ಸಿಡ್ನಿಯಲ್ಲಿ ಸಿಡಿದೆದ್ದ ವಾರ್ನರ್

Update: 2017-01-22 17:57 GMT

ಸಿಡ್ನಿ, ಜ.22: ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಆಕರ್ಷಕ ಶತಕ, ಹೇಝಲ್‌ವುಡ್(3-54) ಹಾಗೂ ಝಾಂಪ(3-55) ಸಂಘಟಿಸಿದ ಅತ್ಯುತ್ತಮ ಬೌಲಿಂಗ್ ನೆರವಿನಿಂದ ಆಸ್ಟ್ರೇಲಿಯ ತಂಡ ಪಾಕಿಸ್ತಾನ ವಿರುದ್ಧದ ನಾಲ್ಕನೆ ಏಕದಿನ ಪಂದ್ಯವನ್ನು 86 ರನ್‌ಗಳ ಅಂತರದಿಂದ ಗೆದ್ದುಕೊಂಡಿದೆ.

ಈ ಗೆಲುವಿನೊಂದಿಗೆ ಆಸ್ಟ್ರೇಲಿಯ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 3-1 ಮುನ್ನಡೆ ಸಾಧಿಸಿದೆ.

ಇಲ್ಲಿನ ಎಸ್‌ಸಿಜಿ ಸ್ಟೇಡಿಯಂನಲ್ಲಿ ಗೆಲ್ಲಲು 354 ರನ್ ಗುರಿ ಪಡೆದಿದ್ದ ಪಾಕಿಸ್ತಾನ ತಂಡ 43.5 ಓವರ್‌ಗಳಲ್ಲಿ 267 ರನ್‌ಗೆ ಆಲೌಟಾಯಿತು.

ಪಾಕಿಸ್ತಾನದ ಪರ ಆರಂಭಿಕ ಆಟಗಾರ ಶಾರ್ಜೀಲ್ ಖಾನ್(74 ರನ್, 47 ಎಸೆತ, 10 ಬೌಂಡರಿ, 3 ಸಿಕ್ಸರ್)ಸರ್ವಾಧಿಕ ರನ್ ಬಾರಿಸಿದರು. ಶುಐಬ್ ಮಲಿಕ್(47), ಮುಹಮ್ಮದ್ ಹಫೀಝ್(40) ಹಾಗೂ ಬಾಬರ್ ಆಝಂ(31) ಎರಡಂಕೆಯ ಸ್ಕೋರ್ ದಾಖಲಿಸಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ವಿಫಲರಾದರು. ಆಸ್ಟ್ರೇಲಿಯದ ಬೌಲರ್‌ಗಳಾದ ಹೇಝಲ್‌ವುಡ್(3-54), ಝಾಂಪ(3-55) ಹಾಗೂ ಹೆಡ್(2-66)8 ವಿಕೆಟ್‌ಗಳನ್ನು ಹಂಚಿಕೊಂಡರು.

ಆಸ್ಟ್ರೇಲಿಯ 353 ರನ್: ಇದಕ್ಕೆ ಮೊದಲು ಟಾಸ್ ಜಯಿಸಿದ್ದ ಆಸ್ಟ್ರೇಲಿಯ ನಾಯಕ ಸ್ಟೀವನ್ ಸ್ಮಿತ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಕಳೆದ 6 ಪಂದ್ಯಗಳಲ್ಲಿ ಮೂರನೆ ಬಾರಿ ಶತಕ ಬಾರಿಸಿದ ವಾರ್ನರ್ ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಂಡರು.

119 ಎಸೆತಗಳಲ್ಲಿ 11 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ 130 ರನ್ ಗಳಿಸಿದ ವಾರ್ನರ್ 12ನೆ ಏಕದಿನ ಶತಕ ಬಾರಿಸಿದರು.ಎಡಗೈ ದಾಂಡಿಗ ವಾರ್ನರ್ 113 ರನ್ ಗಳಿಸಿದ್ದಾಗ ಹಸನ್ ಅಲಿ ಕೈಚೆಲ್ಲಿದ ಸುಲಭ ಕ್ಯಾಚ್‌ನಿಂದ ಜೀವದಾನ ಪಡೆದಿದ್ದರು. ಇನಿಂಗ್ಸ್ ಆರಂಭಿಸಿದ ವಾರ್ನರ್ ಹಾಗೂ ಉಸ್ಮಾನ್ ಖ್ವಾಜಾ(30) ಮೊದಲ ವಿಕೆಟ್‌ಗೆ 92 ರನ್ ಸೇರಿಸಿ ತಂಡಕ್ಕೆ ಭದ್ರಬುನಾದಿ ಹಾಕಿಕೊಟ್ಟರು. ಖ್ವಾಜಾ ಔಟಾದ ಬಳಿಕ ನಾಯಕ ಸ್ಮಿತ್‌ರೊಂದಿಗೆ ಕೈಜೋಡಿಸಿದ ವಾರ್ನರ್ 2ನೆ ವಿಕೆಟ್‌ನಲ್ಲಿ 120 ರನ್ ಸೇರಿಸಿದರು.

