ಸೆರೆನಾ, ರಾವೊನಿಕ್,ನಡಾಲ್ ಕ್ವಾರ್ಟರ್‌ಫೈನಲ್‌ಗೆ

Update: 2017-01-23 17:45 GMT

ಮೆಲ್ಬೋರ್ನ್, ಜ.23: ಅಮೆರಿಕದ ಹಿರಿಯ ಆಟಗಾರ್ತಿ ಸೆರೆನಾ ವಿಲಿಯಮ್ಸ್ 11ನೆ ಬಾರಿ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದಾರೆ.

ಸೋಮವಾರ ಇಲ್ಲಿ ನಡೆದ ಮಹಿಳೆಯರ ಸಿಂಗಲ್ಸ್‌ನ ಪ್ರಿ-ಕ್ವಾರ್ಟರ್‌ಫೈನಲ್‌ನಲ್ಲಿ ಝೆಕ್‌ನ 16ನೆ ಶ್ರೇಯಾಂಕದ ಬಾರ್ಬೊರ ಸ್ಟ್ರೈಕೋವಾರನ್ನು 7-5, 6-4 ಸೆಟ್‌ಗಳ ಅಂತರದಿಂದ ಸೋಲಿಸಿದರು.

ಸೆರೆನಾ ಮುಂದಿನ ಸುತ್ತಿನಲ್ಲಿ ಬ್ರಿಟನ್‌ನ ಜೊಹನ್ನಾ ಕಾಂಟಾರನ್ನು ಎದುರಿಸಲಿದ್ದಾರೆ.

ಅಗ್ರ ಶ್ರೇಯಾಂಕಿತೆ, ಕಳೆದ ವರ್ಷ ಫೈನಲ್‌ನಲ್ಲಿ ತನ್ನನ್ನು ಸೋಲಿಸಿ ವಿಶ್ವದ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನಕ್ಕೇರಿದ್ದ ಜರ್ಮನಿಯ ಏಂಜೆಲಿಕ್ ಕೆರ್ಬರ್ ರವಿವಾರ ಸೋತು ನಿರ್ಗಮಿಸಿರುವ ಹಿನ್ನೆಲೆಯಲ್ಲಿ ಎಚ್ಚರಿಕೆಯಿಂದ ಆಡಿರುವ ಸೆರೆನಾ ಕ್ವಾರ್ಟರ್‌ಫೈನಲ್‌ಗೆ ತಲುಪಿದ್ದು, ಒಂದುವೇಳೆ ಪ್ರಶಸ್ತಿಯನ್ನು ಎತ್ತಿಹಿಡಿದರೆ ಮತ್ತೊಮ್ಮೆ ನಂ.1 ಆಟಗಾರ್ತಿಯಾಗಿ ಹೊರಹೊಮ್ಮಲಿದ್ದಾರೆ.

ಶನಿವಾರ ನಡೆಯಲಿರುವ ಫೈನಲ್‌ನಲ್ಲಿ ಸೆರೆನಾ ಪ್ರಶಸ್ತಿ ಜಯಿಸಿದರೆ ಇತಿಹಾಸವನ್ನು ಮರುನಿರ್ಮಿಸಲಿದ್ದಾರೆ. ಮೆಲ್ಬೋರ್ನ್‌ನಲ್ಲಿ ಏಳನೆ ಬಾರಿ ಪ್ರಶಸ್ತಿಯನ್ನು ಗೆಲ್ಲುವ ವಿಶ್ವಾಸದಲ್ಲಿರುವ ಸೆರೆನಾ 23ನೆ ಗ್ರಾನ್‌ಸ್ಲಾಮ್ ಪ್ರಶಸ್ತಿ ಜಯಿಸಿ ಸ್ಟೆಫಿಗ್ರಾಫ್ ದಾಖಲೆ ಮುರಿಯುವತ್ತ ಚಿತ್ತವಿರಿಸಿದ್ದಾರೆ.

ರಾವೊನಿಕ್ ಅಂತಿಮ-8ರ ಸುತ್ತಿಗೆ ಲಗ್ಗೆ

ಮೆಲ್ಬೋರ್ನ್,ಜ.23: ಸ್ಪೇನ್‌ನ ರಾಬರ್ಟೊ ಬೌಟಿಸ್ಟಾ ಅಗುಟ್‌ರನ್ನು ನಾಲ್ಕು ಸೆಟ್‌ಗಳ ಅಂತರದಿಂದ ಮಣಿಸಿದ ಮೂರನೆ ಶ್ರೇಯಾಂಕದ ಮಿಲಾಸ್ ರಾವೊನಿಕ್ ಆಸ್ಟ್ರೇಲಿಯನ್ ಓಪನ್‌ನಲ್ಲಿ ಕ್ವಾರ್ಟರ್‌ಫೈನಲ್ ತಲುಪಿದ್ದಾರೆ.

