ದ್ವಿತೀಯ ಟೆಸ್ಟ್: ಬಾಂಗ್ಲಾದೇಶದ ವಿರುದ್ಧ ಕಿವೀಸ್ ಕ್ಲೀನ್‌ಸ್ವೀಪ್

Update: 2017-01-23 17:42 GMT

ಕ್ರೈಸ್ಟ್‌ಚರ್ಚ್, ಜ.23: ಬಾಂಗ್ಲಾದೇಶದ ಕಳಪೆ ಬ್ಯಾಟಿಂಗ್‌ನ ಲಾಭ ಪಡೆದ ನ್ಯೂಝಿಲೆಂಡ್ ತಂಡ ದ್ವಿತೀಯ ಟೆಸ್ಟ್‌ನಲ್ಲಿ 9 ವಿಕೆಟ್‌ಗಳ ಅಂತರದಿಂದ ಜಯ ದಾಖಲಿಸಿದೆ. ಈ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 2-0 ಅಂತರದಿಂದ ವಶಪಡಿಸಿಕೊಂಡಿತು.

ಬಾಂಗ್ಲಾದೇಶ ಎರಡನೆ ಇನಿಂಗ್ಸ್‌ನಲ್ಲಿ ಕೇವಲ 173 ರನ್‌ಗೆ ಆಲೌಟಾಯಿತು. ಮಧ್ಯಮ ಇನಿಂಗ್ಸ್‌ನಲ್ಲಿ ದಿಢೀರ್ ಕುಸಿತ ಕಂಡ ಬಾಂಗ್ಲಾ ತಂಡ ನ್ಯೂಝಿಲೆಂಡ್ ಗೆಲುವಿಗೆ 109 ರನ್ ಗುರಿ ನೀಡಿತ್ತು.

18.4 ಓವರ್‌ಗಳಲ್ಲಿ 1 ವಿಕೆಟ್‌ಗೆ 111 ರನ್ ಗಳಿಸಿ ಗೆಲುವಿನ ದಡ ಸೇರಿದ ನ್ಯೂಝಿಲೆಂಡ್ ತಂಡ ಬಾಂಗ್ಲಾದೇಶ ವಿರುದ್ಧ ಎಲ್ಲ 8 ಪಂದ್ಯಗಳನ್ನು(3 ಟ್ವೆಂಟಿ-20, 3 ಏಕದಿನ, 2 ಟೆಸ್ಟ್) ಗೆದ್ದುಕೊಂಡಿದೆ. ಟೆಸ್ಟ್ ಸರಣಿಯಲ್ಲಿ ಕ್ಲೀನ್‌ಸ್ವೀಪ್ ಸಾಧಿಸಿರುವ ನ್ಯೂಝಿಲೆಂಡ್ ಐಸಿಸಿ ಟೆಸ್ಟ್ ತಂಡಗಳ ರ್ಯಾಂಕಿಂಗ್‌ನಲ್ಲಿ ಪಾಕಿಸ್ತಾನವನ್ನು ಹಿಂದಕ್ಕೆ ತಳ್ಳಿ 5ನೆ ಸ್ಥಾನಕ್ಕೇರಿತು.

 ನಾಲ್ಕನೆ ದಿನವಾದ ಸೋಮವಾರ 14 ವಿಕೆಟ್‌ಗಳು ಪತನಗೊಂಡವು. ಗೆಲುವಿಗೆ ಸುಲಭ ಸವಾಲು ಪಡೆದಿದ್ದ ಕಿವೀಸ್ ಟಾಮ್ ಲಥಾಮ್(ಅಜೇಯ 41) ಹಾಗೂ ಕಾಲಿನ್ ಡಿ ಗ್ರಾಂಡ್‌ಹೊಮ್(ಅಜೇಯ 33) ಸಾಹಸದ ನೆರವಿನಿಂದ ಬೇಗನೆ ಗೆಲುವಿನ ದಡ ಸೇರಿತು.

