ಮರ್ರೆ ಪ್ರಶಸ್ತಿ ಕನಸು ಭಗ್ನ, ವಾವ್ರಿಂಕ, ಫೆಡರರ್ ಕ್ವಾರ್ಟರ್ ಫೈನಲ್‌ಗೆ

Update: 2017-01-22 18:00 GMT

ಮೆಲ್ಬೋರ್ನ್, ಜ.22: ವಿಶ್ವದ ನಂ.1 ಆಟಗಾರ ಆ್ಯಂಡಿ ಮರ್ರೆಗೆ ಆಸ್ಟ್ರೇಲಿಯನ್ ಓಪನ್‌ನಲ್ಲಿ ಚೊಚ್ಚಲ ಪ್ರಶಸ್ತಿ ಗೆಲ್ಲುವ ಕನಸು ಭಗ್ನಗೊಂಡಿದೆ. ಮಾಜಿ ಚಾಂಪಿಯನ್ ಸ್ವಿಸ್‌ನ ಸ್ಟಾನ್ ವಾವ್ರಿಂಕ, ರೋಜರ್ ಫೆಡರರ್ ಕ್ವಾರ್ಟರ್ ಫೈನಲ್‌ಗೆ ತಲುಪಲು ಯಶಸ್ವಿಯಾಗಿದ್ದಾರೆ.

ಅಗ್ರ ಶ್ರೇಯಾಂಕಿತ ಆ್ಯಂಡಿ ಮರ್ರೆ ಆಸ್ಟ್ರೇಲಿಯನ್ ಓಪನ್‌ನ ನಾಲ್ಕನೆ ಸುತ್ತಿನ ಪಂದ್ಯದಲ್ಲಿ ಜರ್ಮನಿಯ ವಿಶ್ವದ ನಂ.50ನೆ ಆಟಗಾರ ಮಿಸ್ಚಾ ಝ್ವೆರೆವ್ ವಿರುದ್ಧ 7-5,5-7, 6-2, 6-4 ಸೆಟ್‌ಗಳ ಅಂತರದಿಂದ ಸೋತಿದ್ದಾರೆ. ಐದು ಬಾರಿ ಆಸ್ಟ್ರೇಲಿಯನ್ ಓಪನ್ ಫೈನಲ್‌ನಲ್ಲಿ ಮುಗ್ಗರಿಸಿದ್ದ ಮರ್ರೆ ಈ ಬಾರಿ ಚೊಚ್ಚಲ ಪ್ರಶಸ್ತಿ ಎತ್ತುವ ಅದಮ್ಯ ವಿಶ್ವಾಸದಲ್ಲಿದ್ದರು.

ಆದರೆ, ಅವರ ಕನಸನ್ನು ಮಿಸ್ಚಾ ಭಗ್ನಗೊಳಿಸಿದ್ದಾರೆ. ಹಾಲಿ ಚಾಂಪಿಯನ್ ನೊವಾಕ್ ಜೊಕೊವಿಕ್ ಇದೇ ಟೂರ್ನಿಯಲ್ಲಿ ಗುರುವಾರ ನಡೆದ ಎರಡನೆ ಸುತ್ತಿನ ಪಂದ್ಯದಲ್ಲಿ ಉಜ್ಬೇಕಿಸ್ತಾನದ ಡೆನಿಸ್ ಇಸ್ಟೊಮಿನ್ ವಿರುದ್ಧ ಸೋತು ಬೇಗನೆ ಹೊರ ನಡೆದಿದ್ದರು. ವರ್ಷದ ಮೊದಲ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಮೊದಲೆರಡು ಶ್ರೇಯಾಂಕದ ಆಟಗಾರರು ಕ್ವಾರ್ಟರ್‌ಫೈನಲ್‌ಗಿಂತ ಮೊದಲೇ ಸೋತು ನಿರ್ಗಮಿಸಿದ್ದಾರೆ.

 ರವಿವಾರ ಇಲ್ಲಿ ನಡೆದ ಪುರುಷರ ಸಿಂಗಲ್ಸ್‌ನ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ವಾವ್ರಿಂಕ ಇಟಲಿಯ ಆ್ಯಂಡ್ರಿಯಸ್ ಸೆಪ್ಪಿ ವಿರುದ್ಧ 7-6(7/2), 7-6(7/4), 7-6(7/4) ಸೆಟ್‌ಗಳ ಅಂತರದಿಂದ ಮಣಿಸಿದರು.

