ಇರಾನಿ ಕಪ್‌: ಪಾಂಚಾಲ್-ಗಾಂಧಿ ಅರ್ಧಶತಕ, ಗುಜರಾತ್‌ಗೆ ಮುನ್ನಡೆ

Update: 2017-01-22 18:01 GMT

ಮುಂಬೈ, ಜ.22: ಪ್ರಿಯಾಂಕ್ ಪಾಂಚಾಲ್(73) ಹಾಗೂ ಚಿರಾಗ್ ಗಾಂಧಿ (ಅಜೇಯ 55)ಬಾರಿಸಿದ ಅರ್ಧಶತಕದ ನೆರವಿನಿಂದ ಗುಜರಾತ್ ತಂಡ ಶೇಷ ಭಾರತ ವಿರುದ್ಧದ ಇರಾನಿ ಕಪ್‌ನಲ್ಲಿ 359 ರನ್ ಭಾರೀ ಮುನ್ನಡೆ ಸಾಧಿಸಿದೆ.

ಮೂರನೆ ದಿನವಾದ ರವಿವಾರ 132 ರನ್ ಮುನ್ನಡೆಯೊಂದಿಗೆ 2ನೆ ಇನಿಂಗ್ಸ್ ಆರಂಭಿಸಿದ ರಣಜಿ ಟ್ರೋಫಿ ಚಾಂಪಿಯನ್ ಗುಜರಾತ್ ದಿನದಾಟದಂತ್ಯಕ್ಕೆ 8 ವಿಕೆಟ್‌ಗಳ ನಷ್ಟಕ್ಕೆ 227 ರನ್ ಗಳಿಸಿದ್ದು, 359 ರನ್ ಮುನ್ನಡೆಯಲ್ಲಿದೆ.

ಇದಕ್ಕೆ ಮೊದಲು 9 ವಿಕೆಟ್‌ಗಳ ನಷ್ಟಕ್ಕೆ 208 ರನ್‌ನಿಂದ ಮೊದಲ ಇನಿಂಗ್ಸ್ ಆರಂಭಿಸಿದ ಶೇಷ ಭಾರತ ತಂಡ 226 ರನ್‌ಗೆ ಆಲೌಟಾಯಿತು. ಗಜ(4-60),ಹರ್ಷಲ್ ಪಟೇಲ್(3-73) ಹಾಗೂ ಥಂಡಾನಿ(2-48) 9 ವಿಕೆಟ್‌ಗಳನ್ನು ಹಂಚಿಕೊಂಡರು.

ಗುಜರಾತ್ 2ನೆ ಇನಿಂಗ್ಸ್‌ನಲ್ಲಿ 2 ವಿಕೆಟ್ ನಷ್ಟಕ್ಕೆ 42 ರನ್ ಗಳಿಸಿತ್ತು. ಆಗ 3ನೆ ವಿಕೆಟ್‌ಗೆ 85 ರನ್ ಸೇರಿಸಿದ ಪಾಂಚಾಲ್(73, 135 ಎಸೆತ, 9 ಬೌಂಡರಿ) ಹಾಗೂ ನಾಯಕ ಪಾರ್ಥಿವ್ ಪಟೇಲ್(32) ತಂಡಕ್ಕೆ ಆಧಾರವಾದರು.

ಶೇಷ ಭಾರತದ ಪರ ಎಸ್.ನದೀಮ್(4-53) ಯಶಸ್ವಿ ಬೌಲರ್ ಎನಿಸಿಕೊಂಡರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News