ಈ ಮೂಲಕ ಆಸ್ಟ್ರೇಲಿಯವನ್ನು ದೊಡ್ಡ ಮೊತ್ತದತ್ತ ಕೊಂಡೊಯ್ದರು. ವಾರ್ನರ್ ಹಾಗೂ ಸ್ಮಿತ್‌ರನ್ನು 3 ಎಸೆತಗಳಂತರದಲ್ಲಿ ಪೆವಿಲಿಯನ್‌ಗೆ ಕಳುಹಿಸಿದ ಹಸನ್ ಅಲಿ ಪಾಕ್ ಪಾಳಯದಲ್ಲಿ ವಿಶ್ವಾಸ ಮೂಡಿಸಿದ್ದರು.

 ಆದರೆ, 4ನೆ ವಿಕೆಟ್‌ನಲ್ಲಿ ಕೇವಲ 64 ಎಸೆತಗಳಲ್ಲಿ ಬರೋಬ್ಬರಿ 100ರನ್ ಸೇರಿಸಿದ ಹೆಡ್(51) ಹಾಗೂ ಮ್ಯಾಕ್ಸ್‌ವೆಲ್(78ರನ್)ಆಸ್ಟ್ರೇಲಿಯ 353 ರನ್ ಗಳಿಸಲು ನೆರವಾದರು. ಕೇವಲ 44 ಎಸೆತಗಳನ್ನು ಎದುರಿಸಿದ್ದ ಮ್ಯಾಕ್ಸ್‌ವೆಲ್ 10 ಬೌಂಡರಿ, 1 ಸಿಕ್ಸರ್ ಬಾರಿಸಿದರು.

ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡಿದ್ದ ಪಾಕ್ ನಾಯಕ ಅಝರ್ ಅಲಿ ಆಡುವ 11ರ ಬಳಗದಲ್ಲಿ ಸ್ಥಾನ ಪಡೆದಿದ್ದರು. ಆಸ್ಟ್ರೇಲಿಯ ತಂಡ ಜೇಮ್ಸ್ ಫಾಕ್ನರ್ ಹಾಗೂ ಬಿಲ್ಲಿ ಸ್ಟಾನ್‌ಲೇಕ್ ಬದಲಿಗೆ ಮಿಚೆಲ್ ಸ್ಟಾರ್ಕ್ ಹಾಗೂ ಆ್ಯಡಮ್ ಝಾಂಪರನ್ನು ತಂಡಕ್ಕೆ ಸೇರಿಸಿಕೊಂಡಿತು.

ಸಂಕ್ಷಿಪ್ತ ಸ್ಕೋರ್

ಆಸ್ಟ್ರೇಲಿಯ:50 ಓವರ್‌ಗಳಲ್ಲಿ 353/6

(ವಾರ್ನರ್ 130, ಮ್ಯಾಕ್ಸ್‌ವೆಲ್ 78, ಹೆಡ್ 51, ಸ್ಮಿತ್ 49, ಹಸನ್ ಅಲಿ 5-52)

ಪಾಕಿಸ್ತಾನ: 43.5 ಓವರ್‌ಗಳಲ್ಲಿ 267 ರನ್‌ಗೆ ಆಲೌಟ್

(ಶಾರ್ಜೀಲ್ ಖಾನ್ 74,ಶುಐಬ್ ಮಲಿಕ್ 47, ಹಫೀಝ್ 40, ಆಝಂ 31, ಹೇಝಲ್‌ವುಡ್ 3-54, ಝಾಂಪ 3-55, ಹೆಡ್ 2-66)

ಪಂದ್ಯಶ್ರೇಷ್ಠ: ಡೇವಿಡ್ ವಾರ್ನರ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News