ವಾವ್ರಿಂಕ ಮುಂದಿನ ಸುತ್ತಿನಲ್ಲ್ಲಿ ಫ್ರಾನ್ಸ್‌ನ ಜೋ-ವಿಲ್ಪ್ರೆಡ್ ಸೋಂಗ ಅಥವಾ ಬ್ರಿಟನ್‌ನ ಡ್ಯಾನ್ ಎವನ್ಸ್‌ರನ್ನು ಎದುರಿಸಲಿದ್ದಾರೆ. ವಾವ್ರಿಂಕ 2015ರ ಫ್ರೆಂಚ್ ಓಪನ್ ಹಾಗೂ 2016ರ ಯುಎಸ್ ಓಪನ್‌ನಲ್ಲಿ ಜೊಕೊವಿಕ್‌ರನ್ನು ಮಣಿಸಿ ಚಾಂಪಿಯನ್ ಆಗಿದ್ದರು.

ಫೆಡರರ್‌ಗೆ 5 ಸೆಟ್‌ಗಳ ಜಯ: ಸ್ವಿಸ್‌ನ 17 ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ರೋಜರ್ ಫೆಡರರ್ ಜಪಾನ್‌ನ ಕೀ ನಿಶಿಕೊರಿ ವಿರುದ್ಧ ಐದು ಸೆಟ್‌ಗಳ ಅಂತರದಿಂದ ಜಯ ಸಾಧಿಸಿ ಕ್ವಾರ್ಟರ್‌ಫೈನಲ್‌ಗೆ ತಲುಪಿದರು.

ಫೆಡರರ್ 4ನೆ ಸುತ್ತಿನ ಪಂದ್ಯದಲ್ಲಿ ನಿಶಿಕೊರಿ ಅವರನ್ನು 6-7(4/7), 6-4, 6-1,4-6, 6-3 ಸೆಟ್‌ಗಳ ಅಂತರದಿಂದ ಮಣಿಸಿದರು. ಸ್ವಿಸ್ ಲೆಜಂಡ್ ಫೆಡರರ್ ಮುಂದಿನ ಸುತ್ತಿನಲ್ಲಿ ಆ್ಯಂಡಿ ಮರ್ರೆಯನ್ನು ಮಣಿಸಿದ ಜರ್ಮನಿಯ ಮಿಸ್ಚಾ ಝ್ವೆರೆವ್‌ರನ್ನು ಎದುರಿಸಲಿದ್ದಾರೆ.

ಸಾನಿಯಾ ಸವಾಲು ಅಂತ್ಯ: ಪೇಸ್ ಶುಭಾರಂಭ

 ಮೆಲ್ಬೋರ್ನ್, ಜ.22: ಆಸ್ಟ್ರೇಲಿಯನ್ ಓಪನ್‌ನ ಮಹಿಳೆಯರ ಡಬಲ್ಸ್‌ನಲ್ಲಿ ಭಾರತದ ಸ್ಟಾರ್ ಆಟಗಾರ್ತಿ ಸಾನಿಯಾ ಮಿರ್ಝಾರ ಸವಾಲು ಅಂತ್ಯಗೊಂಡಿದೆ. ಮತ್ತೊಂದೆಡೆ, ಹಿರಿಯ ಆಟಗಾರ ಲಿಯಾಂಡರ್ ಪೇಸ್ ಮಿಶ್ರ ಡಬಲ್ಸ್‌ನಲ್ಲಿ ಶುಭಾರಂಭ ಮಾಡಿದ್ದಾರೆ.

ಪೇಸ್ ಹಾಗೂ ಸ್ವಿಸ್‌ನ ಮಾರ್ಟಿನಾ ಹಿಂಗಿಸ್ ರವಿವಾರ ನಡೆದ ಮಿಶ್ರ ಡಬಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಆಸ್ಟ್ರೇಲಿಯದ ಡೆಸ್ಟನೀ ಏವಾ ಹಾಗೂ ಮಾರ್ಕ್ ಪಾಲ್ಮನ್ಸ್‌ರನ್ನು 6-4, 6-3 ಸೆಟ್‌ಗಳ ಅಂತರದಿಂದ ಮಣಿಸಿದರು.

ಮಹಿಳೆಯರ ಡಬಲ್ಸ್‌ನಲ್ಲಿ ಸಾನಿಯಾ ಹಾಗೂ ಅವರ ಝೆಕ್ ಗಣರಾಜ್ಯದ ಜೊತೆಗಾರ್ತಿ ಬಾರ್ಬರೊ ಸ್ಟ್ರೈಕೊವಾ ಶ್ರೇಯಾಂಕರಹಿತ ಜಪಾನ್‌ನ ಹೊಝುಮಿ ಹಾಗೂ ಕಾಟೊ ವಿರುದ್ಧ ಮೂರನೆ ಸುತ್ತಿನ ಪಂದ್ಯದಲ್ಲಿ 3-6, 6-2, 2-6 ಸೆಟ್‌ಗಳ ಅಂತರದಿಂದ ಸೋತಿದ್ದಾರೆ.