ಲಂಚ್ ವಿರಾಮದಲ್ಲಿ 1 ವಿಕೆಟ್‌ಗೆ 20 ರನ್ ಗಳಿಸಿದ್ದ ಬಾಂಗ್ಲಾ ಟೀ ವಿರಾಮದಬಳಿಕ 5 ವಿಕೆಟ್ ನಷ್ಟಕ್ಕೆ 100 ರನ್ ಗಳಿಸಿತ್ತು. ತಸ್ಕಿನ್ ಅಹ್ಮದ್ ಹಾಗೂ ಕಮ್ರುಲ್ ಇಸ್ಲಾಮ್ 48 ಎಸೆತಗಳಲ್ಲಿ 51 ರನ್ ಸೇರಿಸಿದ ಕಾರಣ ತಂಡ 173 ರನ್ ಗಳಿಸಿ ಆಲೌಟಾಯಿತು.

ಒಟ್ಟಿಗೆ 98 ಟೆಸ್ಟ್ ಪಂದ್ಯಗಳನ್ನು ಆಡಿರುವ ಅನುಭವಿ ಆಟಗಾರರಾಗಿರುವ ಇಮ್ರುಲ್ ಕಯೆಸ್, ಮುಶ್ಫಿಕುರ್ರಹೀಂ ಹಾಗೂ ಮೊಮಿನುಲ್ ಹಕ್ ಗಾಯದ ಸಮಸ್ಯೆಯಿಂದಾಗಿ 2ನೆ ಪಂದ್ಯದಿಂದ ಹೊರಗುಳಿದ್ದರು.

 ರವಿವಾರದ 3ನೆ ದಿನದಾಟ ಮಳೆಗಾಹುತಿಯಾಗಿತ್ತು. ಸೋಮವಾರ 7 ವಿಕೆಟ್ ನಷ್ಟಕ್ಕೆ 260 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ನ್ಯೂಝಿಲೆಂಡ್ 354 ರನ್ ಗಳಿಸಿತು. ಕಿವೀಸ್ ಅಂತಿಮ 3 ವಿಕೆಟ್‌ಗಳ ನೆರವಿನಿಂದ 94 ರನ್ ಸೇರಿಸಿತು. ಹೆನ್ರಿ ನಿಕೊಲ್ಸ್ ಜೀವನಶ್ರೇಷ್ಠ 98 ರನ್ ಗಳಿಸಿ ಔಟಾದರು. ಚೊಚ್ಚಲ ಶತಕ ವಂಚಿತರಾದರು.

 ಸೌಥಿ ಮೈಲುಗಲ್ಲು: ನಿಕೊಲ್ಸ್‌ಗೆ ಚೊಚ್ಚಲ ಶತಕ ನಿರಾಕರಿಸಿದ್ದ ಬಾಂಗ್ಲಾದೇಶ ಕಿವೀಸ್‌ನ ವೇಗಿ ಟಿಮ್ ಸೌಥಿ 200 ವಿಕೆಟ್ ಪೂರೈಸಿದ ಸಾಧನೆಗೆ ಅಡ್ಡಿಯಾಗಲು ವಿಫಲವಾಯಿತು.

ಎರಡನೆ ಇನಿಂಗ್ಸ್‌ನಲ್ಲಿ 48ಕ್ಕೆ 3 ವಿಕೆಟ್ ಕಬಳಿಸಿದ ಸೌಥಿ 200 ವಿಕೆಟ್ ಪೂರೈಸಿದ ಕಿವೀಸ್‌ನ 5ನೆ ಬೌಲರ್ ಎನಿಸಿಕೊಂಡರು. ರಿಚರ್ಡ್ ಹ್ಯಾಡ್ಲೀ (417 ವಿಕೆಟ್)ನೇತೃತ್ವದ ಕಿವೀಸ್ ಬೌಲರ್‌ಗಳ ಪಟ್ಟಿಯಲ್ಲಿ ಸೌಥಿ ಸ್ಥಾನ ಪಡೆದರು. ಸೌಥಿ ಪಂದ್ಯಶ್ರೇಷ್ಠ ಪ್ರಶಸ್ತಿ ಗಿಟ್ಟಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News