗೂ ರವೀಂದ್ರ ಜಡೇಜ(2-62) ಐದು ವಿಕೆಟ್‌ಗಳನ್ನು ಹಂಚಿಕೊಂಡರು. ಬಿಲ್ಲಿಂಗ್ ವಿಕೆಟ್ ಪಡೆದ ಜಡೇಜ ಏಕದಿನದಲ್ಲಿ ಒಟ್ಟು 150 ವಿಕೆಟ್ ಪೂರೈಸಿದರು.

ಅಂಕಿ-ಅಂಶ

03: ಇಂಗ್ಲೆಂಡ್ ಪ್ರಸ್ತುತ ಸರಣಿಯಲ್ಲಿ ಸತತ ಮೂರನೆ ಬಾರಿ 300ಕ್ಕೂ ಅಧಿಕ ರನ್ ಗಳಿಸಿದೆ. 34: ಬೆನ್ ಸ್ಟೋಕ್ಸ್ 34 ಎಸೆತಗಳಲ್ಲಿ 50 ರನ್ ಪೂರೈಸಿದರು. ಭಾರತ ವಿರುದ್ಧದ ಏಕದಿನಲ್ಲಿ ಇಂಗ್ಲೆಂಡ್‌ನ ಪರ 2ನೆ ವೇಗದ ಅರ್ಧಶತಕ ಬಾರಿಸಿದರು. ಸ್ಟೋಕ್ಸ್ ಸರಣಿಯ ಮೊದಲ ಪಂದ್ಯದಲ್ಲಿ 33 ಎಸೆತಗಳಲ್ಲಿ 50 ರನ್ ಗಳಿಸಿದ್ದರು.

220: ಜೇಸನ್ ರಾಯ್ ಸರಣಿಯಲ್ಲಿ ಒಟ್ಟು 220 ರನ್ ಗಳಿಸಿದ್ದಾರೆ. ಸರಣಿಯಲ್ಲಿ 73, 82 ಹಾಗೂ 65 ರನ್ ಗಳಿಸಿದ್ದಾರೆ. 4-0: ಕೋಲ್ಕತಾದಲ್ಲಿ ನಡೆದ ಕಳೆದ 4 ಹಗಲು-ರಾತ್ರಿ ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ತಂಡ ನಾಲ್ಕು ಬಾರಿ ಜಯ ಸಾಧಿಸಿದೆ. 153, 85, 95, 131 ರನ್ ಅಂತರದ ಜಯ ಸಾಧಿಸಿದೆ.

ಸ್ಕೋರ್ ವಿವರ

ಇಂಗ್ಲೆಂಡ್ 50 ಓವರ್‌ಗಳಲ್ಲಿ 321/8

ಜೇಸನ್ ರಾಯ್ ಬಿ ಜಡೇಜ 65

ಬಿಲ್ಲಿಂಗ್ಸ್ ಸಿ ಬುಮ್ರಾ ಬಿ ಜಡೇಜ 35

ಬೈರ್‌ಸ್ಟೋವ್ ಸಿ ಜಡೇಜ ಬಿ ಪಾಂಡ್ಯ 56

ಮೊರ್ಗನ್ ಸಿ ಬುಮ್ರಾ ಬಿ ಪಾಂಡ್ಯ 43

ಬಟ್ಲರ್ ಸಿ ರಾಹುಲ್ ಬಿ ಪಾಂಡ್ಯ 11

ಸ್ಟೋಕ್ಸ್ ಅಜೇಯ 57

ಮೊಯಿನ್ ಅಲಿ ಸಿ ಜಡೇಜ ಬಿ ಬುಮ್ರಾ 02

ವೋಕ್ಸ್ ರನೌಟ್ 34

ಪ್ಲಂಕೆಟ್ ರನೌಟ್ 01

ಇತರ 17

ವಿಕೆಟ್ ಪತನ: 1-98, 2-110, 3-194, 4-212, 5-237, 6-246, 7-319, 8-321

ಬೌಲಿಂಗ್ ವಿವರ:

ಭುವನೇಶ್ವರ ಕುಮಾರ್ 8-0-56-0

ಹಾರ್ದಿಕ್ ಪಾಂಡ್ಯ 10-1-49-3

ಬುಮ್ರಾ 10-1-68-1

ಯುವರಾಜ್ ಸಿಂಗ್ 3-0-17-0

ರವೀಂದ್ರ ಜಡೇಜ 10-0-62-2

ಆರ್.ಅಶ್ವಿನ್ 9-0-60-0

ಭಾರತ: 50 ಓವರ್‌ಗಳಲ್ಲಿ 316/9

ರಹಾನೆ ಬಿ ವಿಲ್ಲಿ 01

ರಾಹುಲ್ ಸಿ ಬಟ್ಲರ್ ಬಿ ಬಾಲ್ 11

ವಿರಾಟ್ ಕೊಹ್ಲಿ ಸಿ ಬಟ್ಲರ್ ಬಿ ಸ್ಟೋಕ್ಸ್ 55

ಯುವರಾಜ್ ಸಿಂಗ್ ಸಿ ಬಿಲ್ಲಿಂಗ್ಸ್ ಬಿ ಪ್ಲಂಕೆಟ್ 45

ಎಂಎಸ್ ಧೋನಿ ಸಿ ಬಟ್ಲರ್ ಬಿ ಬಾಲ್ 25

ಕೇದಾರ್ ಜಾಧವ್ ಸಿ ಬಿಲ್ಲಿಂಗ್ಸ್ ಬಿ ಪ್ಲಂಕೆಟ್ 90

ಹಾರ್ದಿಕ್ ಪಾಂಡ್ಯ ಬಿ ಸ್ಟೋಕ್ಸ್ 56

ಜಡೇಜ ಸಿ ಬೈರ್‌ಸ್ಟೋವ್ ಬಿ ವೋಕ್ಸ್ 10

ಅಶ್ವಿನ್ ಸಿ ವೋಕ್ಸ್ ಬಿ ಸ್ಟೋಕ್ಸ್ 01

ಭುವನೇಶ್ವರ ಕುಮಾರ್ ಅಜೇಯ 0

ಬುಮ್ರಾ ಅಜೇಯ 0

ಇತರ 22

ವಿಕೆಟ್‌ಪತನ: 1-13, 2-37, 3-102, 4-133, 5-173,6-279, 7-291, 8-297, 9-316

ಬೌಲಿಂಗ್ ವಿವರ

ವೋಕ್ಸ್ 10-0-75-2

ವಿಲ್ಲಿ 2-0-8-1

ಬಾಲ್ 10-0-56-2

ಪ್ಲಂಕೆಟ್ 10-0-65-1

ಸ್ಟೋಕ್ಸ್ 10-0-63-3

ಅಲಿ 8-0-41-0

ಕೇದಾರ್ ಜಾಧವ್ ಸರಣಿಶ್ರೇಷ್ಠ, ಬೆನ್‌ ಸ್ಟೋಕ್ಸ್ ಪಂದ್ಯಶ್ರೇಷ್ಠ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News