ಸಾನಿಯಾ ಮಿಶ್ರ ಡಬಲ್ಸ್‌ನಲ್ಲಿ ಕ್ರೊಯೇಷಿಯದ ಇವಾನ್ ಡೊಡಿಗ್‌ರೊಂದಿಗೆ ದ್ವಿತೀಯ ಸುತ್ತಿಗೆ ತಲುಪಿದ್ದಾರೆ. 

ವೀನಸ್ ಅಂತಿಮ-8 ಸುತ್ತಿಗೆ ಪ್ರವೇಶ

ಮೆಲ್ಬೋರ್ನ್, ಜ.22: ಅಮೆರಿಕದ ಹಿರಿಯ ಆಟಗಾರ್ತಿ ವೀನಸ್ ವಿಲಿಯಮ್ಸ್ ಆಸ್ಟ್ರೇಲಿಯನ್ ಓಪನ್‌ನಲ್ಲಿ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದಾರೆ.

 36ರ ಪ್ರಾಯದ ವೀನಸ್ ರವಿವಾರ ರಾಡ್ ಲಾವೆರ್ ಅರೆನಾದಲ್ಲಿ ನಡೆದ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜರ್ಮನಿಯ ಕ್ವಾಲಿಫೈಯರ್ ಮೊನಾ ಬಾರ್ಥೆಲ್‌ರನ್ನು 6-3, 7-5 ನೇರ ಸೆಟ್‌ಗಳ ಅಂತರದಿಂದ ಮಣಿಸಿ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ 37ನೆ ಬಾರಿ, ಆಸ್ಟ್ರೇಲಿಯನ್ ಓಪನ್‌ನಲ್ಲಿ 9ನೆ ಬಾರಿ ಕ್ವಾರ್ಟರ್ ಫೈನಲ್ ತಲುಪಿದರು.

ವೀನಸ್ ಏಳು ಬಾರಿ ಗ್ರಾನ್‌ಸ್ಲಾಮ್ ಪ್ರಶಸ್ತಿ ಜಯಿಸಿದ್ದು, 2008ರಲ್ಲಿ ವಿಂಬಲ್ಡನ್ ಟ್ರೋಫಿ ಜಯಿಸಿದ ಬಳಿಕ ಪ್ರಶಸ್ತಿಬರ ಎದುರಿಸುತ್ತಿದ್ದಾರೆ.

ವಿಶ್ವದ ನಂ.1 ಆಟಗಾರ್ತಿ ಕೆರ್ಬರ್‌ಗೆ ಆಘಾತ

ಮೆಲ್ಬೋರ್ನ್, ಜ.22: ವಿಶ್ವದ ನಂ.1 ಆಟಗಾರ್ತಿ ಏಂಜೆಲಿಕ್ ಕೆರ್ಬರ್ ಆಸ್ಟ್ರೇಲಿಯನ್ ಓಪನ್ ಟೂರ್ನಿಯಿಂದ ಹೊರ ನಡೆದಿದ್ದಾರೆ.

ರವಿವಾರ ಇಲ್ಲಿ ನಡೆದ ಮಹಿಳೆಯರ ಸಿಂಗಲ್ಸ್‌ನ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕೆರ್ಬರ್ ಅಮೆರಿಕದ ಕೊಕೊ ವೆಂಡ್‌ವೆಘ್ ವಿರುದ್ಧ 6-2, 6-3 ನೇರ ಸೆಟ್‌ಗಳಿಂದ ಶರಣಾದರು. ಜರ್ಮನಿಯ ಹಾಲಿ ಚಾಂಪಿಯನ್ ಕೆರ್ಬರ್ ಅಮೆರಿಕದ ಆಟಗಾರ್ತಿಯ ಆಟಕ್ಕೆ ನಿರುತ್ತರವಾದರು.

ಪುರುಷರ ಸಿಂಗಲ್ಸ್‌ನಲ್ಲಿ ಆ್ಯಂಡಿ ಮರ್ರೆ ಹಾಗೂ ನೊವಾಕ್ ಜೊಕೊವಿಕ್ ಕೂಡ ಸೋತು ನಿರಾಸೆಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News