ಸೋಮವಾರ ನಡೆದ ಪುರುಷರ ಸಿಂಗಲ್ಸ್‌ನ ಪ್ರಿ-ಕ್ವಾರ್ಟರ್‌ಫೈನಲ್‌ನಲ್ಲಿ ಕೆನಡಾದ ರಾವೊನಿಕ್ 13ನೆ ಶ್ರೇಯಾಂಕದ ಬೌಟಿಸ್ಟ ಅಗುಟ್‌ರನ್ನು 2 ಗಂಟೆ, 52 ನಿಮಿಷಗಳ ಹೋರಾಟದಲ್ಲಿ 7-6(8/6), 3-6, 6-4, 6-1 ಸೆಟ್‌ಗಳ ಅಂತರದಿಂದ ಸೋಲಿಸಿದರು.

ರಾವೊನಿಕ್ ಮುಂದಿನ ಸುತ್ತಿನಲ್ಲಿ 14 ಬಾರಿ ಗ್ರಾನ್‌ಸ್ಲಾಮ್ ಚಾಂಪಿಯನ್ ನಡಾಲ್ ಅಥವಾ ಫ್ರೆಂಚ್‌ನ ಆರನೆ ಶ್ರೇಯಾಂಕದ ಗಾಯೆಲ್ ಮೊನ್‌ಫಿಲ್ಸ್‌ರನ್ನು ಎದುರಿಸಲಿದ್ದಾರೆ.

ರಾವೊನಿಕ್ ಸತತ ಮೂರನೆ ವರ್ಷ ಆಸ್ಟ್ರೇಲಿಯದಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಪ್ರಮುಖ ಟೂರ್ನಿಯಲ್ಲಿ ಆರನೆ ಬಾರಿ ಅಂತಿಮ 8ರ ಸುತ್ತು ಪ್ರವೇಶಿಸಿರುವ ರಾವೊನಿಕ್ ಈ ಸಾಧನೆ ಮಾಡಿದ ಕೆನಡಾದ ಮೊದಲ ಆಟಗಾರ.

ಕೊನೆಗೂ ಕ್ವಾರ್ಟರ್‌ಫೈನಲ್‌ಗೆ ನಡಾಲ್ ತೇರ್ಗಡೆ

 ಮೆಲ್ಬೋರ್ನ್, ಜ.23: ಸ್ಪೇನ್‌ನ 9ನೆ ಶ್ರೇಯಾಂಕದ ಆಟಗಾರ ರಫೆಲ್ ನಡಾಲ್ ಎರಡು ವರ್ಷದ ಬಳಿಕ ಆಸ್ಟ್ರೇಲಿಯನ್ ಓಪನ್‌ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ನಡಾಲ್ 2015ರಲ್ಲಿ ಕೊನೆಯ ಬಾರಿ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಅಂತಿಮ-8ರ ಹಂತ ಪ್ರವೇಶಿಸಿದ್ದರು.

ಸೋಮವಾರ ಇಲ್ಲಿ ಸುಮಾರು 3 ಗಂಟೆಗಳ ಕಾಲ ನಡೆದ ಪುರುಷರ ಸಿಂಗಲ್ಸ್‌ನ ಪ್ರಿ-ಕ್ವಾರ್ಟರ್‌ಫೈನಲ್‌ನಲ್ಲಿ 14 ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ನಡಾಲ್ ಫ್ರಾನ್ಸ್‌ನ ಗಾಯೆಲ್ ಮೊನ್‌ಫಿಲ್ಸ್‌ರನ್ನು 6-3, 6-3, 4-6, 6-4 ಸೆಟ್‌ಗಳ ಅಂತರದಿಂದ ಮಣಿಸಿದರು.

2009ರ ಚಾಂಪಿಯನ್ ನಡಾಲ್ 9ನೆ ಬಾರಿ ಮೆಲ್ಬೋರ್ನ್‌ನಲ್ಲಿ ಕ್ವಾರ್ಟರ್‌ಫೈನಲ್ ತಲುಪಿದರು. 2015ರ ಫ್ರೆಂಚ್ ಓಪನ್‌ನ ಬಳಿಕ ಮೊದಲ ಬಾರಿ ಅಂತಿಮ 8ರ ಸುತ್ತು ಪ್ರವೇಶಿಸಿರುವ ನಡಾಲ್ ಮುಂದಿನ ಸುತ್ತಿನಲ್ಲಿ ಕೆನಡಾದ ವಿಶ್ವದ ನಂ.3ನೆ ಆಟಗಾರ ಮಿಲಾಸ್ ರಾವೊನಿಕ್‌ರನ್ನು ಎದುರಿಸಲಿದ್ದಾರೆ.

ನಡಾಲ್ 2014ರಲ್ಲಿ ಫ್ರೆಂಚ್ ಓಪನ್‌ನಲ್ಲಿ ನೊವಾಕ್ ಜೊಕೊವಿಕ್‌ರನ್ನು ಸೋಲಿಸಿದ ಬಳಿಕ ಮೊದಲ ಬಾರಿ ಗ್ರಾನ್‌ಸ್ಲಾಮ್‌ನಲ್ಲಿ ಅಗ್ರ-10 ಆಟಗಾರನನ್ನು ಸೋಲಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News